ಅಭಿಪ್ರಾಯ / ಸಲಹೆಗಳು

ಬುಡಬುಡುಕೆಯವರು

ಬುಡುಬುಡುಕಿ (ಕೆ) ಕಲೆ ಗೊಂದಲಿಗ ಪಂಗಡಕ್ಕೆ ಸೇರಿದ ಮರಾಠಿಗರಲ್ಲಿ ಕಂಡು ಬರುತ್ತದೆ. ಈ ಕಲೆಯ ಕಲಾವಿದರು ನಾಡಿನ ಬಹುತೇಕ ಕಡೆಗಳಲ್ಲಿ ಸಿಗುತ್ತಾರೆ. ಶಕುನ ಹೇಳಿಕೊಂಡು ಜೀವನ ಸಾಗಿಸುವ ಈ ಕಲಾವಿದರಿಗೆ ನರಸಣ್ಣ ಎಂದೂ ಕರೆಯುತ್ತಾರೆ. ಇವರು ತಮ್ಮ ಕಲೆಯಲ್ಲಿ ಮುಖ್ಯವಾಗಿ ಪುಟ್ಟ ಡಮರುಗದ ಆಕೃತಿಯ ಚರ್ಮವಾದ್ಯವನ್ನು ಬಳಸುತ್ತಾರೆ. ಬುಡುಬುಡಿಕೆ ಎಂಬ ಹೆಸರು ಅನುಕರಣ ಪದ ಎಂದೆನಿಸುತ್ತದೆ.

 

ಬುಡುಬುಡಿಕೆ ಚರ್ಮದಿಂದ ಮಾಡಿದ ವಾದ್ಯ. ಸಣ್ಣ ಡಮರುವಿನ ಆಕಾರದಲ್ಲಿರುತ್ತದೆ. ಸಾಗವಾಣಿಕೆ ಕಟ್ಟಿಗೆಯನ್ನು ನಡುವೆ ಚಿಕ್ಕದಾಗಿ ಕೊರೆದು ಎರಡೂ ಮಗ್ಗಲು ಬಾಯಿ ದೊಡ್ಡದಾಗುವಂತೆ ನಡುವೆ ಪೊಳ್ಳಾಗಿ ಸಿಲಿಂಡರಿನಂತೆ ಮಾಡಿ ತಯಾರಿಸುತ್ತಾರೆ. ಬಿಗಿಯುವ ದಾರಕ್ಕೆ ಬದ್ದೆದಾರ ಎಂದು ಹೆಸರು.

 

ವಾದ್ಯದ ಎರಡೂ ಮುಖಗಳಲ್ಲಿ ಬದ್ದೆದಾರವನ್ನು ಎಂಟು ಅಥವಾ ಹತ್ತು ಭಾಗಗಳನ್ನಾಗಿ ಮಾಡಿ ಪೋಣಿಸಿರುತ್ತಾರೆ. ಈ ದಾರದ ತುಂಡುಗಳು ಬಡಿಯುವ ತುದಿಗೆ ಮೇಣವನ್ನು ಅಂಟಿಸಿರುತ್ತಾರೆ. ಈ ಮೇಣದ ಗಂಟುಗಳು ಬುಡುಬುಡಿಕಿಯ ಎರಡೂ ಮುಖದ ಮಧ್ಯದಲ್ಲಿ ಬಡಿಯುವಂತೆ ಕಟ್ಟಿರುತ್ತಾರೆ. ಇವುಗಳಿಗೆ “ತಾಳು” ಗಳೆಂದು ಹೆಸರು. ವಾದ್ಯದ ಟೊಳ್ಳಾಗಿರುವ ಮಧ್ಯಭಾಗವನ್ನು ಗಟ್ಟಿಯಾಗಿ ಹಿಡಿದು ಅಲ್ಲಾಡಿಸಿದಾಗ ಆಧಾರದ ಗಂಟುಗಳು ಎರಡೂ ಮುಚ್ಚಳಿಕೆಗಳ ಮೇಲೆ ಬಡಿದು ನಾದ ಬರುತ್ತದೆ. ಈ ನಾದ ಲಯಬದ್ಧವಾಗಿಬರುವಂತೆ ಕಲಾತ್ಮಕವಾಗಿ ಬುಡುಬುಡುಕೆಯವರು ಬಾರಿಸುತ್ತಾರೆ. ಅನುಕೂಲಕ್ಕೆ ತಕ್ಕಂತೆ ಸಣ್ಣವಸ್ತ್ರವನ್ನು ಒಂದೆರಡು ಗೆಜ್ಜೆಗಳನ್ನು ಸುಂದರವಾಗಿ ಕಾಣುವಂತೆ ಕಟ್ಟಿರುತ್ತಾರೆ.

 

ತಲೆಗೆ ಪೇಟ, ಉದ್ದನೆಯ ನಿಲುವಂಗಿ, ಕೋಟು, ಕಚ್ಚೆಪಂಚೆ, ಸೊಂಟಕ್ಕೆ ವಸ್ತ್ರ, ಕಂಕುಳಲ್ಲಿ ಹಿಂದು ಮುಂದು ಇಳಿಬಿಟ್ಟಿರುವಜೋಳಿಗೆ ಚೀಲಗಳು, ಹೆಬ್ಬೆರಳಿನಲ್ಲಿ ಗಗ್ಗರ, ಕೈಗೆ ಕಡಗ ಅಥವಾ ಗೆಜ್ಜೆ, ಉದ್ದನೆಯ ನಾಮ ಇವಿಷ್ಟು ಬುಡುಬುಡುಕೆಯ ವೇಷಭೂಷಣಗಳು. ತಮ್ಮತಮ್ಮಲ್ಲಿಯೇ ಊರುಗಳನ್ನು ಹಂಚಿಕೊಂಡಿರುತ್ತಾರೆ. ತಮಗೆ ಸಂಬಂಧಿಸಿದ ಗೌಡ, ಕುಲಕರ್ಣಿ, ಪಟೇಲ ಮೊದಲಾದವರಿಂದ ಪಣಕಟ್ಟಲು ಒಪ್ಪಿಗೆ ಪಡೆಯುತ್ತಾರೆ.

 

ಬುಡುಬುಡಿಕೆಯವರು ಪ್ರತಿನಿತ್ಯ ಕೋಳಿ ಕೂಗುವ ಮೊದಲೇ ಎದ್ದು ದೇವರನ್ನು ಪೂಜಿಸಿ, ವೇಷಧರಿಸಿ, ಹಳ್ಳಿಹಳ್ಳಿಗೆ ಹೋಗಿ ಶಕುನ ನುಡಿಯುತ್ತಾರೆ.  ಈ ಶಕುನವನ್ನು “ಹಾಲಕ್ಕಿ ಶಾಸ್ತ್ರ” ಎಂದು ಹೇಳುತ್ತಾರೆ. ಈ ಶಾಸ್ತ್ರ ಸತ್ಯವಾಗುತ್ತದೆ ಎಂಬ ನಂಬಿಕೆ ಕಲಾವಿದರದು. ಪ್ರತಿ ಮನೆಯ ಬಾಗಿಲಿಗೆ ಹೋಗಿ ತಮ್ಮ ವಾದ್ಯ ನುಡಿಸಿಕೊಳ್ಳುತ್ತಾ “ ಜಯವಾಗಲಿ ಸ್ವಾಮಿ,  ಜಯವಾಗಲಿ ಸ್ವಾಮಿ” ಎಂದು ಶುಭವನ್ನು ಹಾರೈಸುತ್ತ ಶಕುನ ನುಡಿಯುತ್ತಾರೆ. “ಶ್ರೀ ಕೃಷ್ಣ ನುಡಿಸಿದಂತೆ ನುಡಿಯುತ್ತೇವೆ” ಎನ್ನತ್ತಾರೆ. ಜನರ ಶುಭಾಶುಭಗಳನ್ನು ಬಹು ಜಾಣ್ಮೆಯಿಂದ ಹೇಳುವ ಇವರು ಅಶುಭ ಇದ್ದಾಗ ಅದಕ್ಕೆ ಶಾಂತಿ ಪರಿಹಾರವನ್ನೂ ಸೂಚಿಸಬಲ್ಲವರು.

 

ಇವರು ಮಧ್ಯರಾತ್ರಿಯಲ್ಲಿ ಸ್ಮಶಾನಕ್ಕೆ ಹೋಗುವುದಾಗಿಯೂ ಅಲ್ಲಿ ಹಾಲಕ್ಕಿ ನುಡಿಯುವುದನ್ನು ಆಲಿಸಿ, ಇದನ್ನು ಬೆಳಗಿನ ಜಾವ ಊರ ಬೀದಿಗಳಲ್ಲಿ ಏಕಾಂಗಿಯಾಗಿ ಬುಡುಬುಡಿಕೆ ನುಡಿಸುತ್ತಾ ಪ್ರಸಾರ ಮಾಡುವುದಾಗಿಯೂ ಹೇಳುತ್ತಾರೆ. ಶಕುನ ನುಡಿಯುವ ಹಾಲಕ್ಕಿಯ ಭಾಷೆ ಬುಡುಬುಡಿಕೆಯವರಿಗೆ ಮಾತ್ರ ಅರ್ಥವಾಗುತ್ತದೆ ಎಂಬ ನಂಬಿಕೆಯಿದೆ.

 

 

 

 

ಇತ್ತೀಚಿನ ನವೀಕರಣ​ : 13-06-2023 03:06 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080