ಅಭಿಪ್ರಾಯ / ಸಲಹೆಗಳು

ಪುರವಂತಿಕೆ ಮೇಳ

ಪುರವಂತಿಕೆ ಮೇಳ ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಆಚರಣೆ ಮತ್ತು ಕಲೆ. ಈ ಕಲಾವಿದರಿಗೆ ಪುರವಂತರೆಂದೇ ಕರೆಯುತ್ತಾರೆ. ಅಂದರೆ ಪುರಗಳನ್ನು ರಕ್ಷಿಸುವವರೆಂಬ ದನಿ ಇಲ್ಲಿದೆ. ಅಂದರೆ ಪುರಗಳನ್ನು ಹಿಂದೊಮ್ಮೆ ಶತ್ರುಗಳಿಂದ ರಕ್ಷಿಸಲೆಂದೇ ಶಸ್ತ್ರಧಾರಿಗಳಾಗಿದ್ದವರು ಈ ಪುರವಂತರು. ಹಾಗೆಯೇ ಪುರಗಳನ್ನು ನಾಶಪಡಿಸುತ್ತಿದ್ದವರನ್ನು ಪುರಂದರರೆಂದು ಕೆಲವರಾದರೂ ವಿದ್ವಾಂಸರು ಗುರುತಿಸಿದ್ದಾರೆ. ಈ ಪುರವಂತರು ಮತ್ತು ಪುರಂದರರ ಸಂಘರ್ಷದ ಚರಿತ್ರೆಯನ್ನು ಹರಪ್ಪ ನಾಗರಿಕತೆಯ ಮೂಲಕ್ಕೆ ಕೊಂಡೊಯ್ಯವವರೂ ಉಂಟು. ಈಗ ಪಶುಪತಿಯೆಂದು ಸಂಸ್ಕೃತ ಭಾಷೆಯ ಮೂಲಕ ಗುರುತಿಸಲ್ಪಡುವ (ಹರಪ್ಪಾದ ಭಾಷೆ ನಮಗೆ ಗೊತ್ತಿಲ್ಲವಲ್ಲ) ಹರಪ್ಪಾದ ಪ್ರಾಚೀನ ಶಿವನ ಅನುಯಾಯಿಗಳು ಪುರವಂತರಾದರೆ, ಇಂದ್ರಾದಿ ವೇದ ದೇವತೆಗಳೇ ಪುರಂದರರಾಗಿದ್ದವರು. 
 
ಆರ್ಯ ಭಾಷಿಕರಾದ ಕಕೇಷಿಯನ್ ವೈದಿಕರು ಪಾರ್ಸಿಗಳೊಂದಿಗೆ ಬದುಕಲಾರದೆ ಭಾರತದ ವಾಯುವ್ಯ ಭಾಗದಿಂದ ಪ್ರವೇಶಿಸುವಾಗ ಅವರು ಮೊದಲು ಎದುರ್ಗೊಂಡದ್ದು ಹರಪ್ಪಾ ನಾಗರಿಕತೆಯ ಜನರನ್ನೇ. ಈ ಹರಪ್ಪಾ ನಾಗರಿಕತೆ ದ್ರಾವಿಡರದೆಂಬ ವಾದ ಇರುವಂತೆಯೇ ದ್ರಾವಿಡಮೂಲದ್ದಲ್ಲವೆಂಬ ವಾದವೂ ಇದೆ. ಜೊತೆಗೆ ಆಸ್ಟ್ರೋ- ಏಷಿಯಾಟಿಕ್ ಮೂಲದ ಕೋಲಾ-ಮುಂಡಾಗಳದ್ದೋ ಅಥವ ಪ್ರೋಟೋ ದ್ರಾವಿಡಿಯನ್ನರಾದ ಗೊಂಡರ ಸಂಸ್ಕೃತಿಯದ್ದೋ ಆಗಿದ್ದಿರಬಹುದೆಂಬ ಊಹೆಗಳೂ ಇವೆ. ಆದರೂ ಪುರವಂತಿಕೆಯ ಮೂಲವಂತೂ ಹರಪ್ಪಾ ನಾಗರಿಕತೆಯಲ್ಲೇ ತನ್ನ ಬೇರುಗಳನ್ನು ಹೊಂದಿವೆಯೆಂಬುದಂತೂ ನಿಜ. ಅದರ ನಡುವಿನ ಸತ್ಯಸಂಗತಿಗಳು ಇತಿಹಾಸದ ಕತ್ತಲೆಯಲ್ಲಿ ಹುದುಗಿಹೋಗಿವೆ. ಇದು ಈ ಕಲೆಗೆ ಇರುವ ಚರಿತ್ರೆಯ ಆಯಾಮ. ಈ ಪುರವಂತಿಕೆಯ ಮೇಳದೊಂದಿಗೆ ಸಂಗೋಪಿತಗೊಂಡಿರುವ ಮತ್ತೆರಡು ಪೌರಾಣಿಕ ಆಯಾಮಗಳನ್ನೂ ನಾವು ಗುರುತಿಬಹುದಾಗಿದೆ.
 
ಮೊದಲನೆಯದು: ಅಂದಿನ ಆರ್ಯರ ರಾಜನಾಗಿದ್ದ ದಕ್ಷನ ನಿರೀಶ್ವರ ಯಾಗವನ್ನು ಶಿವನ ಜಟೆಯ ಕೂದಲಿಂದ ಜನಿಸಿದ ವೀರಭದ್ರ (ಮೂಲ:ಈರಭದ್ರ) ದ್ವಂಸಗೊಳಿಸಿದ ಪ್ರಸಂಗ. ಎರಡನೆಯದು: ತನ್ನ ಭಕ್ತನಾದ ಹಿರಣ್ಯ ಕಶಿಪುವನ್ನು ಕೊಂದ ಉಗ್ರನರಸಿಂಹನನ್ನು ಶಿವ ಶರಭಾವತಾರದ ಮೂಲಕ ಎದುರ್ಗೊಂಡು ನರಸಿಂಹನ ಶಿರ ತರಿದ ಪ್ರಸಂಗ. ಈ ಎರಡೂ ಪೌರಾಣಿಕ ಪ್ರಸಂಗಗಳೊಂದಿಗೆ ಪುರವಂತಿಕೆಯ ಮೇಳಕ್ಕೆ ಸಂಬಂಧವಿರುವುದರಿಂದಲೇ ಪುರವಂತರು ದಕ್ಷನ ಯಜ್ಞವನ್ನು ಈರಭದ್ರ ತುಳಿದು ಅಪಮಾನಿಸಿ, ಧ್ವಂಸಗೊಳಿಸಿದ ಪ್ರಸಂಗವನ್ನು ಇಂದಿಗೂ ಈರಭದ್ರ ವೇಷಧಾರಿಗಳಾಗಿ ಪುನರಭಿನೀತಗೊಳಿಸಿ ಪ್ರದರ್ಶಿಸುತ್ತಾರೆ. ಹಾಗೆಯೇ ಈರಭದ್ರನ ಒಡಬುಗಳನ್ನು ಹೇಳುವಂತೆಯೇ ಶಿವನ ಶರಭಾವತಾರದ ಕಥೆ, ವರ್ಣನೆಗಳನ್ನು ಸಹ ಹೇಳುವರಲ್ಲದೆ, ಎದೆಯ ಮೇಲೆ ಈರಭದ್ರನ ಹಲಗೆ ಧರಿಸುವುದರೊಂದಿಗೆ ಸೊಂಟದಲ್ಲಿ ಶಿವ ತರಿದು ಹಾಕಿದ ನರಸಿಂಹನ ರುಂಡವನ್ನೂ ಧರಿಸುತ್ತಾರೆಂಬುದು ಗಮನಾರ್ಹ.
 
ಪುರವಂತಿಕೆಯ ಮೇಳದಲ್ಲಿನ ಶಸ್ತ್ರ ಪವಾಡಗಳು ನಮ್ಮ ಸಂಸ್ಕೃತಿ ಚರಿತ್ರೆಯಲ್ಲಿ ಘಟಿಸಿದ್ದಿರಬಹುದಾದ ದಕ್ಷಯಜ್ಞಧ್ವಂಸ, ಇಂದ್ರಾದಿಗಳ ಆಕ್ರಮಣ ಹಾಗೂ ಶರಭಾವತಾರದ ಮೂಲಕ ನರಸಿಂಹನ ತಲೆ ತರಿದ ಪ್ರಸಂಗಗಳಲ್ಲಿನ ಸಮರ ಮತ್ತು ಹಿಂಸೆಯ ಸಂಕೇತಗಳೇ ಆಗಿವೆ. ಆದ್ದರಿಂದಲೇ ಒಂದರ್ಥದಲ್ಲಿ ಪುರವಂತಿಕೆಯನ್ನು ಸಾಂಸ್ಕೃತಿಕವಾದ ಸಮರ ಕಲೆಯೆಂದೇ ನಾವು ಗುರುತಿಸಬೇಕಿದೆ. ಪುರವಂತಿಕೆ ಕಲೆಯನ್ನು ಸಮರ ಕಲೆಯೆಂದೇ ಗುರುತಿಸುವುದು ಸೂಕ್ತ ಮತ್ತು ಅಗತ್ಯ ಕೂಡ.
 
ದಕ್ಷಿಣ ಕರ್ನಾಟಕದಲ್ಲಿ ವೀರಗಾಸೆ, ವೀರಭದ್ರನ ಕುಣಿತ, ಬೀರೇದೇವರ ಕಾಯಿ ಪವಾಡ, ಲಿಂಗದ ವೀರ ಹಾಗೂ ಕಾಸೆ ಕುಣಿತಗಳು ಕೂಡ ಇದೇ ಅರ್ಥದಲ್ಲಿ ಶೈವ ಮೂಲದ ಸಮರ ಕಲೆಗಳೇ. ಆದರೆ ವೇಷಭೂಷಣ ಹಾಗೂ ಆಚರಣೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳಿವೆ.
 
ಪುರವಂತರ ವೇಷಭೂಷಣಗಳು ಸಹ ಮೇಲಿನ ಅಂಶಗಳನ್ನು ಪುಷ್ಟೀಕರಿಸುವಂತೆಯೇ ಇವೆ. ವೀರಗಾಸೆ ಹಾಕಿದ ಕಾವಿ ರೇಷ್ಮೇ ಧೋತ್ರ, (ಕೆಲವೆಡೆ ಚುಡೇದಾರ ಪಾಯಿಜಾಮಿ ಧರಿಸುವುದುಂಟು) ಕಾವಿ ಅಂಗಿಯೊಂದಿಗೆ ನಡುಕಟ್ಟು ಧರಿಸಿರುತ್ತಾರೆ. ಮೈಮೇಲೆ ಗಲೀಫದಂತಹ ವಸ್ತ್ರ ಹಾಕಿಕೊಂಡಿರುತ್ತಾರೆ. ಇದರ ಅಂಚಿನ ಚುಂಗು ಅಲಂಕಾರಿಕವಾಗಿರುತ್ತದೆ. ತಲೆಗೆ ಕಾವಿ ರುಮಾಲು, ತೋಳಿಗೆ ಶಿವನಂತೆಯೇ ನಾಗಾಭರಣಗಳು, ಬೆಳ್ಳಿ ನಾಗರಗಳು, ಎದೆಯಲ್ಲಿ ವೀರಭದ್ರ ದೇವರ ಹಲಗೆ, ದರ್ಪಣ, ನಡುವಿಗೆ ನರಸಿಂಹನ ರುಂಡ ಹಾಗೂ ಇನ್ನಿತರ ರುಂಡಗಳ ಮಾಲೆ, ಸಣ್ಣ ರಕ್ಷಾ ಜೋಳಿಗೆ, ಲತೆಯಲ್ಲಿ ರಣಗೂದಲ ಚೌರಿ, ಪಂಚಮುದ್ರೆಗಳು, ಕೊರಳಲ್ಲಿ ರುದ್ರಾಕ್ಷಿಯ ಸರಗಳು, ಮಣಿಕಟ್ಟುಗಳು, ಹಣೆಗೆ ವಿಭೂತಿ, ಕೈಯಲ್ಲಿ ಖಡ್ಗ ಮತ್ತು ತ್ರಿಶೂಲ, ಕೆಲವೊಮ್ಮೆ ನಿಂಬೆಹಣ್ಣು ಸಿಕ್ಕಿಸಿದ ಪಂಚಲೋಹದ ಶಸ್ತ್ರಗಳು... ಹೀಗೆ ಪುರವಂತರ ವೇಷಭೂಷಣವೇ ಸಮರ ಲಕ್ಷಣಗಳನ್ನು ಒಳಗೊಂಡು ರುದ್ರಮಣೀಯವಾಗಿರುತ್ತದೆ.
 
ಪುರವಂತಿಕೆಯ ಮೇಳಗಳನ್ನು ಪ್ರತ್ಯೇಕವಾಗಿಯೇ ಆಚರಿಸುವುದರೊಂದಿಗೆ ಮದುವೆ ಮೆರವಣಿಗೆ, ದೇವರ ಉತ್ಸವಗಳ ಸಂದರ್ಭಗಳಲ್ಲೂ ಆಚರಿಸುವುದುಂಟು. ಕುಣಿತದ ಮಧ್ಯೆ ವೀರಭದ್ರನ ಒಡಬುಗಳನ್ನು ಹೇಳುತ್ತಾರೆ. ವೀರಭದ್ರನ ಪರಾಕ್ರಮವನ್ನು ವರ್ಣಿಸುವಾಗ ಒಬ್ಬ ಸಹಕಲಾವಿದ ‘ಖಡೇ ಖಡೇ... ಭಲರೇ ಆಹಾ’ ಎಂದು ಕಥನಕಾರನನ್ನು ಹುರಿದುಂಬಿಸುತ್ತಾನೆ. ಅದರ ಜೊತೆಗೆ ಕಥನದ ಪ್ರತಿಗಾಲು ಅಥವ ನುಡಿಗೂ ಸಮಾಳ ದನಿನೀಡುತ್ತಿರುತ್ತಿದೆ. ಈ ಸಮಾಳವು ಕೂಡ ಸಮರ ವಾದ್ಯಗಳ ಲಕ್ಷಣಗಳನ್ನೇ ಒಳಗೊಂಡಿರುವುದು ಕೂಡ ಗಮನಾರ್ಹ. ಸನಾದಿಯೂ ಮೇಳದಲ್ಲಿರುತ್ತದೆ. ಕುಣಿತದಲ್ಲೂ ಕತ್ತಿ ಝಳಪಿಸುವ ವೀರವೇಷದ ಚಲನೆಯನ್ನೇ ಪ್ರದರ್ಶಿಸುತ್ತಾರೆ. ಶಸ್ತ್ರ ಪವಾಡಗಳಲ್ಲಿ ಫಣಿ ಶಸ್ತ್ರ, ನಾಭಿ ಶಸ್ತ್ರ, ಕಂಠ ಶಸ್ತ್ರ, ಗುಪ್ತ ಶಸ್ತ್ರವೆಂಬ ಹತ್ತಾರು ಬಗೆಯ ಶಸ್ತ್ರ ಪವಾಡಗಳನ್ನು ನಡೆಸುತ್ತಾರೆ. ಎದುರುಬದುರಾಗಿ ನಿಂತು ತುಟಿ, ನಾಲಿಗೆಗಳನ್ನು ಶಸ್ತ್ರಗಳಿಂದ ಬಂಧಿಸಿಕೊಳ್ಳುವುದು, ದಾರವನ್ನು ಹೊಟ್ಟೆಯ ಭಾಗದ ಚರ್ಮದ ಮೂಲಕ ಒಳತೂರಿಸಿ ಹೊರತೆಗೆಯುವುದು ಇತ್ಯಾದಿಗಳು ರಣಾಂಗಣದ ಗಾಯಗೊಂಡ ಯೋಧರ ಹರಿದ ದೇಹಭಾಗಗಳನ್ನು ಹೊಲಿಯುವ ಘಟನೆಗಳನ್ನು ನೆನಪಿಸುವಂತಿವೆ. ಕೆಲವು ಕಡೆ ಕುಣಿಯುತ್ತಲೇ ಶಸ್ತ್ರ ಹಾಕಿಕೊಳ್ಳುವ ‘ಗುಗ್ಗುಳ’ ಎಬ್ಬಿಸುವ ಪದ್ಧತಿಯೂ ಇದೆ. ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೋಟೆಯಿಂದ ಮೊದಲ್ಗೊಂಡು ಹಾವೇರಿ, ಧಾರವಾಡ, ಗದಗ್, ಹುಬ್ಬಳ್ಳಿ, ರಾಣಿಬೆನ್ನೂರು ಮುಂತಾದೆಡೆ ಪುರವಂತಿಕೆ ಮೇಳದ ಆಚರಣೆ ಹಾಗೂ ಪ್ರಭಾವ ದಟ್ಟವಾಗಿದೆ.

 

 

 

ಇತ್ತೀಚಿನ ನವೀಕರಣ​ : 13-06-2023 01:24 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080