ಅಭಿಪ್ರಾಯ / ಸಲಹೆಗಳು

ಹೆಜ್ಜೆಮೇಳ

ಹಿಂದೂ-ಮುಸ್ಲಿಂ ಸಮನ್ವಯದ ಸಂಕೇತವಾದ ಹೆಜ್ಜೆಮೇಳ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೂಢಿಯಲ್ಲಿದೆ. ಬೀದರ್ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಕಾಣಸಿಗುವ ಹೆಜ್ಜೆಮೇಳ ಕುಣಿತವು ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿಯೇ ರೂಪುಗೊಂಡಿರುವಂತಹದ್ದು. ಮತ್ತೂ ವಿಶೇಷವೇನೆಂದರೆ ಈ ಮೊಹರಂ ಕುಣಿತವಾದ ಹೆಜ್ಜೆಮೇಳದಲ್ಲಿನ ಬಹುತೇಕ ಕಲಾವಿದರು ಹಿಂದೂಗಳೇ. ಮೊಹರಂ ಹಿನ್ನೆಲೆಯಲ್ಲಿ ರೂಪುಗೊಂಡಿರುವಂತಹ ಕುಣಿತವಾದರೂ ಮೊಹರಂ ಆಚರಿಸುವ ಇತರೆಡೆಗಳ ಮುಸ್ಲಿಂ ಬಂಧುಗಳೆಲ್ಲ ಈ ಕುಣಿತವನ್ನು ಪ್ರದರ್ಶಿಸುವುದಿಲ್ಲ. ಇದೇನಿದ್ದರೂ ಸ್ಥಳೀಯ ಜಾನಪದದ ಗತ್ತು-ಮಟ್ಟುಗಳಿಂದ ಕುಡಿಯೊಡೆದಿರುವಂತಹದ್ದು. ದಕ್ಷಿಣ ಕರ್ನಾಟಕದ ಸುಗ್ಗಿ ಕುಣಿತವನ್ನು ಹೆಜ್ಜೆಮೇಳದೊಂದಿಗೆ ಹೋಲಿಸಿ ನೋಡಲಾಗುತ್ತದೆ.

 

ಹೆಜ್ಜೆಮೇಳಕ್ಕೆ ಸಮಸಂಖ್ಯೆಯ ಕಲಾವಿದರಿರಬೇಕಾಗುತ್ತದೆ. ಬಿಳಿಅಂಗಿ, ರುಮಾಲು, ನಡುಪಟ್ಟಿ, ಹಾಗೂ ಬಿಳಿಯ ಪಂಚೆಯ ವೇಷಭೂಷಣವಿರುತ್ತದೆ. ವಿಚಿತ್ರವೇನೆಂದರೆ ಕಲಾವಿದರು ಬಲಗಾಲಿಗೆ ಮಾತ್ರ ಗೆಜ್ಜೆ ಕಟ್ಟಿಕೊಂಡು ಬಲಗೈಯಲ್ಲಿ ಕೋಲು ಹಿಡಿಯುತ್ತಾರೆ. ಎಡಗೈಯಲ್ಲೊಂದು ಬಣ್ಣದ ಕರವಸ್ತ್ರವಿರುತ್ತದೆ. ಕೆಲವೆಡೆ ಎರಡೂ ಕೈಗಳಲ್ಲಿ ಕರವಸ್ತ್ರವೇ ಇರುತ್ತದೆ.

 

ಇದು ಹೇಳಿ ಕೇಳಿ ಹೆಜ್ಜೆಕುಣಿತ. ಹಾಗಾಗಿ ಒಂದೆಜ್ಜೆ, ಎರಡೆಜ್ಜೆ, ಸಾದಾಹೆಜ್ಜೆ, ಸುತ್ತು ಕೋಲ್ಹೆಜ್ಜೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಇಬ್ಬಿಬ್ಬರು ಜೊತೆಯಾಗಿ ಹಲಗೆ-ತಾಳ, ದಿಮ್ಮು, ಜಣಿ ಮತ್ತು ಸನಾದಿಗಳ ಗತ್ತಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತಾರೆ. ಹಿಂದು ಮುಂದಕ್ಕೆ ಚಲಿಸುವುದು, ಒಬ್ಬರ ಸೊಂಟ ಒಬ್ಬರು ಬಳಸಿ ಕರವಸ್ತ್ರ ಮೇಲೆ ಕೆಳಕ್ಕೆ ಬೀಸುವುದು, ಕೋಲನ್ನು ಚಕ್ರಾಕಾರವಾಗಿಯೂ, ವೈಯ್ಯಾರವಾಗಿಯೂ ತಿರುಗಿಸಿ ಕುಣಿತದಲ್ಲಿ ವೈವಿಧ್ಯತೆಯನ್ನು ತೋರುತ್ತಾರೆ.

 

ಹೆಜ್ಜೆಮೇಳದಲ್ಲಿ ವಿಶೇಷ ಆಕರ್ಷಣೆ ಬೈಸಾಕೆ. ಬೈಸಾಕೆಯಲ್ಲಿ ಇಬ್ಬರಿಗೆ ಬದಲಾಗಿ ನಾಲ್ಕುಜನ ಒಂದು ಗುಂಪಾಗುತ್ತಾರೆ. ಪ್ರಾರಂಭದಲ್ಲಿ ಹೆಜ್ಜೆ ಎತ್ತಿಡುತ್ತ ಬಲಭಾಗಗಳಿಗೆ ಮುಖ ತಿರುಗಿಸಿ ಕೈಗಳನ್ನು ಬೀಸುತ್ತಾರೆ. ನಂತರ ನಾಲ್ವರ ಪ್ರತೀ ಗುಂಪಿನಲ್ಲೂ ಇಬ್ಬರು ಕುಳಿತು, ಮತ್ತಿಬ್ಬರು ಅವರ ಮೇಲಿಂದ ಜಿಗಿಯುತ್ತಾರೆ. ಹೀಗೆ ಜಿಗಿದವರು ದಿಕ್ಕು ಬದಲಿಸಿ ಕುಳಿತುಕೊಂಡಾಗ ಮೊದಲು ಕುಳಿತಿದ್ದವರೀಗ ಎದ್ದು ಅವರ ಮೇಲೆ ಜಿಗಿಯುತ್ತಾರೆ. ಬೈಸಾಕೆಯಲ್ಲಿ ಹೀಗೆ ಚುರುಕಿನ ಜಿಗಿತಗಳಾದಾಗಲೂ ಕಲಾವಿದರು ಎಲ್ಲೂ ತಾಳ ತಪ್ಪದಂತಹ ಎಚ್ಚರ ವಹಿಸುತ್ತಾರೆ. ಸನಾದಿವಾದ್ಯದ ತಾಳಗತ್ತಿನಲ್ಲಿ ರಣ ಹಲಗೆಯನ್ನು ಬಾರಿಸುತ್ತ ಹೆಜ್ಜೆಮೇಳ ನಡೆಸುವುದೂ ಒಂದು ಪದ್ಧತಿ.

 

ಸುತ್ತು ಕೋಲು ಹೆಜ್ಜೆ ಎಂಬುದು ಹೆಜ್ಜೆ ಮೇಳದ ಮತ್ತೊಂದು ವಿಶಿಷ್ಟ ಪ್ರಕಾರ. ಬಲಗೈಯಲ್ಲಿ ಹಿಡಿದ ಕೋಲನ್ನು ವಾದ್ಯಗಳ ಗತ್ತಿಗೆ ತಕ್ಕಂತೆ ತಿರುಗಿಸುತ್ತಲೇ ನಡುನಡುವೆ ಪರಸ್ಪರರ ಕೋಲಿಗೆ ಮೂರು ನಾಲ್ಕು ಕುಣುಕು(ತಾಡನ/ಹೊಡೆತ) ಕೊಡುತ್ತಾ ಹೆಜ್ಜೆಗತಿಗೆ ಇಳಿಯುವುದು ಸುತ್ತುಕೋಲಿನ ವಿಶೇಷತೆ. ಎರಡು ಸಾಲಿನಲ್ಲಿ ನಿಂತ ಕಲಾವಿದರು ಜಡೆಕೋಲಿನ ರೀತಿಯಲ್ಲಿಯೇ ಹಗ್ಗವನ್ನೇ ಹಿಡಿದುಕೊಂಡು ಹೆಜ್ಜೆ ಹಾಕುತ್ತಾ ಜಡೆ ಹೆಣೆಯುತ್ತಾರೆ. ಆದರೆ ಇಲ್ಲಿ ಹಗ್ಗವನ್ನು ಮೇಲೆ ಕಟ್ಟಿರುವುದಿಲ್ಲ. ಬದಲಿಗೆ ಸಾಲಿನಲ್ಲಿನ ಮೊದಲ ಇಬ್ಬರು ಹೆಣೆದುಕೊಳ್ಳುವ ಹಗ್ಗವನ್ನು ಹಿಡಿದುಕೊಂಡಿರುತ್ತಾರೆ. ಉಳಿದವರು ಹೆಣಿಕೆಗೆ ತಕ್ಕ ಹೆಜ್ಜೆಗತಿಯಲ್ಲಿ ಕುಣಿದು ಪುನಃ ಅದೇ ಕ್ರಮದಲ್ಲಿಯೇ ಹೆಣಿಗೆ ಬಿಚ್ಚುತ್ತಾರೆ.

 

ಹೆಜ್ಜೆ ಮೇಳದ ಮತ್ತೊಂದು ವಿಶೇಷತೆಯೆಂದರೆ ಎರಡು ಸಾಲುಗಳ ಮಧ್ಯೆ ಕ್ಯಾಕ್ಟಸ್ ಜಾತಿಯ ಮುಳ್ಳುಗಳ ಕೋಲುಗಳನ್ನಿಟ್ಟು ಆ ಕೋಲಿಗೆ ತಾಕಿಸದಂತೆ ಹೆಜ್ಜೆ ಹಾಕಿ ಕುಣಿಯುತ್ತಾರೆ. ಈ ಪ್ರಕಾರ ಈಗೀಗ ಅಪರೂಪವಾಗಿದೆ. ಈ ಮುಳ್ಳಿನ ಕುಣಿತದ ಹಿಂದೆ ಬದುಕಿನ ಸಂದೇಶವಿದೆಯೆಂಬುದು ಅನೇಕರ ಅಭಿಮತ. ಬದುಕಿನ ನಡೆಯಲ್ಲಿ ಎದುರಾಗುವ ಕಷ್ಟಗಳು ಮತ್ತು ಆಸೆ ಆಮಿಷಗಳೇ ಈ ಮುಳ್ಳುಗಳಾಗಿದ್ದು ವಿವೇಕವಂತ ಜನಪದರು ಎಚ್ಚರದಿಂದ ನಡೆಯಬೇಕೆಂಬುದನ್ನು ಈ ಶೈಲಿಯ ಕುಣಿತ ನೆನಪಿಸುತ್ತದೆ. ಈಗದು ಕಣ್ಮರೆಯಾಗುತ್ತಿರುವುದಕ್ಕೂ, ಬದುಕೆಂದರೆ ಬಡವರ ಪಾಲಿಗೆ ಬರೀ ಕಷ್ಟಗಳೇ ಎಂತಾಗಿರುವುದಕ್ಕೂ ಏನಾದರೂ ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲವಾದರೂ ಹೆಜ್ಜೆಮೇಳದ ಹಿಂದಿನ ಒಂದು ಉದಾತ್ತ ಧ್ಯೇಯ ಕಣ್ಮರೆಯಾಯಿತೆಂಬುದು ಕೆಲವರ ಕೊರಗು.

 

ಆದರೆ ನಿಜಕ್ಕೂ ಹೆಜ್ಜೆಮೇಳದ ಮಹತ್ವವಿರುವುದು ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ. ಈ ಜಾನಪದ ಕುಣಿತ ವಹಿಸುತ್ತ ಬಂದಿರುವ ಬಹುಮುಖ್ಯ ಪಾತ್ರದಲ್ಲಿ ಇಂದಿಗೂ ಅನೇಕ ಹೆಜ್ಜೆಮೇಳದ ಕಲಾವಿದರು ಮುಸ್ಲೀಮೇತರರೇ. ಆದರೆ ವಿಶೇಷವಾಗಿ ಕುಣಿವುದು ತಮಗೆ ಧಾರ್ಮಿಕವಾಗಿ ಸಂಬಂಧವಿರದ ಮೊಹರಂ ಹಬ್ಬದಲ್ಲಿ! ಬಹುಶಃ ಕೋಮು ಸಾಮರಸ್ಯವನ್ನು ಕಾಪಾಡುವುದೇ ಮುಳ್ಳಿನ ದಾರೀಲಿ ನಡೆಯುವಾಗ ವಹಿಸಬೇಕಾದ ಕಷ್ಟ ಮತ್ತು ಎಚ್ಚರದಷ್ಟು ಸವಾಲಿನದು ಎಂಬುದೇ ಹೆಜ್ಜೆಮೇಳದ ನಿಜವಾದ ಸಂದೇಶವೆನಿಸುತ್ತದೆ.

 

 

ಇತ್ತೀಚಿನ ನವೀಕರಣ​ : 13-06-2023 02:53 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080