ಅಭಿಪ್ರಾಯ / ಸಲಹೆಗಳು

ಡಮಾಮಿ ಕುಣಿತ

ಪೋರ್ಚುಗೀಸರ ಕಾಲದಲ್ಲಿ ಗೋವಾ ಮೂಲಕ ಕರ್ನಾಟಕಕ್ಕೆ ವಲಸೆ ಬಂದು ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನೆಲೆನಿಂತ ದಕ್ಷಿಣ ಆಫ್ರಿಕಾ ಮೂಲದ ಸಿದ್ದಿ ಜನಾಂಗದ ಅನನ್ಯ ಕಲಾಪ್ರಕಾರ ಡಮಾಮಿ ಕುಣಿತ. ಆಫ್ರಿಕನ್ ಕಪ್ಪು ಜನಾಂಗಗಳಿಗೇ ಮೂಲ ಹಾಗೂ ಪ್ರಾಚೀನವಾದ ಪೂರ್ವೀಕ ಪಿತೃಗಳ ಪೂಜೆಯ ಸಂದರ್ಭ ಡಮಾಮಿ ಕುಣಿತ ಇರಲೇಬೇಕು. ಡಮಾಮಿ ಕುಣಿತದ ಬಹುತೇಕ ಹಾಡುಗಳು ಪ್ರೀತಿ, ಪ್ರೇಮ, ಪ್ರಣಯದ ವಸ್ತುವನ್ನುಳ್ಳಂತಹವು. ಪಿತೃಹಿರಿಯರನ್ನು ಸ್ಮರಿಸುವುದೇ ತಮ್ಮ ಹುಟ್ಟಿಗೆ ಅವರು ಮೂಲ ಕಾರಣಪುರುಷರೆಂಬ ಹಿನ್ನೆಲೆಯಲ್ಲಾದ್ದರಿಂದ, ಡಮಾಮಿ ಕುಣಿತದಲ್ಲೂ ಸಿದ್ದಿಮೊಗಳು ಸೃಷ್ಟಿಕ್ರಿಯೆಗೆ ಕಾರಣವಾಗಬಲ್ಲ ಪ್ರೇಮ ಮತ್ತು ಲೈಂಗಿಕತೆಯ ಕುರಿತಂತೆಯೇ ಹಾಡಿ ನರ್ತಿಸುವುದು ಸಹಜವೇ ಆಗಿದೆ. ಜೇನುಕುರುಬರ ಕೊಂಟು ಪೂಜೆಯೂ ಲೈಂಗಿಕ ಪ್ರಧಾನವಾದ ಪೂರ್ವಿಕ ಪಿತೃಗಳ ಲಿಂಗಪೂಜೆಯೇ ಆಗಿರುವುದನ್ನಿಲ್ಲಿ ಹೋಲಿಸಿ ನೋಡಬಹುದಾಗಿದೆ. ಡಮಾಮಿ ಎಂಬುದೊಂದು ಚರ್ಮವಾದ್ಯ. ಈ ಚರ್ಮವಾದ್ಯವನ್ನು ಒಬ್ಬರು ಅಥವಾ ಇಬ್ಬರು ನುಡಿಸುತ್ತಿದ್ದರೆ, ಮೂರು ನಾಲ್ಕು ಮಂದಿ ತಮ್ಮ ಸಿದ್ದಿಮೊ ಭಾಷೆಯಲ್ಲಿ ಲಯಬದ್ಧ ಹಾಡುಗಳನ್ನು ಹಾಡುತ್ತಿರುತ್ತಾರೆ. ಡಮಾಮಿ ವಾದ್ಯವು ಸಿದ್ದಿಮೊಗಳಿಗೆ ವಿಶಿಷ್ಟವಾದ ವಾದ್ಯವಾಗಿದ್ದು, ನಮ್ಮ ಜಾನಪದದ ಬೇರೆ ಯಾವ ಪ್ರಕಾರದಲ್ಲೂ ಅಂತಹ ವಾದ್ಯ ಕಂಡು ಬರುವುದಿಲ್ಲ. 

            ಡಮಾಮಿ ಕುಣಿತ ಮಹಿಳಾ ಪ್ರಧಾನವಾದುದಾದರೂ ಪುರುಷರೂ ಕಲೆಯ ಆಸಕ್ತಿಯ ಕಾರಣದಿಂದಾಗಿ ಭಾಗವಹಿಸುತ್ತಾರೆ. ಹಿಂದೆ ಪುರುಷನ ಧಿರಿಸನ್ನು ಮಹಿಳೆಯರೇ ತೊಟ್ಟು ಪುರುಷ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಕುಣಿಯುವಾಗ ಸಿದ್ದಿಮೊಗಳು ತಮ್ಮ ಪೂರ್ವಿಕರ ನೆನಪುಗಳಂಗವಾಗಿ ವೇಷಭೂಷಣ, ಪ್ರಸಾಧನಗಳನ್ನು ಕೂಡ ಆದಿಮಾನವರ ಅಥವಾ ಬೇಟೆಯ ಹಂತದ ಹೋಮೋಸೇಪಿಯನ್ನರಿಗೆ ಅನುಗುಣವಾಗುವ ರೀತೀಲಿ ಪ್ರದರ್ಶಿಸುವುದು ಅವರ ಬುಡಕಟ್ಟು ಲಕ್ಷಣಗಳಿಗೆ ಸಹಜವಾದುದೇ ಆಗಿದೆ. ಡಮಾಮಿ ಕುಣಿತದಲ್ಲಿ ನವಿಲುಗರಿ, ಮುಚಾಕೆ ಎಂಬ ತೆಂಗಿನ ಬುರುಡೆ, ಮಡಕೆಗೆ ಬದಲಾಗಿ ಈಗೀಗ ಪ್ಲಾಸ್ಟಿಕ್ ಬಿಂದಿಗೆಗಳನ್ನು ಬಳಸುವುದುಂಟು. ಬರಿಗೈನ ನೃತ್ಯವೂ ಉಂಟು. ಡಮಾಮಿಯೊಂದಿಗೆ ಭವಾಂಗರ್ ಮತ್ತು ಮುಜಾಕೋ ಎಂಬ ವಾದ್ಯಗಳು ಇರುತ್ತವೆ.

ಸಿದ್ದಿಮೊಗಳನ್ನು ಗುಲಾಮರನ್ನಾಗಿ ಗೋವಾಗೆ ಕರೆತರುವ ಮಾರ್ಗ ಮಧ್ಯದಲ್ಲಿ ಜಿಂಜೀಬಾರ್ ಎಂಬ ದ್ವೀಪದಲ್ಲುಳಿದಿದ್ದಾಗ ಅಲ್ಲಿನ ನ್ಯಾಸ ಎಂಬ ಸರೋವರದ ಬಳಿ ಪೂರ್ವಿಕ ಪಿತೃಗಳ ಸಂಕೇತ ಮತ್ತು ನೆನಪಾಗಿ ಎರಡು ಕರಿಕಲ್ಲುಗಳನ್ನು ಪೂಜಿಸುತ್ತಿದ್ದರು. ಅವು ಬಹುಶ: ಪೂರ್ವಿಕ ಪಿತೃಗಳ ಜನನೇಂದ್ರಿಯದ ಕುರುಹಾದ ಲಿಂಗಗಳೇ ಆಗಿದ್ದಾವು.

ಹೀಗೆ ಸಿದ್ದಿಗಳು ಮೂಲ ತಾಯ್ನೆಲ, ತಾಯಿನುಡಿ ಹಾಗೂ ತಾಯಿಧರ್ಮದಿಂದ ದೂರವಾದಷ್ಟೂ ಮಾನಸಿಕವಾಗಿ ಸಮೀಪವಾಗಿ ತಮ್ಮ ನೆನಪುಗಳ ಬಾಗಿಲು ತೆರೆವುದೇ ಡಮಾಮಿ ಎಂಬ  ಚರ್ಮವಾದ್ಯದ ಬಡಿತಗಳಿಂದ. ಚರ್ಮವಾದ್ಯಗಳು ಹುಟ್ಟಿರುವುದೇ ದುಡಿದು ಸುಣ್ಣವಾದ ಮನಸುಗಳ ದಣಿವು, ಯಾತನೆ, ದು:ಖ ಮತ್ತು ಹತಾಶೆಗಳನ್ನು ನಾದದ ಅಮಲಿನ ಮೂಲಕ ಅನುಸಂಧಾನ ಮಾಡಲಿಕ್ಕೆ. ಹಾಗೆ ನೋಡಿದರೆ ಚರ್ಮವಾದ್ಯಗಳ ಮೂಲ ಕೂಡ ಆಫ್ರಿಕವೇ. ಆಫ್ರಿಕನ್ನರ ಬೇಟೆಯ ಹಂತದ ಕಲಾವಾದ್ಯವಿದು. ಡಮಾಮಿಯ ನಾದ ಸಿದ್ದಿಮೊ ಪೂರ್ವಿಕರಿಂದ ಬಳುವಳಿಯಾಗಿ ಬಂದ ಕರುಳ ತುಡಿತಗಳೇನೋ ಎಂಬಷ್ಟು ಜತನವಾಗಿ ಸಿದ್ಧಿಗಳು ಇಂದಿಗೂ ಆ ನಾದವನ್ನು ಎದೆಗಪ್ಪಿಕೊಂಡೇ ಬಂದಿದ್ದಾರೆ. ಜೀತದಾಳುಗಳಾಗಿ, ಗುಲಾಮರಾಗಿ ಭಾರತಕ್ಕೆ ಕಾಲಿಟ್ಟ ಸಿದ್ದಿಮೊಗಳು ಯಜಮಾನ ಸಂಸ್ಕೃತಿಯ ಭೀತಿಗಳಿಂದಾಗಿ ಮತಾಂತರಗೊಂಡರು.

ಪೋರ್ಚುಗೀಸರಿಂದ ಕೆಲವರು ಕ್ರೈಸ್ತರಾದರು, ಬಹಮನಿಗಳಿಂದ ಮತ್ತೆ ಕೆಲವರು ಮುಸ್ಲಿಮರಾದರು, ಉತ್ತರ ಕನ್ನಡ ಜಿಲ್ಲೆಯ ಭೂಮಾಲೀಕರಿಂದಾಗಿ ಅಳಿದುಳಿದವರು ಹಿಂದೂಗಳಾದರು. ಆದರೆ ಈ ಎಲ್ಲಾ ಧರ್ಮಗಳಾಚೆಗೆ ಅವರನ್ನು ಕಳ್ಳುಬಳ್ಳಿಗಳನ್ನಾಗಿಯೇ ಬೆಸೆದಿರುವುದು ತಾವೆಲ್ಲರೂ ಮೂಲ ಸಿದ್ದಿಮೊಗಳೆಂಬ ಚರಿತ್ರೆಯ ಸತ್ಯ, ಸಮಾನ ದು:ಖಿಗಳೆಂಬ ಅರಿವು. ಅಸ್ಮಿತೆ- ಆತ್ಮಗೌರವದಂತಹ ಈ ಎಲ್ಲಾ ಭಾವನೆಗಳ ಸಂಕೇತವೇ ಇಂದು ಡಮಾಮಿ ವಾದ್ಯವಾಗಿದೆ. ನ್ಯಾಸ, ಅಂದರೆ ಕೆಡುಕು ಶಕ್ತಿಯಿಂದ ರಕ್ಷಣೆ ಪಡೆಯುವ ಸಲುವಾಗಿಯೇ ಸಿದ್ದಿಮೊಗಳು ಸಿದ್ದಿನ್ಯಾಸ ಎಂಬ  ಪೂರ್ವಿಕ ಪಿತೃ ಪೂಜೆಯ ಜಾತ್ರೆಯನ್ನಿಂದು ನಡೆಸುತ್ತಿದ್ದಾರೆ. ಈ ಸಿದ್ದಿನ್ಯಾಸ ಹಿಂದು ಆಚರಣೆಯೂ ಅಲ್ಲ; ಮುಸ್ಲಿಂ ಆಚರಣೆಯೂ ಅಲ್ಲ ಮತ್ತು ಕ್ರೈಸ್ತ ನಡವಳಿಕೆಯೂ ಅಲ್ಲವಾದ್ದರಿಂದ ಈ ಸಿದ್ದಿ ನ್ಯಾಸದಲ್ಲಿ ಮೂರು ಧ‍‍ರ್ಮಗಳಲ್ಲೂ ಹಂಚಿಹೋಗಿರುವ ಎಲ್ಲ ಸಿದ್ದಿಮೊಗಳೂ ಭಾಗವಹಿಸುತ್ತಾರೆ. ಡಮಾಮಿ ವಾದ್ಯ ಮತ್ತು ಕುಣಿತದ ಸೆಳೆತ ಅಂತಹುದು. ದೂರದ ಆಫ್ರಿಕಕ್ಕೆ ಕೇಳಿಸುವಂತೆ, ತಮ್ಮ ಪೂರ್ವಿಕರಿಗೂ ನೆನಪು ಬಡಿದೆಬ್ಬಿಸುವಂತೆ ಎಲ್ಲ ಸಿದ್ದಿಮೊಗಳೂ ಡಮಾಮಿ ಎಂಬ ಜಾತ್ಯಾತೀತ ವಾದ್ಯ ನುಡಿಸಿ, ಕುಣಿವುದನ್ನು ನೋಡುವುದೇ ನಿಜಕ್ಕೂ ಆನಂದ. ಇತ್ತೀಚೆಗೆ ಡಮಾಮಿ ಕುಣಿತದಲ್ಲಿ ಬೇರೆ ಬಗೆಯ ಹಾಡುಗಳೂ ಸೇರ್ಪಡೆಗೊಂಡಿವೆ.

 

 

 

 

ಇತ್ತೀಚಿನ ನವೀಕರಣ​ : 13-06-2023 01:17 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080