ಅಭಿಪ್ರಾಯ / ಸಲಹೆಗಳು

ಅಧ್ಯಕ್ಷರು

ಶ್ರೀ. ಎಚ್.ಎಲ್. ನಾಗೇಗೌಡ (1980 - 83)

1980 ರ ನವೆಂಬರ್ 3 ರಂದು ಪ್ರಾರಂಭವಾದ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಅನೇಕ ವೇದಿಕೆಗಳ ಮೂಲಕ ಇಂತಹ ಅಕಾಡೆಮಿಯ ಸ್ಥಾಪನೆಗಾಗಿ ಒತ್ತಾಯಿಸುತ್ತಿದ್ದ ಎಚ್.ಎಲ್. ನಾಗೇಗೌಡರೇ ಪ್ರಥಮ ಅಧ್ಯಕ್ಷರಾಗಿ ಸರ್ಕಾರದಿಂದ ನಾಮಕರಣಗೊಂಡರು. ಮಂಡ್ಯ ಜಿಲ್ಲೆ ಹೆರಗನಹಳ್ಳಿಯಲ್ಲಿ 1951 ರ ನವೆಂಬರ್ 2 ರಂದು ಜನಿಸಿದ ನಾಗೇಗೌಡರು ಕಥೆ, ಕಾದಂಬರಿಯಂತಹ ಸೃಜನಶೀಲ ಪ್ರಕಾರಗಳಲ್ಲೂ ಕೃಷಿ ಮಾಡಿದವರು. ‘ಪ್ರವಾಸಿ ಕಂಡ ಇಂಡಿಯಾ’ದ ಹನ್ನೊಂದು ಸಂಪುಟಗಳ ಅನುವಾದದ ಮೂಲಕ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನಕಾರರಿಗೆ ಉಪಚರಿಸಿದವರು. ಸೋಬಾನೆ ಚಿಕ್ಕಮ್ಮನ ಪದಗಳು, ಪದವವೆ ನಮ್ಮ ಎದೆಯಲ್ಲಿ, ಹೆಳವರು ಮತ್ತು ಅವರ ಕಾವ್ಯಗಳು ಕೃತಿಗಳ ಮೂಲಕ ಜಾನಪದಾಸಕ್ತರ ಗಮನ ಸೆಳೆದವರು. ನಿವೃತ್ತಿಯ ಬಳಿಕ ಜಾನಪದ ಟ್ರಸ್ಟ್ ಮತ್ತು ಜಾನಪದ ಲೋಕ ಅವರ ಸಾಧನೆಗೆ ಸಾಕ್ಷಿ. ಎರಡು ಅವಧಿಗೆ ನಾಗೇಗೌಡರೇ ಅಧ್ಯಕ್ಷರಾಗಿ ಮುಂದುವರೆದರು.          ಕಲಾಮೇಳಗಳ ಆಯೋಜನೆ, ವಿಚಾರ ಸಂಕಿರಣ, ಸಮ್ಮೇಳನ, ಗೀತೆಗಳ ದ್ವನಿ ಮುದ್ರಣ, ಕಲೆಗಳ ದೃಶ್ಯಮಾಧ್ಯಮದ ಮೂಲಕ ದಾಖಲೀಕರಣ, ಶಿಷ್ಯವೇತನ, ವೇಷಭೂಷಣ, ವಾದ್ಯ ಪರಿಕರಗಳಿಗೆ ಆರ್ಥಿಕ ನೆರವು, ಗೀಗೀ ಸಮ್ಮೇಳನ, ಮೂಡಲಪಾಯ ಬಯಲಾಟ ಮೇಳ, ಅಖಿಲ ಕರ್ನಾಟಕ ಜಾನಪದ ಸಮಾವೇಶಗಳು, ಹಿರಿಯ ಹೊಸ ಪುಟವನ್ನೇ ತೆರೆದಿಟ್ಟರು.

ಡಾ.ಎಸ್.ಕೆ. ಕರೀಖಾನ್ (1987 - 90)

 

  ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ 1904 ರಂದು ಜನಿಸಿದ ಅಪ್ಪಟ ಜಾನಪದ ಮನಸ್ಸಿನ ಎಸ್.ಕೆ. ಖರೀಖಾನ್ ಅವರು ಜನಪದ ಗೀತೆಗಳ ಸಂಗ್ರಹ, ಪ್ರಕಟಣೆ ಹಾಗೂ ಗಾಯನದಿಂದಲೇ ನಾಡಿನಾದ್ಯಂತ ಹೆಸರು ಮಾಡಿದವರು. ಸ್ವಾತಂತ್ರಯ ಹೋರಾಟದಲ್ಲೂ ಭಾಗವಹಿಸಿದ್ದ ಕರೀಖಾನರಿಗೆ ಕನ್ನಡದೊಂದಿಗೆ ಸಂಸ್ಕೃತ ಭಾಷೆಯಲ್ಲೂ ಪ್ರಭುತ್ವವಿತ್ತು. ಚಲನಚಿತ್ರಗಳಿಗೆ ಸಂಭಾಷಣೆ ಮತ್ತು ಗೀತ ರಚನೆಯ ಮೂಲಕವೂ ಅವರು ಕನ್ನಡ ಮನಸ್ಸುಗಳಿಗೆ ಆಪ್ತರಾಗಿದ್ದರು. ಸಾಹಿತ್ಯ ಮತ್ತು ಅನುವಾದ ಕ್ಷೇತ್ರದಲ್ಲೂ ಪರಿಣತಿ ಹೊಂದಿದ್ದ ಕರೀಂಖಾನರ ಜಾನಪದ ಸೊಗಡಿನ ಸಜ್ಜನಿಕೆಯ ವ್ಯಕ್ತಿತ್ವವನ್ನು ಗುರುತಿಸಿ 1987 ರಲ್ಲಿ ಸರ್ಕಾರ ಅವರನ್ನು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಎರಡನೆಯ ಅಧ್ಯಕ್ಷರನ್ನಾಗಿ ನೇಮಿಸಿತು. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗೌರವ ಡಾಕ್ಟರೇಟ್ ಗೂ ಕರೀಂಖಾನರು ಪಾತ್ರರಾಗಿದ್ದರು.

           ಗಿರಿಜನ ಬದುಕಿನ ವಿಡಿಯೋ ಚಿತ್ರೀಕರಣ, ಜಾತ್ರಗಳ ಚಿತ್ರೀಕರಣ, ವಿವಿಧ ಕಮ್ಮಟ ಹಾಗೂ ವಿಚಾರ ಸಂಕಿರಣಗಳೊಂದಿಗೆ ಜಾನಪದ ಆಟಗಳ ಕುರಿತಂತೆ ವಿಚಾರ ಗೋಷ್ಠಿ ಏರ್ಪಡಿಸಿದ್ದು, ಜಾನಪದದ ವೈಜ್ಞಾನಿಕ ನೆಲೆಗಳ ಸಂಕಿರಣ ಮತ್ತು ಆ ಕುರಿತ ಕೃತಿಗಳ ಪ್ರಕಟಣೆಯೊಂದಿಗೆ ‘ ಗೆಜ್ಜೆ ಮಾತಾಡುತಾನೆ’ ಎಂಬ ಸ್ಮರಣ ಸಂಚಿಕೆಯನ್ನು ಹೊರತಂದಿದ್ದು ಕರೀಂಖಾನರ ಮುಖ್ಯ ಸಾಧನೆಗಳು.

ಡಾ.ಜೀ.ಶಂ. ಪರಮಶಿವಯ್ಯ (1991 - 95)

 

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಅಂಬಲಜೀರ ಹಳ್ಳಿಯಲ್ಲಿ 1933 ರಂದು ಜನನ. ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಪ್ರಾಧ್ಯಾಪಕರಾಗಿ ಸೇವೆ. ವ್ಯಾಪಕ ಕ್ಷೇತ್ರ ಕಾರ್ಯದ ಮೂಲಕ ಅಜ್ಞಾತವಾಗಿದ್ದ ಜಾನಪದ ವೃತ್ತಿಗಾಯಕ ಪರೆಂಪರೆಗಳನ್ನು ಶೋಧಿಸಿದವರು. ಹಲವಾರು ಮಹತ್ವದ ಜಾನಪದ ಕಾವ್ಯ, ಕಥೆ, ಬಂಡಾಕಾವ್ಯ, ಮಹಾಕಾವ್ಯಗಳ ಸಂಪಾಧನೆ ಮತ್ತು ಪ್ರಕಟಣೆ. ಜಾನಪದ ಅಧ್ಯಯನಕ್ಕೆ ಅಕಾಡೆಮಿಕ್ ಗಾಂಭೀರ್ಯ ತಂದಿತ್ತ ಜೀಶಂಪ ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಜಾನಪದ ವಲಯವನ್ನು ವಿಸ್ತರಿಸಿದವರು.

ಜನಪದ ಕಲೆಗಳ ಪುನರ್ ಸಂಘಟನೆ, ಕಿರಿಯರಿಗೆ ತರಬೇತಿಯೊಂದಿಗೆ ಕಲಾಮೇಳಗಳನ್ನು ಸಂಘಟಿಸಿದ್ದು, ಶಿಬಿರ, ವಿಚಾರಸಂಕಿರಣದೊಂದಿಗೆ ಪುಸ್ತಕ ಪ್ರಕಟಣೆಗೆ ಆಧ್ಯತೆ ನೀಡಿದ್ದು, ‘ಒಂದು ಹಳ್ಳಿಯ ಜಾನಪದ’ ದಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ರೂಪಿಸಿದ್ದು, ನವರಾತ್ರಿ ಜಾನಪದ ರಂಗೋತ್ಸವವನ್ನು ಸಂಘಟಿಸಿದ್ದು, ವಿದೇಶೀ ತೊಗಲು ಗೊಂಬೆಗಳ ಪ್ರಾತ್ಯಕ್ಷಕೆ, ಮೈಸೂರು ದಸರಾ ಉತ್ಸವದಲ್ಲಿ ಜಾನಪದ ಕಲೆಗಳ ಪ್ರದರ್ಶನಾವಕಾಶಕ್ಕೆ ಪರಿಶ್ರಮಿಸಿದ್ದು, ‘ಮರೆಯಲಾಗದ ವಿದ್ವಾಂಸರು’ ಎಂಬ ಶೀರ್ಷಿಕೆಯ ಎರಡು ಕೃತಿಗಳ ಪ್ರಕಟಣೆ ಜೀಶಂಪ ಅವರ ಪ್ರಮುಖ ಸಾಧನೆಗಳಾಗಿವೆ.

ಡಾ. ಎಚ್.ಜೆ. ಲಕ್ಕಪ್ಪಗೌಡ (1995 - 98)

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹಂಪಾಪುರದಲ್ಲಿ ಜನನ. (1935) ಕುವೆಂಪು ವಿಶ್ವವಿದ್ಯಾಯಲದಲ್ಲಿ ಪ್ರಾಧ್ಯಾಪಕರಾಗಿ ಸೇವೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ನಿವೃತ್ತಿ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ. ಜಾನಪದ ಸಾಹಿತ್ಯ ಸಂಗ್ರಹದೊಂದಿಗೆ ಅದರಲ್ಲೇ ಕೃಷಿ ನಡೆಸಿದವರು.

‘ಜನಪದ ಸಮಾಚಾರ’ ವೆಂಬ ವಾರ್ತಾಪತ್ರದ ಪ್ರಕಟಣೆಯ ಪ್ರಾರಂಭ ಶಿಷ್ಟ, ಸಾಹಿತ್ಯ ಮತ್ತು ಜನಪದ ಸಂವೇದನೆ ಎಂಬ ಕೃತಿ ಮಾಲಿಕೆ ಪ್ರಕಟಣೆ, ಸುವರ್ಣ ಜಾನಪದವೆಂಬ ಎರಡು ಸಂಪುಟಗಳ ಪ್ರಕಟಣೆ, ‘ಫ್ಲೋಕ್ ಲೋರ್ 150 ಮತ್ತು ಜಾನಪದ 30’ ಎಂಬ ವಿಶಿಷ್ಟ ವಿಚಾರ ಸಂಕಿರಣ, ಅಖಿಲ ಭಾರತ ಜಾನಪದ ಸಮಾವೇಶ, ದಾಖಲಾತಿ ಮತ್ತು ದ್ವನಿಮುದ್ರಣ ಕಾರ್ಯಗಳ ಮುಂದುವರಿಕೆ, ಜಾನಪದ ಕಲೆಗಳ ಸಾಕ್ಷ್ಯಾಚಿತ್ರ ನಿರ್ಮಾಣ, ಜಾನಪದ ಸಾಂಸ್ಕೃತಿಕ ನೀತಿಯನ್ನು ರೂಪಿಸಿ ಸರ್ಕಾರಕ್ಕೆ ಸಲ್ಲಿಸಿದ ಲಕ್ಕಪ್ಪಗೌಡರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದಲೂ ಆರ್ಥಿಕ ನೆರವು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಡಾ. ಕಾಳೇಗೌಡ ನಾಗವಾರ (1998 - 01)

 

ರಾಮನಗರ ಜಿಲ್ಲೆಯ ಚೆನ್ನಪಟ್ಟಣ ತಾಲ್ಲೂಕಿನ ನಾಗವಾರ ಗ್ರಾಮದಲ್ಲಿ 1947ರಲ್ಲಿ ಜನನ. ಬೆಂಗಳೂರು ವಿವಿ ಹಾಗೂ ಮೈಸೂರು ವಿವಿಗಳಲ್ಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಪ್ರಗತಿಪರ ಚಿಂತಕ, ಹೋರಾಟಗಾರ ಬಂಡಾಯ ಸಂಘಟನೆಯ ಮುಂಚೂಣಿ ನಾಯಕರಲ್ಲೊಬ್ಬರು. ಸೃಜನ ಶೀಲ ಲೇಖಕರಾಗಿ ಕಾವ್ಯ, ಕಥೆಗಳ ಮೂಲಕ ಗಮನ ಸೆಳೆದವರು, ‘ಬೀದಿ ಮಕ್ಕಳು ಬೆಳೆದೊ’ ‘ಬೇಕಾದ ಸಂಗತಿ’ ಯಂತಹ ಕೃತಿಗಳ ಪ್ರಕಟಣೆ.

          ಸ್ಥಳೀಯ ಜ್ಞಾನಪರಂಪರೆಗಳನ್ನು ಶೋಧಿಸಿ ಪುನರುಜ್ಜೀವನಗೊಳಿಸುವುದು, ಬುಡಕಟ್ಟು ಸಂಸ್ಕೃತಿಗಳ ಅಧ್ಯಯನ, ಅಲೆಮಾರಿ ಜನಾಂಗಗರ ಸಮ್ಮೇಳನ, ಬಯಲಾಟಗಳ ಪುನಃಶ್ಚೇತನ, ಆಡಿಯೋ, ವೀಡಿಯೋ ದಾಖಲಾತಿ, ಜಾನಪದ ಕಲಾವಿದರ ಆತ್ಮಕಥೆಗಳ ಸಂಪುಟ ಪ್ರಕಟಣೆ, ಜಾನಪದ ಸಂಸ್ಕೃತಿಯ ಚಿತ್ರ ಸಂಪುಟ, ದೇಸೀ ಚಿಂತನಮಾಲೆ, ಹತ್ತು ಹಳ್ಳಿಗಳ ವಿಶಿಷ್ಟ ಅಧ್ಯಯನ, ಕನ್ನಡೇತರ ಜಾನಪದ ಕೃತಿಗಳ ಭಾಷಾಂತರ, ಕಾಳೇಗೌಡರ ವಿಶಿಷ್ಟ ಸಾಧನೆಗಳು. ಜಾನಪದ ಕಲೆಯ ಶುಭಾಶಯ ಪತ್ರಗಳನ್ನು ಸಿದ್ಧಪಡಿಸಿ ಸಾರ್ವಜನಿಕ ಬಳಕೆಗೆ ತಂದದ್ದು ವಿಶಿಷ್ಟ ಯೋಜನೆಯಾಗಿದೆ.

 ಡಾ.ಹಿ.ಶಿ.ರಾಮಚಂದ್ರೇಗೌಡ (2001 - 04)

 

ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನಲ್ಲಿ 1947ರಲ್ಲಿ ಜನನ. ವೈಚಾರಿಕ ಮನೋಧರ್ಮದವರು, ರೈತ ಹೋರಾಟದ ಸಂದರ್ಭದಲ್ಲಿ ರಚಿಸಿದ ಗೀತೆಗಳ ಮೂಲಕ ಜನಪ್ರಿಯತೆ ‘ಜನಪದರು ನಾವು’ ‘ಜಾನಪದ ಅಂತರಂಗ’ ‘ಜಾನಪದ ಪ್ರಕೃತಿ’ ಮೊದಲಾದ ಕೃತಿಗಳ ಮೂಲಕ ಜನಪದ ಕಾಳಜಿಯ ಅಭಿವ್ಯಕ್ತಿ. ಮೈಸೂರು ವಿಶ್ವವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ನಿವೃತ್ತಿ.

ಆದಿ ದಿನೋತ್ಸವ, ಜನಪದ ಸಂಸ್ಕೃತಿ ಮತ್ತು ಜನನಾಯಕತ್ವ ಶೋಧ, ಮಮತೆಯ ಕೃಡಿ: ಮಕ್ಕಳ ಜಾನಪದ ಅಧ್ಯಯನ ಮತ್ತು ಪ್ರದರ್ಶನ, ಜಾನಪದದಲ್ಲಿ ದೇವರು ಮತ್ತು ಪ್ರಾರ್ಥನೆ : ಮನಃಶಾಸ್ತ್ರೀಯ ಹಿನ್ನೆಲೆಯ ಶೋಧ, ಅತರ್ ರಾಜ್ಯ ವಿಚಾರ ಸಂಕಿರಣಗಳು, ಕೀಟ ಜಾನಪದ, ಪ್ರವಾಸೋದ್ಯಮ ಜಾನಪದ, ರಾಜಧಾನಿ ಜಾನಪದ, ಜಾನಪದ ಆಟೋಟಗಳ ಪುನರುಜ್ಜೀವನ ಮತ್ತು ಪ್ರಯೋಗ, ಕಾಲಜ್ಞಾನ ಸಾಹಿತ್ಯ ಮತ್ತು ತತ್ವ ಚಿಂತನೆ, ಜಾನಪದ ತಲೆಮಾರು ಸಂಪುಟಗಳ ಪ್ರಕಟಣೆ ಹಿ.ಶಿ.ರಾಮಚಂದ್ರೇಗೌಡರ ಪ್ರಮುಖ ಸಾಧನೆಗಳು.

  ಶ್ರೀ ಕೆರೆಮನೆ ಶಂಭು ಹೆಗಡೆ (2005 - 08)

ಅಮೇರಿಕ, ಬಹ್ರೇನ್, ಬೀಜಿಂಗ್, ನೇಪಾಳ ಹಾಗೂ ಇತರ ಹೊರದೇಶಗಳಲ್ಲಿಯೂ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ ಹಿರಿಮೆ. ಕೌರವ, ಕೀಚಕ, ನಳ, ಹನುಮಂತ, ಕಂಸ, ಶ್ರೀರಾಮ-ಹೀಗೆ ಭಿನ್ನ ಪ್ರಾತ್ರಗಳಲ್ಲಿ ಮೈದುಂಬಿ ನಟಿಸಬಲ್ಲ ಯಕ್ಷ ಕಲಾವಿದ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರ.

ಜಾನಪದ ಮತ್ತು ಜಾಗತೀಕರಣ ಕುರಿತ ವಿಚಾರ ಸಂಕಿರಣ, ಬೆಂಗಳೂರಿನ ಕಾಲೇಜುಗಳಲ್ಲಿ ಜಾನಪದ ಯುವ ಜನೋತ್ಸವ, ಹಿಮಾಚಲ ಪ್ರದೇಶದ ಶಿರ್ ಮೋರ್ ನ ಜಾನಪದ ನೃತ್ಯ ಆಯೋಜನೆ, ಮಲೆನಾಡು ಉತ್ಸವ, ‘ಸಾವಿರದ ಸಿರಿ ಬೆಳಗು’ ಕೃತಿ ಬಿಡುಗಡೆ, ‘ಮೂಡಲಾಪಾಯ ಯಕ್ಷಗಾನದ ಸಮಗ್ರ ಚಿಂತನೆ’  ರಾಜ್ಯ ಮಟ್ಟದ ಚೌಡಿಕೆ ಮೇಳ, ತೊಗಲುಗೊಂಬೆ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಯಕ್ಷಗಾನ ರಂಗಚಿಂತನೆ, ಕೃತಿ ಬಿಡುಗಡೆ ಕೆರೆಮನೆ ಶಂಭು ಹೆಗಡೆ ಅವರ ಅಧ್ಯಕ್ಷಾವಧಿಯ ಮುಖ್ಯ ಕಾರ್ಯಕ್ರಮಗಳು.

ಶಂಭು ಹೆಗಡೆ ಅವರೇ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ನೇಮಕಗೊಂಡ ಮೊದಲ ಯಕ್ಷಗಾನ ಕಲಾವಿದರು.

ಶ್ರೀ ಗೊ.ರು. ಚೆನ್ನಬಸಪ್ಪ (2008 - 12)

         1930 ರ ಮೇ 18 ರಂದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ಗೊಂಡೇದಹಳ್ಳಿಯಲ್ಲಿ ಜನನ. ಶಾಲಾಶಿಕ್ಷಕರಾಗಿ ಸೇವೆ ಆರಂಭಿಸಿ ವಿಶ್ವಬ್ಯಾಂಕಿನ ಭಾರತ ಜನಸಂಖ್ಯಾ ಯೋಜನೆಯ ಉಪರ್ದೇಶಕ ಸ್ಥಾನದವರೆಗೆ ಏರಿದ ಹಿರಿಮೆ. ಪಂಚಾಯತ್ ರಾಜ್ ಹಾಗೂ ಜಾನಪದ ಪತ್ರಿಕೆಗಳ ಉಪಸಂಪಾದಕರು. ಬಿಬಿಸಿ ಚಲನಚಿತ್ರ ತಂಡಕ್ಕೆ ಸಂಪರ್ಕಾಧಿಕಾರಿ, ಗಾಂಧಿವಾದಿ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಆಗಿದ್ದವರು. ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರಕಟಣಾ ಆಯುಕ್ತ. ರಾಜ ಭಾಷಾ ಆಯೋಗದ ಆಯುಕ್ತ. ಜಾನಪದೀಯ ನಾಟಕಗಳ ರಚನೆ. ‘ಕರ್ನಾಟಕ ಜನಪದ ಕಲೆಗಳು’ ಕೃತಿ ರಚನೆ. ರಾಜ್ಯ ಪ್ರಶಸ್ತಿ ವಿಜೇತರು.

          ಕಾಲೇಜುಗಳಲ್ಲಿ ಜಾನಪದ ಜಗುಲಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಜಾನಪದ ಸಂಭ್ರಮ, ಹಳ್ಳಿಯ ಮನೆಯಲ್ಲಿ ಒಂದು ದಿನ ಸಾಕ್ಷ್ಯಚಿತ್ರ ನಿರ್ಮಾಣ, ಕನ್ನಡ ಜಾನಪದ ನಿಘಂಟು ರಚನೆ, ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ, ಶಿಕ್ಷಕರಿಗೆ ಜಾನಪದ ಕಮ್ಮಟ, ಜನಪದ ಕಲಾವಿದರ ಕ್ಷೇಮನಿಧಿ, ಸ್ಥಾಪನೆ, ಅಖಿಲ ಭಾರತ ಜಾನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳ ಪ್ರಕಟಣೆಗೆ ಚಾಲನೆ ಹಾಗೂ ಜಾನಪದ ಸಂಶೋಧನೆ ವೇತನ ನೀಡಿಕೆಯಂತಹ ವಿಭಿನ್ನ ಕಾರ್ಯಕ್ರಮಗಳನ್ನು ಗೊರುಚ ಅವರು ತಮ್ಮ ಅಧ್ಯಕ್ಷಾವಧಿಯಲ್ಲಿ ರೂಪಿಸಿದರು.

ಡಾ. ಬಾನಂದೂರು ಕೆಂಪಯ್ಯ (2012 - 13)

 BANANDOOR KEMPAIH

ಜಾನಪದದ ಮೂಲ ಮಟ್ಟುಗಳೊಂದಿಗೆ ಅದರೆಲ್ಲಾ ಸೌಂದರ್ಯದೊಂದಿಗೆ ಹಾಡುಬಲ್ಲ ಗಾಯಕ ಬಾನಂದೂರು ಕೆಂಪಯ್ಯ. 1951ರಲ್ಲಿ ರಾಮನಗರ ಜಿಲ್ಲೆ ಬಾನಂದೂರಿನಲ್ಲಿ ಜನನ. ಬಾಲ್ಯದಿಂದಲೇ ತಾಯಿ ಅಕ್ಕಂದಿರ ಹಾಡಿನಿಂದ ಪ್ರೇರಣೆಗೊಂಡವರು. 1980ರಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಹನ್ನೊಂದು ವರ್ಷ ಜನಪದ ಸಂಗೀತ ನಿರ್ಮಾಪಕರಾಗಿ ಜಾನಪದ ಗಾಯಕರನ್ನು ಪರಿಚಯಿಸಿದವರು. ನಂತರ ಬೆಂಗಳೂರು, ಗುಲ್ಬರ್ಗಾ ಹಾಗೂ ತಿರುವನಂತಪುರದ ದೂರದರ್ಶನ ಕೇಂದ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಹೊರ ರಾಜ್ಯಗಳಲ್ಲೂ ಕಾರ್ಯಕ್ರಮ ನೀಡಿ ಜನಪ್ರಿಯರಾಗಿರುವ ಬಾನಂದೂರು ಜನಪದ ಗೀತೆಗಳ ಎರಡು ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. ತಮ್ಮ ಗಾಯನದ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿರುವ ಬಾನಂದೂರು ಕೆಂಪಯ್ಯಾ ಮೂರು ಬಾರಿ ಜಾನಪದ ಅಕಾಡೆಮಿಯ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದಾರೆ. 1995ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಬಾನಂದೂರು ಕೆಂಪಯ್ಯಾ ಅವರು ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದವರು. ಹಿಂದಿನ ಅಧ್ಯಕ್ಷರ ಮಹತ್ವದ ಕಾರ್ಯಕ್ರಮಗಳನ್ನು ಮುಂದುವರೆಸುವುದರೊಂದಿಗೆ ಬಾನಂದೂರು ಕೇರಳ ಮತ್ತು ಮುಂಬೈಗಳಲ್ಲಿ ಜಾನಪದ ಸಮಾವೇಶಗಳನ್ನು ಸಂಘಟಿಸಿದರು.

 ಶ್ರೀ ಪಿಚ್ಚಳ್ಳಿ ಶ್ರೀನಿವಾಸ (2014 -2017 )

 

ಹುಟ್ಟು ಗಾಯಕರಾದ ಪಿಚ್ಚಳ್ಳಿ ಶ್ರೀನಿವಾಸ ಅವರು ತಮ್ಮ ಗಾಯನ ಪ್ರತಿಭೆಯ ಕಾರಣದಿಂದಲೇ ದಲಿತ ಚಳುವಳಿಗೆ ಸೇರುವಂತಾಗಿ ದಲಿತ ಕಲಾಮಂಡಳಿಯ ರಾಜ್ಯ ಅಧ್ಯಕ್ಷರಾಗಿದ್ದ ವರು. 1963ರಲ್ಲಿ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಪಿಚ್ಚಳ್ಳಿಯಲ್ಲಿ ಜನಿಸಿದ ಶ್ರೀನಿವಾಸ ಅವರು ಕಲಾಮಂಡಳಿಯ ಹಾಡುಗಳೊಂದಿಗೆ ಜಾನಪದ, ತತ್ವಪದದ ಹಾಡುಗಳ ಮೂಲಕವೇ ರಾಜ್ಯಾದ್ಯಂತ ಜನಪ್ರಿಯ ಗಾಯಕರಾಗಿ ಕರ್ನಾಟಕದ ‘ಗದ್ದರ್’ ಎಂಬ ಅಭಿದಾನಕ್ಕೆ ಪಾತ್ರರಾದವರು. ಗಾಯನದೊಂದಿಗೆ ಹೋರಾಟಗಾರರೂ ಆಗಿದ್ದ ಪಿಚ್ಚಳ್ಳಿ ಅವರು ಕೋಟಿಗಾನಹಳ್ಳಿ ರಾಮಯ್ಯ ಅವರ ನೂರಾರು ಹಾಡುಗಳಿಗೆ ರಾಗಸಂಯೋಜಿಸಿ ಹಾಡಿದರಲ್ಲದೆ ನೂರಾರು ದ್ವನಿಸುರಳಿ, ಸಿಡಿಗಳನ್ನು ಹೊರತಂದವರು. 1979ರ ಸಮುದಾಯ ಸಾಂಸ್ಕೃತಿಕ ಜಾಥದ ಪ್ರಮುಖ ಗಾಯಕ. ಬಿ.ವಿ. ಕಾರಂತರ ಪ್ರಿಯ ಶಿಷ್ಯನಾಗಿ ರಂಗಾಯಣ ಪ್ರಥಮ ತಂಡದ ಸದಸ್ಯ. ರಂಗ ಸಂಗೀತದಲ್ಲಿ ವಿಶೇಷ ಪರಿಣತಿಯೊಂದಿಗೆ ಹಲವು ನಾಟಕಗಳಿಗೆ ಸಂಗೀತ ಅಳವಡಿಕೆಯೊಂದಿಗೆ ನಾಟಕಗಳ ನಿರ್ದೇಶನ. ಸಾಕ್ಷರತಾ ಆಂದೋಲನ, ಆದಿವಾಸಿ ಸಂಸ್ಕೃತಿಯೊಂದಿಗೆ ಅತ್ಯುತ್ತಮ ಗಾಯಕನೆಂಬ ರಾಜ್ಯ ಚಲನಚಿತ್ರ ಪ್ರಶಸ್ತಿ ಪಾತ್ರ. ಜಾನಪದ ಅಕಾಡೆಮಿಯ ಸದಸ್ಯರೂ ಆಗಿದ್ದ ಪಿಚ್ಚಳ್ಳಿ ತಂಜಾವೂರಿನ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರದ ಸದಸ್ಯರು. 

1999ರಲ್ಲಿ    ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, 2000ದಲ್ಲಿ ನಾಟಕ ಅಕಾಡೆಮಿ ಪ್ರಶಸ್ತಿ, ನಂದಿ ಪ್ರಶಸ್ತಿಗಳೊಂದಿಗೆ 2006ರಲ್ಲಿ ಜಗಜೀವನರಾಂ ಪ್ರಶಸ್ತಿಗೂ ಪಾತ್ರರು. ಜಾನಪದ ಗಂಗೋತ್ರಿ ಪತ್ರಿಕೆಯನ್ನು ಲೋಕ ಜಾನಪದವೆಂದು ಹೊಸ ತಾತ್ವಿಕತೆ ಹಾಗೂ ವಿನ್ಯಾಸದೊಂದಿಗೆ ರೂಪಿಸಿದ್ದು, ಗುರುಶಿಷ್ಯ ಪರಂಪರೆ, ಫೆಲೋಶಿಪ್, ಜಾನಪದ ಕಲಾವಿದರ ಸಮೀಕ್ಷೆ, ಯುವಜನತೆಗೆ ರಸಗ್ರಹಣ ಶಿಬಿರ, ವಿವಿಧ ಅಧ್ಯಯನ ಶಿಬಿರಗಳು, ಮಹಿಳೆಯರಿಗೆ ಕಲಾತರಬೇತಿ ಮತ್ತು ಸಮಾಜಿಕ ಚರ್ಮವಾದ್ಯಗಳ ತರಬೇತಿಯೊಂದಿಗೆ ಬೃಹತ್ ಸಮಾವೇಶ, ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಜಾನಪದ ಸಂಭ್ರಮ ಕಾರ್ಯಕ್ರಮಗಳು, ಒಂದೇ ದಿನದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವಿಶ್ವ ಜಾನಪದ ದಿನಾಚರಣೆಯನ್ನು ಸಂಘಟಿಸಿದ್ದು, ಸೂಫೀ ತತ್ವಪದಕಾರರ ಕುರಿತ ಅನನ್ಯ ವಿಚಾರ ಸಂಕಿರಣ, ಜಾನಪದ ಮಹಾಕಾವ್ಯಗಳ ಸಾಂಸ್ಕೃತಿಕ ಮುಖಾಮುಖಿ, ಪುಸ್ತಕ ಪ್ರಕಟಣಾ ಯೋಜನೆಗಳ ಮುಂದುವರಿಕೆಯೊಂದಿಗೆ 60 ಮಂದಿ ದಲಿತ ಜಾನಪದ ಕಲಾವಿದರ ಡಿಜಿಟಲ್ ಆತ್ಮಕಥೆಯ ಸಾಕ್ಷ್ಯಚಿತ್ರಗಳ ನಿರ್ಮಾಣ ಪಿಚ್ಚಳ್ಳಿ ಅವರ ಸಾಧನೆಗಳಾಗಿವೆ. ನವದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ಜನಪದ ಸಂಸ್ಕೃತಿ ಕುರಿತ ರಾಷ್ಟಮಟ್ಟದ ವಿಚಾರಸಂಕಿರಣ, ಜಾನಪದ ಅಕಾಡೆಮಿಯ ವೆಬ್ ಸೈಟ್ ನಿರ್ಮಾಣ (ಜನಪದ ಕಲೆಗಳ ಕುರಿತ ವಿಶ್ಲೇಷಣಾತ್ಮಕ ಪರಿಚಯ, ಹಳೆ ಮತ್ತು ಹೊಸ ಛಾಯಾಚಿತ್ರಗಳು, ಕಲೆಗಳ 2 ನಿಮಿಷದ ವೀಡಿಯೋ ತುಣುಕುಗಳು, ಅಕಾಡೆಮಿಯ ಇತಿಹಾಸ, ಅಧ್ಯಕ್ಷರ ಪರಿಚಯದೊಂದಿಗೆ) ಹಾಗೂ ಐದು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಜಾನಪದೀಯ ವೈಭವದೊಂದಿಗೆ ರೂಪಿಸಿದ್ದು ಪಿಚ್ಚಳ್ಳಿಯವರ ವಿಶಿಷ್ಟ ಸಾಧನೆಗಳಾಗಿವೆ.

 

ಶ್ರೀ ಬಿ. ಟಾಕಪ್ಪ (2017-2019)

ಬಿ.ಟಾಕಪ್ಪ ಕಣ್ಣೂರು ಅವರು ಮೂಲತಃ ಡೊಳ್ಳು ಕುಣಿತದ ಕಲಾವಿದರು. 1949 ರ ಸೆಪ್ಟೆಂಬರ್ 4 ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಣ್ಣೂರಿನಲ್ಲಿ ಜನಿಸಿದ ಟಾಕಪ್ಪನವರು 1978 ರಿಂದಲೂ ಜಾನಪದ ಕಲಾವಿದರ ಕೂಟವನ್ನು ಕಟ್ಟಿಕೊಂಡು ಡೊಳ್ಳು ಕುಣಿತದ ಅಭ್ಯಾಸ ಪ್ರಾರಂಭಿಸಿದವರು. ಕಲಾವಿದರಾಗಿ, ಸಂಘಟಕರಾಗಿ, ತರಬೇತುದಾರರಾಗಿ ಸ್ಥಳೀಕದಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಖ್ಯಾತಿಯನ್ನು ಎತ್ತಿಹಿಡಿದು ಶಿಖರ ಸಾಧನೆಯನ್ನು ಮಾಡಿದವರು.

        ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಸಮಾರಂಭದಲ್ಲಿ, ವೇದಿಕೆಗಳಲ್ಲಿ ಡೊಳ್ಳು ಕುಣಿತವನ್ನು ಪ್ರಸ್ತುತಪಡಿಸಿರುವ ಇವರು ರಷ್ಯಾದ ಭಾರತೋತ್ಸವ, ಇಂಗ್ಲೆಂಡಿನ ಕನ್ನಡ ಸಮ್ಮೇಳನ, ಅಮೇರಿಕಾದ  ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಭಾಗವಹಿಸಿ ಪ್ರದರ್ಶನ ನೀಡುವ ಮೂಲಕ ನೆಲದ ಸೊಗಡಾದ ಡೊಳ್ಳು ಕುಣಿತವನ್ನು ಅಂತರಾಷ್ಟ್ರೀಯವಾಗಿ ಪ್ರಚುರಪಡಿಸಿರುತ್ತಾರೆ.

ಇದಲ್ಲದೆ 56ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಕಾರ್ಯಕ್ರಮಗಳಲ್ಲೂ ತಮ್ಮ ತಂಡದೊಂದಿಗೆ ಡೊಳ್ಳು ಪ್ರದರ್ಶನಗಳನ್ನು ನೀಡಿದ ದಾಖಲೆಯೂ ಟಾಕಪ್ಪ ಅವರ ಬೆನ್ನಿಗಿದೆ. ದೆಹಲಿಯ ರಾಷ್ಟ್ರೀಯ ಕ್ರೀಡೆ, ದೆಹಲಿ ಮತ್ತು ಒಡಿಶಾಗಳಲ್ಲಿನ ಕರ್ನಾಟಕ ಉತ್ಸವ, ಊಟಿಯ ರಾಷ್ಟ್ರೀಯ ಟೀ ಮತ್ತು ಪ್ರವಾಸೋದ್ಯಮ ಉತ್ಸವ, ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸಮ್ಮೇಳನ,ಚೆನ್ನೈ, ಮುಂಬಯಿಯ ಕರ್ನಾಟಕ ಉತ್ಸವ, ಲೂಧಿಯಾನ, ಭಾವೈಕ್ಯತಾ ಸಮಾರಂಭಗಳು, ಹಿಮಾಚಲ ಪ್ರದೇಶದ ರಾಷ್ಟ್ರೀಯ ಬೇಸಿಗೆ ಉತ್ಸವ, ದೆಹಲಿಯ ಲೋಕಚಾವಿ ಜಾನಪದ ಉತ್ಸವ, ಕೊಚ್ಚಿಯಲ್ಲಿನ ಚಲನಚಿತ್ರೋತ್ಸವ, ಒರಿಸ್ಸಾದ ಬಾಲಂಗೇರ್ ಲೋಕೋತ್ಸವ, ಮಾಂಡೇವ ಸಂಸ್ಕೃತಿ ಉತ್ಸವ, ಪುರಿಯ ರಾಷ್ಟ್ರೀಯ ಬುಡಕಟ್ಟು ಜಾನಪದ ಸಂಗೀತ ಮತ್ತು ನೃತ್ಯೋತ್ಸವ, ಚೆನ್ನೈನ ಜಾನಪದ ಕಲೆಗಳ ಪ್ರದರ್ಶನ, ವಿಲೇಜ್ ಫೆಸ್ಟೆವಲ್, ಹಿಮಾಚಲ ಪ್ರದೇಶದ ದಸರಾ ಉತ್ಸವ, ದೆಹಲಿಯ ಗಣರಾಜ್ಯೋತ್ಸವ, ತೆಲಂಗಾಣ, ಮಧ್ಯಪ್ರದೇಶ …. ಹೀಗೆ ಇಡೀ ದೇಶಾದ್ಯಂತ ಸುತ್ತಿದ ಅನುಭವವೂ ಟಾಕಪ್ಪನವರಿಗಿದೆ. ಇದಲ್ಲದೆ ನಮ್ಮ ರಾಜ್ಯದಲ್ಲೇ ನೀಡಿದ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ. ರಾಜ್ಯದಲ್ಲಷ್ಟೇ ಅಲ್ಲದೆ ಹೊರಗೂ ತರಬೇತಿ ನೀಡಿರುವುದೂ ಉಂಟು.

1994ರಲ್ಲಿ ಉಡುಪಿಯ ಟಿ. ಎಂ.ಪೈ ದಶಮಾನೋತ್ಸವ ಸಮಾರಂಭದಲ್ಲಿ ಜಾನಪದ ಕಲಾವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಕಾಸರಗೋಡಿನಲ್ಲೂ ಪ್ರಶಸ್ತಿ ಪಡೆದಿರುವ ಟಾಕಪ್ಪನವರು ಕರ್ನಾಟಕ ಚೇತನ, ಸಮಾಜ ರತ್ನ, ಕರುನಾಡ ಧೃವತಾರೆ, ಜೆಪಿ ಸಮಾಜ ರತ್ನ,ಸುವರ್ಣ ಕರ್ನಾಟಕ ಪತಂಜಿ ರತ್ನ, ಪರಿಸರ ಪ್ರೇಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಸವ್ಯಸಾಚಿ, ಟಿಪ್ಪುಸುಲ್ತಾನ್  ಪ್ರಶಸ್ತಿ, ಕರ್ನಾಟಕ ಕಲಾಭೂಷಣದಂತಹ ಹಲವಾರು ಜನಪ್ರಿಯ ಪ್ರಶಸ್ತಿ- ಆದರಗಳು ಕೂಡ ಟಾಕಪ್ಪನವರನ್ನು ಆರಸಿ ಬಂದಿವೆ. ಎರಡು ಬಾರಿ ಉತ್ತಮ ಕೃಷಿಕ ಪ್ರಶಸ್ತಿಯನ್ನು ಪಡೆದಿರುವುದರು ಕೂಡ ಇವರ ಹೆಗ್ಗಳಿಕೆಯೇ ಆಗಿದೆ.

ಅಕಾಡೆಮಿಯ ಅಧ್ಯಕ್ಷರಾಗಿ ಜನಪದ ಸಾಹಿತ್ಯ, ಕಲೆ–ಸಂಸ್ಕೃತಿಯ ಸಶಕ್ತೀಕರಣಕ್ಕೆ   ಕಾರ್ಯನಿರ್ವಹಿಸಿರುತ್ತಾರೆ. ಜನಪದ ಕಲೆಯ ತರಬೇತಿ ಶಿಬಿರಗಳು, ಜಾನಪದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಜನಪದ ಕಲಾವಿದರ ಶ್ರೇಯಸ್ಸಿಗಾಗಿ ದುಡಿದಿರುತ್ತಾರೆ.

ಮಾತಾ ಬಿ. ಮಂಜಮ್ಮ ಜೋಗತಿ(2019ರಿಂದ  

ಮಾತಾ. ಬಿ. ಮಂಜಮ್ಮ ಜೋಗತಿ ಅವರು  ಜಾನಪದ ಕಲಾಲೋಕಕ್ಕೆ ಬಳ್ಳಾರಿ ಜಿಲ್ಲೆಯ ಕೊಡುಗೆ. ಇವರು ಹುಟ್ಟಿದ್ದು 1957 ರ ಮೇ 20 ರಂದು ತಗ್ಗಿನಮಠ ಎಂಬ ಹಳ್ಳಿಯಲ್ಲಿ. ಇವರ ಜನ್ಮನಾಮ ‘ಬಿ’ ಮಂಜುನಾಥಶೆಟ್ಟಿ. ಮಂಜುನಾಥಶೆಟ್ಟಿ ಕಾಲ ಕ್ರಮೇಣ ಮಂಜಮ್ಮಳಾಗಿ ರೂಪಾಂತರ ಹೊಂದಿ, 1985 ರಲ್ಲಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ, ಹುಲಗಿ ಗ್ರಾಮದ ಹುಲಿಗೆಮ್ಮ ದೇಗುಲದಲ್ಲಿ ಜೋಗತಿಯಾಗಿ ದೀಕ್ಷೆ ಸ್ವೀಕಾರ ಮಾಡಿದರು. ಆ ಸಂದರ್ಭದಲ್ಲಿ ಇವರಿಗೆ ಪರಿಚಿತರಾದವರು ಶ್ರೀಮತಿ ಕಾಳವ್ವ ಜೋಗತಿ ಅವರೇ ಇವರ ಗುರು, ತಾಯಿ, ಮಾರ್ಗದರ್ಶಕಿ. ಕಾಳವ್ವ ಜೋಗತಿ ಅವರಿಂದ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಕಲೆಗಳಲ್ಲಿ ತರಬೇತಿ ಪಡೆದರು.

ಮಂಜಮ್ಮ ಜೋಗತಿಯವರು ಹಂಪಿ ಉತ್ಸವ, ಬೀದರ್ ಉತ್ಸವ, ಜಾನಪದ ಲೋಕೋತ್ಸವ, ವಿಶ್ವಗೋ ಸಮ್ಮೇಳನ, ಜಾನಪದ ಜಾತ್ರೆ ಮುಂತಾದ ನಾಡಿನಾದ್ಯಾಂತ ನಡೆದ ಪ್ರಮುಖ ಉತ್ಸವಗಳಲ್ಲಿ ಹಾಗೂ ನಾಡಿನಾಚೆಯ ಸಾಂಸ್ಕೃತಿಕ ಉತ್ಸವಗಳಲ್ಲೂ ಕಲಾ ಪ್ರದರ್ಶನ ನೀಡಿರುತ್ತಾರೆ.

ತುಮಕೂರಿನಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಜೋಗತಿ ನೃತ್ಯ ಕಲಾ ಪ್ರದರ್ಶನ ನೀಡುವುದರೊಂದಿಗೆ ಕಲಾಯಾನಕ್ಕೆ ಮುನ್ನುಡಿ ಬರೆದ ಮಂಜಮ್ಮನವರು ರಂಗಕಲಾವಿದರಾಗಿ, ವಾದ್ಯಗಾರ್ತಿಯಾಗಿ, ಜೋಗತಿ ನೃತ್ಯಗಾರ್ತಿಯಾಗಿ ಅಪಾರ ಜನಮನ್ನಣೆ ಗಳಿಸಿದರು.

ಮಂಜಮ್ಮ ಜೋಗತಿಯವರಿಗೆ ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಒಲಿದು ಬಂದಿವೆ.

ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯೆಯಾಗಿ ಕಲಾ ಸಂಘಟನೆಗೆ ಕಾಣಿಕೆ ನೀಡಿದ್ದ ಮಂಜಮ್ಮ ಜೋಗತಿ  ಅವರು ಪ್ರಸ್ತುತ ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿ ಜನಪದ ಕಲೆಯ ಪೋಷಣೆ ಮತ್ತು ರಕ್ಷಣೆಯ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.  

ಇತ್ತೀಚಿನ ನವೀಕರಣ​ : 26-07-2021 05:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080