ಅಭಿಪ್ರಾಯ / ಸಲಹೆಗಳು

ಪಟಾ ಕುಣಿತ

ಜಾನಪದ ಕಲೆ, ಆಚರಣೆಗಳೆಲ್ಲದರ ಮೂಲ ಒಂದೋ ಶೈವ ನೆಲೆಯದ್ದಾಗಿರುತ್ತದೆ. ಇಲ್ಲವೇ ಸ್ಥಳೀಯ ಗ್ರಾಮ ದೇವತೆಗಳದ್ದಾಗಿರುತ್ತದೆ. ಅಪರೂಪಕ್ಕೆಂಬಂತೆ ಕೆಲವು ವೈಷ್ಣವ ಸಂಪ್ರದಾಯದ ವಾಹಕಗಳಾಗಿಯೂ ಬಳಕೆಗೆ ಬಂದಿರುವುದನ್ನು ನಾವು ಗಮನಿಸಬಹುದು.ಪಟದ ಕುಣಿತ ಅಂತಹ ವೈಷ್ಣವ ಸಂಪ್ರದಾಯದ ಕುಣಿತವಾಗಿದೆ.

 

ಹತ್ತು ಹದಿನೈದು ಅಡಿ ಉದ್ದದ ಬಿದಿರಿನ ಕೋಲುಗಳಿಗೆ ಬಣ್ಣ ಬಣ್ಣದ ರೇಷ್ಮೆ ಜಾಲರಿ ಬಟ್ಟೆಯ ಪಟ್ಟಿಗಳನ್ನು ಸುತ್ತಿ ತುದಿಗೆ ಬಣ್ಣದ ಕುಚ್ಚು ಕಟ್ಟಿರುತ್ತಾರೆ. ಕೆಲವೊಮ್ಮೆ ತುದಿಗಳಲ್ಲಿ ಹಿತ್ತಾಳೆ ಅಥವ ಬೆಳ್ಳಿಯ ಛತ್ರಿ ಅಳವಡಿಸುವುದೂ ಉಂಟು.ಒಕ್ಕಲಿಗರಲ್ಲಿ ಪ್ರಚಲಿತದಲ್ಲಿರುವ ಪಟದ ಕುಣಿತ ಹಬ್ಬ, ಜಾತ್ರೆ, ಉತ್ಸವಗಳಲ್ಲಿ ತಮಟೆ, ನಗಾರಿಗಳ ಲಯಬದ್ಧ ಗತ್ತುಗಳೊಂದಿಗೆ ಪ್ರದರ್ಶಿಸಲ್ಪಡುತ್ತದೆ. ಹಾಗೆ ಕುಣಿಯುವಾಗ, ಕುಣಿತದ ಗತಿ ತೀವ್ರವಾಗಿ ತಾರಕಕ್ಕೇರಿದಾಗ ಬಿದಿರಿನ ಕೋಲುಗಳಿಗೆ ಬಿಗಿದ ರೇಷ್ಮೆಯ ಜಾಲರಿಗಳ ಬಾಗು ಬಳುಕಿನ ಹೊಯ್ದಾಡುವುದರಿಂದಷ್ಟೇ ಆ ಕುಣಿತ ಆಕರ್ಷಕ ಹಾಗೂ ಅದಷ್ಟೇ ಅದರ ವಿಶೇಷವೆಂಬಂತಿದೆ. ಉಳಿದಂತೆ ಪಟದಲ್ಲಿ ವೈಷ್ಣವದ ಚಿಹ್ನೆ ಅಥವ ಲಾಂಛನಗಳು ಕೂಡ ಇರುವುದಿಲ್ಲವೆಂಬುದು ಸೋಜಿಗವೇ ಸರಿ.ಆದರೆ ಪಟ ಹೊತ್ತು ಕುಣಿವ ಕಲಾವಿದರು ಮಾತ್ರ ಹಣೆಯಲ್ಲಿ ನಾಮ ಬಳಿದುಕೊಂಡು ಕೊರಳಲ್ಲಿ ಮಣಿಹಾರ ಧರಿಸುತ್ತಾರೆ.ಗಟ್ಟಿ ಬಟ್ಟೆಯ ನವಾರವೆಂಬ ಚೀಲವೊಂದನ್ನು ಹೆಗಲಿಗೆ ನೇತು ಹಾಕಿಕೊಂಡು ಆ ಚೀಲದ ಒಳಗೆ ಪಟದ ತಳಭಾಗವನ್ನಿರಿಸಿಕೊಳ್ಳುತ್ತಾರೆ.ಬಿಳಿಯ ಕಾಸೆ ಪಂಚೆ, ನಿಲುವಂಗಿ, ರುಮಾಲು, ಸೊಂಟ ವಸ್ತ್ರದೊಂದಿಗೆ ಎಡಗೈಯಲ್ಲಿ ಬಿಳಿಯ ಚೌಕವೊಂದನ್ನು ಹಿಡಿದು ಆಡಿಸುತ್ತಿರುತ್ತಾರೆ.ಪಟಾ ಕುಣಿತದಲ್ಲಿ ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಗೋಪುರ ಕುಣಿತ, ಹೂವಿನ ಕುಣಿತಗಳೆಂಬ ಭಿನ್ನ ವಿಧಾನಗಳಿವೆ. ಗೋಪುರ ಕುಣಿತದಲ್ಲಂತೂ ಹಲವು ಮಂದಿ ಪಟದ ಕಲಾವಿದರು ಮಂಡಲಾಕಾರದಲ್ಲಿ ಕುಣಿಯುತ್ತಾ, ಹಿಂದೆ ಮುಂದೆ ಹೆಜ್ಜೆ ಊರಿ ತೀವ್ರಗತಿಯಲ್ಲಿ ಕುಣಿಯುವಾಗ ಇಡೀ ರಂಗಸ್ಥಳದ ತುಂಬಾ ಗೋಪುರಗಳ ಮಿಂಚಿನ ಚಲನೆ ಕಾಣಿಸುತ್ತದೆ. ಹೂವಿನ ಕುಣಿತದಲ್ಲಿ ಕಲಾವಿದರು ಪರಸ್ಪರ ಅಭಿಮುಖರಾಗಿ ವಿವಿಧ ಭಂಗಿಗಳಲ್ಲಿ ಕುಣಿಯುವಾಗಲಂತೂ ರೇಷ್ಮೆ ಕುಚ್ಚು ಮತ್ತು ಗೊಂಡೆಗಳ ಬಣ್ಣ ಬಣ್ಣದ ಹೂಗೊಂಚಲಿನ ಲಯಬದ್ಧ ಚಲನೆಯನ್ನು ನೆನಪಿಗೆ ತರುವಂತಿರುತ್ತದೆ.

 

ಯಾವುದೇ ರೀತಿಯ ಆಚರಣೆಯೊಂದಿಗೂ ತಳುಕು ಹಾಕಿಕೊಂಡಿಲ್ಲದ ಪಟದ ಕುಣಿತವು ಒಂದು ರೀತಿಯಲ್ಲಿ ಶೈವದ ನಂದಿಕೋಲು ಕುಣಿತಕ್ಕೆ ವೈಷ್ಣವದ ಪ್ರತಿಕ್ರಿಯಾತ್ಮಕ ಕುಣಿತವೆಂಬಂತೆಯೇ ರೂಪುಗೊಂಡಂತಿದೆಯಾದರೂ ಅದರ ಸಾಮೂಹಿಕ ಕುಣಿತದ ಸೊಬಗು ಮಾತ್ರ ಅದ್ಭುತವೆಂಬಂತಿರುತ್ತದೆ. ಈ ಪಟದ ಕುಣಿತವು ಕೇವಲ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ರೂಢಿಯಲ್ಲಿದ್ದು ರಾಮಾನುಜಾಚಾರ್ಯರ ನಂತರದಲ್ಲಿ ಹುಟ್ಟಿದ ಕಲೆ ಇದಾಗಿರಬಹುದು.

 

ಇತ್ತೀಚಿನ ನವೀಕರಣ​ : 13-06-2023 02:48 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080