ಅಭಿಪ್ರಾಯ / ಸಲಹೆಗಳು

ಸೋಮನ ಕುಣಿತ

ಜಾನಪದ ಮುಖವಾಡಧಾರಿ ಕುಣಿತಗಳಲ್ಲಿ ಸೋಮನ ಕುಣಿತ ಪ್ರಮುಖವಾದುದಷ್ಟೇ ಅಲ್ಲ ಸಾಂಸ್ಕೃತಿಕ ಚರಿತ್ರೆಯ ಎಳೆಗಳನ್ನು ಕೋದು ಕೊಂಡಿರುವ ಕುಣಿತವೂ ಹೌದು.ಈ ಸೋಮಗಳು ಗ್ರಾಮ ದೇವತೆಯ ಅಂಗರಕ್ಷಕರು. ಸೋಮನ ಕುಣಿತದಲ್ಲಿ ಕೆಂಪು ಸೋಮ ಮತ್ತು ಹಳದಿ ಸೋಮ ಎಂಬ ಇಬ್ಬರು ಅಂಗರಕ್ಷಕರಿದ್ದಾರೆ.

 

ಸೋಮನ ಕುಣಿತವು ಶಕ್ತಿ ಸಂಪ್ರದಾಯಕ್ಕೆ ಸೇರಿದ್ದೆಂಬ ಅಭಿಪ್ರಾಯ ಬಹುತೇಕರಲ್ಲಿ ಪ್ರಚಲಿತದಲ್ಲಿದೆ. ಅಂದರೆ ಇದರ ಮೂಲ ತಂತ್ರಪಂಥವೆಂದಾಗುತ್ತದೆ. ತಂತ್ರಪಂಥದಲ್ಲೂ ಶಾಕ್ತೇಯ ಶಾಖೆಗೆ ಸಂಬಂಧಿಸಿದ್ದೆಂಬ ಅಂಶವು ಅತ್ಯಂತ ಸ್ಪಷ್ಟವಾಗಿದೆ. ವಿದ್ವಾಂಸರ ಪ್ರಕಾರ ತಂತ್ರಪಂಥವು ವೈದಿಕ ಪೂರ್ವದ್ದು. ಅಂದರೆ ವೈದಿಕ ಸಂಸ್ಕೃತಿ ಭಾರತದ ನೆಲಕ್ಕೆ ಕಾಲಿಡುವ ಮುನ್ನವೇ ಇಲ್ಲಿನ ಮೂಲನಿವಾಸಿಗಳು ತಂತ್ರಪಂಥದ ದಾರಿಯಲ್ಲಿ ಬಹುದೂರ ಚಲಿಸಿದ್ದರು. ಅಷ್ಟೇಕೆ ಬುದ್ಧನ ಕಾಲದಲ್ಲಿ ಹರಪ್ಪ ನಾಗರಿಕತೆಯಿಂದ ಗುಪ್ತವಾಗಿ ಉಳಿದು ಬಂದಿದ್ದ ಶೈವ ಮೂಲದ ತಂತ್ರಪಂಥಿಗಳು ರಹಸ್ಯವಾಗಿ ತಮ್ಮ ಆಚರಣೆಗಳನ್ನು ನಡೆಸುತ್ತಿದ್ದರೆಂಬ ಉಲ್ಲೇಖಗಳು ಕೂಡ ನಮಗೆ ಸಿಗುತ್ತವೆ. ಬುದ್ಧನ ಒಡನಾಡಿ ಅಥವ ಗುರುವೂ ಆಗಿದ್ದರಬಹುದಾದ ಮಕ್ಕಲಿ ಘೋಷಾಲ್ ತನ್ನ ಆರಂಭದ ದಿನಗಳಲ್ಲಿ ಇಂತಹ ಶೈವ ತಂತ್ರಪಂಥವೊಂದರಲ್ಲಿದ್ದ.

 

ಹೀಗೆ ತಂತ್ರಪಂಥ ಮೂಲದ್ದೂ, ಜಾನಪದೀಯ ಶೈಲಿಯದ್ದೂ ಆದ ಮುಖವಾಡ ಕುಣಿತಕ್ಕೆ ‘ಸೋಮ’ ಎಂಬ ಹೆಸರು ಹೇಗೆ ಬಂತೆಂಬ ಬಗ್ಗೆ ಜಾನಪದ ವಿದ್ವಾಂಸರಲ್ಲೂ ಸೂಕ್ತ ವಿವರಣೆಗಳಿಲ್ಲ. ಋಗ್ವೇದದ ಸೋಮರಸ (Ephedragapsinica)ದ ಅಧಿದೇವರ ಹೆಸರೇ ಸೋಮ. ನಂತರದಲ್ಲೆಂದೋ ಚಂದ್ರನಿಗೂ ಈ ಹೆಸರನ್ನು ಅಂಟಿಸಲಾಯಿತು. ಇನ್ನೂ ಕೊಂಚ ಆಳಕ್ಕಿಳಿದಲ್ಲಿ ಸೋಮದ ಮೂಲ ರೂಪ ಹೋಮ ಎಂದೇ ಕಾಣಸಿಗುತ್ತದೆ. ಝೆಂಡ್ ಅವೆಸ್ತಾದಲ್ಲಿನ ‘ಹೋಮ’ ಸಂಸ್ಕೃತದಲ್ಲಿ ‘ಸೋಮ’ ವಾಗಿ ನೆಲೆನಿಂತಿತು. ಚಂದ್ರಶೇಖರನಾದ ಶಿವನನ್ನು ಸೋಮಶೇಖರ ಎಂದು ಮಾಡಿದ್ದರಷ್ಟೇ ಸಾಂಸ್ಕೃತಿಕ ಅವಘಡ ಈ ಸೋಮನ ಕುಣಿತದಲ್ಲೂ ಸಂಭವಿಸಿದಂತಿದೆ.

 

ಯಾಕೆಂದರೆ ಈ ಸೋಮಪ್ಪಗಳ ಮೂಲ ಹೆಸರುಗಳು ಕನ್ನಡ ಜಾನಪದ ಜಾಯಮಾನಕ್ಕೆ ಅನುಗುಣವಾಗಿಯೇ ಬೇರೆ ಬೇರೆ ರೀತಿ ಇದ್ದು ಆ ಹೆಸರುಗಳೂ ಚಾಲ್ತಿಯಲ್ಲಿದ್ದೇ ಇವೆ. ಹಳದಿ ಸೋಮನಿಗೆ ಕೆಂಚರಾಯ ಅಥವ ಈರಣ್ಣನೆಂದೂ, ಕೆಂಪು ಸೋಮನಿಗೆ ಭೂತರಾಯ ಅಥವ ಕೆಂಪರಾಯನೆಂದೇ ಗ್ರಾಮೀಣರು ಕರೆವುದು. ಪ್ರಾದೇಶಿಕವಾಗಿ ಈ ಹೆಸರುಗಳು ಕೂಡ ಬದಲಾಗುತ್ತವಾದರೂ ಅವು ಕೂಡ ಜಾನಪದೀಯ ಧ್ವನಿಯ ಆಚೆಗೆ ಸರಿಯುವುದಿಲ್ಲವೆಂಬುದನ್ನು ನಾವು ಗಮನಿಸಲೇಬೇಕು. ಉದಾಹರಣೆಗೆ ಕೆಲವು ಕಡೆ ಹಳದಿ ಸೋಮನನ್ನು ಕೆಂಪಮ್ಮ ಎಂಬ ಸ್ತ್ರೀ ಸೂಚಕ ನಾಮಪದದ ಮೂಲಕವೇ ಗುರುತಿಸಲಾಗುತ್ತದೆ. ಮತ್ತೂ ಹಲವೆಡೆ ಕೆಂಪು ಸೋಮನನ್ನೇ ಈರಣ್ಣನೆಂದು ಕರೆವ ಪದ್ಧತಿ ಉಂಟು. ಹೀಗೆ ಹೆಸರು- ಲಿಂಗಗಳು ಅದಲು- ಬದಲಾಗುವುದು ಜಾನಪದದ ಮಟ್ಟಿಗಂತೂ ಸಹಜವೆಂಬಂತೆಯೇ ಇದೆ. ಮತ್ತೂ ಕೆಲವು ಕಡೆ ಈ ಇಬ್ಬರು ಹಳದಿ-ಕೆಂಪು ಸೋಮರನ್ನು ಈರಣ್ಣ-ಪಾಪಣ್ಣನೆಂದೇ ಕರೆವ ಪರಿಪಾಠವಿದೆ. ನಾವು ಜನಪದ ಸಂಸ್ಕೃತಿಯ ಅನೇಕ ಗೋಜಲಾಗಿರುವ ಸಂಗತಿಗಳನ್ನು ಬಗೆಹರಿಸಿಕೊಳ್ಳದೇ ಮುಂದುವರೆಯುವುದರಿಂದ ಮೂಲ ನಿಜ ಸಂಸ್ಕೃತಿಯ ಸ್ವರೂಪವನ್ನು ಅರಿಯಲಾರದೆ ಅಜ್ಞಾನಿಗಳಾಗಿಯೇ ಉಳಿದು ಹೋಗುತ್ತೇವೆ. ವಿಶೇಷವಾಗಿ ಸಂಸ್ಕೃತಿ ಸಂಶೋಧನೆಯ ಸಂದರ್ಭದಲ್ಲಿ Ignorance is deadly ಎಂಬ ಮಾತು ಹೆಚ್ಚು ಅನ್ವಯಿಸುತ್ತದೆಂಬುದನ್ನು ನಾವು ಮರೆಯುವಂತಿಲ್ಲ.

 

ಕನ್ನಡ ಜಾನಪದದೊಳಕ್ಕೆ ಪ್ರವೇಶಿಸಿದ ಈ ವೈದಿಕ ಸೋಮ ಸೃಷ್ಠಿಸಿರುವ ಗೋಜಲುಗಳನ್ನು ಬಗೆಹರಿಸಲು ಈಗ ಪ್ರಯತ್ನಿಸುವ. ಮೊದಲನೆಯದಾಗಿ ಸೋಮರಿರುವುದು ಇಬ್ಬರೇ. ಒಬ್ಬ ಹಳದಿ ಸೋಮ, ಮತ್ತೊಬ್ಬ ಕೆಂಪು ಸೋಮ. ಈ ಹಳದಿ ಸೋಮ ಪುರುಷನ ವೀರ್ಯಕ್ಕೆ ಸಂಕೇತ. ಹಾಗೆಯೇ ಕೆಂಪು ಬಣ್ಣ ಹೆಣ್ಣಿನ ಮುಟ್ಟಿನ ರಕ್ತಕ್ಕೆ ಸಂಕೇತ. ಮುಟ್ಟಿನ ರಕ್ತವನ್ನು ತಂತ್ರಪಂಥದಲ್ಲಿ ಕಾಪುಷ್ಪವೆನ್ನುತ್ತಾರೆ.  ಈ ಗ್ರಹಿಕೆಯ ಹಿನ್ನೆಲೆಯಲ್ಲಿ ಹಳದಿ ಸೋಮ ಈರಣ್ಣನಾಗುವುದು ಖಂಡಿತ ಅತ್ಯಂತ ಹೆಚ್ಚು ಸಮಂಜಸವಾದುದೇ ಆಗಿದೆ. ಯಾಕೆಂದರೆ ಹಳದಿ ಎಂದರೆ ವೀರ್ಯವಷ್ಟೇ.ವೀರ್ಯವನ್ನು ನಮ್ಮ ಜನಪದರು ತಮ್ಮ ಆಡುಭಾಷೇಲಿ ‘ನೀರು’ ಎಂದೇ ವ್ಯವಹರಿಸುತ್ತಾರೆ. ಅವನಲ್ಲಿ ಏನೂ ನೀರಿಲ್ಲವೆಂದರೆ ನಿರ್ವೀರ್ಯ ಎಂಬ ಅರ್ಥವೇ ಹೊರಡುತ್ತದೆ. ಹಾಗೆಯೇ ‘ಈ’ ಎಂಬ ದ್ರಾವಿಡ ಭಾಷೆಗಳಲ್ಲಿನ ಧಾತು ಜಲಸಂವಾದಿಯಾದುದು. ಉದಾಹರಣೆಗೆ ಈರ್ + ಚೆಲ್ಲು = ಇರ್ಚಲು, ನೀರಿನಂಶ ಹೆಚ್ಚಿರುವುದರಿಂದ ಈರುಳ್ಳಿ, ನೀರ ನೀಡುವುದರಿಂದ ಈಚಲು, ಅದನ್ನು ಇಳಿಸುವವರು ಈಡಿಗ ಇತ್ಯಾದಿ. ಈ ಗ್ರಹಿಕೆಯ ಹಿನ್ನೆಲೆಯಲ್ಲಿ ತಂತ್ರಪಂಥ ಮೂಲದ ಹಳದಿ ಸೋಮ ಪುರುಷನೂ, ವೀರ್ಯದ ಸಂಕೇತವೂ, ಹರಿಷಿಣ ಸೂಚಕನೂ ಹಾಗೂ ಜಲಸಂಸ್ಕೃತಿಯ ಈರಣ್ಣನೆಂಬುದೂ ತಂತಾನೇ ಸಾಬೀತಾಗುತ್ತದೆ.

 

ಇನ್ನು ಕೆಂಪು ಸೋಮನ ಕಥೆಯನ್ನು ಪರಿಶೀಲಿಸಿ ನೋಡುವ. ಈ ಕೆಂಪು ಸೋಮನ ಮೂಲ ಹೆಸರು ಬಹುಶ: ಕೆಂಪಮ್ಮನೆಂದಿದ್ದದ್ದು ಅದು ಪಲ್ಲಟಗೊಂಡು ಪುರುಷನಾದ ಹಳದಿ ಸೋಮನಿಗೆ ಅಂಟಿಕೊಂಡಿರುವಂತಿದೆ. ಕೆಂಪು, ಕುಂಕುಮಗಳು ಮುಟ್ಟಿನ ರಕ್ತದ ಸಂಕೇತವಾಗಿರುವುದರಿಂದ ನಿಸ್ಸಂಶಯವಾಗಿಯೂ ಕೆಂಪು ಸೋಮ ಸ್ತ್ರೀ ಅಷ್ಟೇ ಆಗಿರಲಿಕ್ಕೆ ಸಾಧ್ಯ. ಅಥವ ಹೆಚ್ಚೆಂದರೆ ಸ್ತ್ರೀಯನ್ನು ಪ್ರತಿನಿಧಿಸುವ ಪುರುಷ ವೇಷಧಾರಿಯಾಗಿಬಲ್ಲ ಮಾತ್ರ. ಇದರೊಂದಿಗೆ ಕೆಂಪು ಸೋಮನನ್ನು ರೌದ್ರಾವತಾರಿಯೆಂದೂ ಗುರುತಿಸಲಾಗುತ್ತದೆ. ಅಂದರೆ ಶಾಕ್ತೇಯ ಮೂಲದ   ಸ್ತ್ರೀ ದೈವತದ ಅಂಗರಕ್ಷಕಿ ದೇವತೆಯು ರೌದ್ರಾವತಾರಿಯಾಗಿರುವುದು ಅಂತಹ ಅಸಹಜವಾದುದೇನಲ್ಲವಲ್ಲ. ಈ ಬಗೆಯ ಸಾಂಸ್ಕೃತಿಕ ಪಲ್ಲಟಗಳು ಈ ನೆಲದಲ್ಲಿ ಸಾಕು ಬೇಕಾದಷ್ಟಿವೆಯಾದ್ದರಿಂದ ಇದೇನೂ ಅಚ್ಚರಿದಾಯಕವಾದುದೂ ಅಲ್ಲ; ಆಘಾತಕಾರಿಯೆಂದು ಯಾರೂ ಭಾವಿಸಲೂ ಬೇಕಿಲ್ಲ. ಆದರೆ ಎಂದು ಯಾರು ಈರಣ್ಣ- ಕೆಂಪಮ್ಮರನ್ನು ಅವರ ಮೂಲ ನಾಮದೇಯಗಳನ್ನು ಬದಿಗೊತ್ತಿ ಅಕಾರಣವಾಗಿ ಸೋಮರೆಂದು ಕರೆದರೋ ಬಲ್ಲವರಿಲ್ಲ.

 

ಇಂದಿನ ಇರಾನಿನಲ್ಲಿ ಹುಟ್ಟಿದ ‘ಹೋಮ’ ಎಂಬ ಪದಕ್ಕೂ ಕರ್ನಾಟಕ ಜಾನಪದ ವಲಯದ ಈ ಈರಣ್ಣ- ಕೆಂಪಮ್ಮರಿಗೂ ಎಲ್ಲಿಗೆಲ್ಲಿಯ ಸಂಬಂಧ?ಈ ಅಂಶವನ್ನೇ ಸಮರ್ಥಿಸಬಲ್ಲ ಸೋಮನ ಕುಣಿತದ ಅಧಿಕೃತ ಆಚರಣೆಯತ್ತಲೂ ನಾವೀಗ ಗಮನ ಹರಿಸಬಹುದಾಗಿದೆ.

 

ಗ್ರಾಮದೇವತೆ ಗುಡಿಯಿಂದ ಹೊರಟು ಗಂಗಾ ಪೂಜೆಯನ್ನು ಸಲ್ಲಿಸಲಿಕ್ಕೆಂದೋ ಅಥವ ಅಗ್ನಿಕೊಂಡ ಹಾಯಲಿಕ್ಕೆಂದೋ ಇಲ್ಲವೇ ಬಲಿ ಸ್ವೀಕಾರಕ್ಕೆಂದೋ ಹೊರಡುವ ಮುನ್ನ ಗುಡಿಯ ಮುಂಭಾಗದ ಅಂಗಳದಲ್ಲಿ ಸೋಮನ ಕುಣಿತ ನಡೆಯುತ್ತದೆ. ರಕ್ತ ಬಲಿಯನ್ನು ಸ್ವೀಕರಿಸುವಾಗಲಂತೂ ಕುಣಿಯುವವನಿಗೆ ಮೈದುಂಬಿ ವೀರಾವೇಶದಿಂದ ವರ್ತಿಸತೊಡಗುತ್ತಾನೆ. ಈ ಆಚರಣೆಗಳ ವಿವರಗಳನ್ನು ನಾವು ಕೊಂಚ ಎಚ್ಚರದಿಂದಲೇ ಪರಿಶೀಲಿಸಬೇಕು.

 

ಮೊದಲನೆಯದಾಗಿ ದಕ್ಷಿಣ ಬಾರತದಲ್ಲಿ ಪೂಜೆಗೊಳ್ಳುವ ಗ್ರಾಮೀಣ ದೇವತೆಗಳೆಲ್ಲರೂ ಬಹುತೇಕ ಅಗ್ನಿ ಕೊಂಡವನ್ನು ಹಾಯುತ್ತವೆ.ಕೇವಲ ಕರಗ ಅಥವ ಗಂಗಶಿರಸ್ಸುಗಳು ಮಾತ್ರವೇ ಅಗ್ನಿಕೊಂಡ ಹಾಯುತ್ತಾವೆಂದೇನಿಲ್ಲ. ಈ ಆಚರಣೆಯ ಹಿನ್ನೆಲೆ ಅತ್ಯಂತ ಸ್ಪಷ್ಟವಾದುದಾಗಿದೆ.ಈ ನೆಲದಲ್ಲಿ ಅಗ್ನಿ ಸಂಸ್ಕೃತಿ ಮತ್ತು ಜಲಸಂಸ್ಕೃತಿಗಳೆಂಬ ಎರಡು ಪ್ರಧಾನ ಧಾರೆಗಳಿವೆ. ದ್ರಾವಿಡ ಮತ್ತು ದ್ರಾವಿಡಪೂರ್ವ ವರ್ಗಗಳ ಜನರ ಧಾರ್ಮಿಕ ಆಚರಣೆಗಳಲ್ಲಿ ಕೊಂಡ ಹಾಯುವುದು ಸರ್ವೇಸಾಮಾನ್ಯ. ಕೊಂಡ ಹಾಯುವುದೆಂದರೆ ಪರಿಶುದ್ಧಗೊಳ್ಳುವುದೆಂಬ ಕಪೋಲಕಲ್ಪಿತ ಹಾಗೂ ಹೇರಲ್ಪಟ್ಟ ನಂಬಿಕೆಯೊಂದು ಇಂದು ಸಮುದಾಯದ ಮನಸ್ಸಲ್ಲಿ ಬೇರೂರಿದೆ. ಆದರೆ ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಪರಿಶುದ್ಧಗೊಳ್ಳುವುದೆಂದರೆ ಗಂಗೆಯ ಮೂಲಕ ಮಾತ್ರ. ಅಂದರೆ ನೀರಿನಿಂದ. ಹಾಗಾಗಿ ಕೊಂಡ ಹಾಯುವುದೆಂದರೆ ಅಕ್ಷರಶ: ಬೆಂಕಿಯನ್ನು ತುಳಿದು ಅಪಮಾನಿಸುವ ಕ್ರಿಯೆಯೇ ಆಗಿದೆ. ಯಾಕೆ ಬೆಂಕಿಯನ್ನು ಅಪಮಾನಿಸುತ್ತಾರೆಂದರೆ ಬೆಂಕಿ ಅರ್ಥಾತ್ ಅಗ್ನಿ (Igni) ವೈದಿಕರ ಪ್ರಮುಖಾತಿ ಪ್ರಮುಖ ದೈವತವಾಗಿದೆ. ಋಗ್ವೇದದಲ್ಲಿ ಇಂದ್ರನ ನಂತರ ಅತಿ ಹೆಚ್ಚು ಋಕ್ಗಳಿಂದ ಸ್ತುತಿಸಲ್ಪಡುವವನು ಅಗ್ನಿ ಮಾತ್ರ. ಅದು ಅಗ್ನಿರ್ವೈ ದೇವಾ: ಸಂಸ್ಕೃತಿ. ಹವಿಸ್ಸನ್ನು ಎಲ್ಲ ದೇವತೆಗಳಿಗೂ ಮುಟ್ಟಿಸುವವನು ಅಗ್ನಿಯೇ. ಹೀಗಾಗಿ ವೈದಿಕಾರ್ಯರ ಪಾಲಿಗೆ ಅಗ್ನಿಯೇ ಮಹೋನ್ನತ ದೈವತವಾಗಿದೆ. ವೈದಿಕರು ಭಾರತಕ್ಕೆ ಕಾಲಿಟ್ಟ ನಂತರ ಇಲ್ಲಿನ ಮೂಲ ನಿವಾಸಿಗಳಾಗಿದ್ದಿರಬಹುದಾದವರ ಜಲಸಂಸ್ಕೃತಿಯನ್ನು ಹೀಗಳೆದು ಅಗ್ನಿ ಸಂಸ್ಕೃತಿಯನ್ನು ಬದುಕಿನ ಎಲ್ಲ ಹಂತಗಳಲ್ಲೂ ಬಲವಂತದಿಂದಲೂ, ಹೆದರಿಸಿಯೂ ಹೇರಿದರು. ಎಲ್ಲರೂ ಈ ಸಾಂಸ್ಕೃತಿಕ ಹೇರಿಕೆಯನ್ನು ಚಕಾರವೆತ್ತದೆ ಒಪ್ಪಿಕೊಂಡರೆಂದೇನಿಲ್ಲ. ಪ್ರಾರಂಭದ ಹಂತದಲ್ಲಿ ತಮ್ಮ ಮೂಲ ಸಂಸ್ಕೃತಿಯಿಂದ ತಮ್ಮನ್ನು ಬೇರ್ಪಡಿಸಿದ್ದನ್ನು ತೀವ್ರವಾಗಿಯೇ ಪ್ರತಿಭಟಿಸಿದ ಜಲಸಂಸ್ಕೃತಿಯವರು ಕ್ರಮೇಣ ತಮ್ಮ ಪ್ರತಿಭಟನೆ- ಪ್ರತಿರೋಧಗಳನ್ನು ಆಚರಣೆಗಳ ಮುಸುಗಲ್ಲಿ ಸಂರಕ್ಷಿಸಿ ಮುಂದುವರೆಸುತ್ತ ಬಂದರು. ಸಂಕ್ರಾಂತಿಯಂದು ದನಗಳಿಂದ (ನಂದಿ) ಬೆಂಕಿ ತುಳಿಸುವುದು, ಪುರವಂತಿಕೆಯಲ್ಲಿ ಈರಭದ್ರನೇ ದಕ್ಷನ ಯಜ್ಞ ಕುಂಡ ಹಾಯ್ದು ಬೆಂಕಿ ತುಳಿವುದು, ನೀರನ್ನು ಹೊತ್ತ ಕರಗಧಾರಿ ಬೆಂಕಿಯನ್ನು ತುಳಿದು ಅಪಮಾನಿಸುವುದು, ತಾನೇ ಸ್ವತ: ನೀರಿನ ದೇವತೆಯಾದ ಗಂಗೆ ತನ್ನ ಶಿರಸ್ಸನ್ನು ಹೊತ್ತವನ ಮೈದುಂಬಿ, ಪ್ರಾಪಂಚಿಕ ಅಗ್ನಿಯಾದ ಸೂರ್ಯನನ್ನು ದುರುಗುಟ್ಟಿಕೊಂಡು ನೋಡುತ್ತ ಎದುರಿಗಿನ ಬೆಂಕಿಯನ್ನು ತುಳಿದು ನಡೆವುದು, ಗ್ರಾಮೀಣ ಮಾತೃದೇವತೆಯರೆಲ್ಲರೂ ಜಾತ್ರೆಗಳಂದು ಕೊಂಡ ಹಾಯುವುದು... ಹೀಗೆ ನೂರಾರು ಬೆಂಕಿ ತುಳಿದು ಅಪಮಾನಿಸುವ ಆಚರಣೆಗಳನ್ನಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಅಗ್ನಿಸಂಸ್ಕೃತಿಯ ವೈದಿಕರು ನೀರನ್ನು ತುಳಿದು ಅಪಮಾನಿಸುವ ಆಚರಣೆಗಳೂ ಉಂಟು.

 

ಸೋಮನ ಕುಣಿತದ ಸಂದರ್ಭದಲ್ಲಿ ಗ್ರಾಮೀಣ ದೇವತೆ ಗಂಗೆಯ ಪೂಜೆಗೆ ಹೊರಡುವುದು ಆ ದೇವತೆ ಜಲಸಂಸ್ಕೃತಿಯ ಪರವಾದವಳು ಎಂಬುದನ್ನು ಸಾಬೀತು ಪಡಿಸುವಂತೆಯೇ ನಂತರ ಅಗ್ನಿಕೊಂಡ ಹಾಯುವುದು ಬೆಂಕಿಯನ್ನು ತುಳಿದು ವಿರೋಧಿಸುವ ಕ್ರಿಯೆಯೇ ಆಗಿದೆಯೆಂಬುದನ್ನು ನಾವು ಅರಿಯಬೇಕಿದೆ. ಬಲಿಯ ಆಚರಣೆಯಂತೂ ದ್ರಾವಿಡ ಸಂಸ್ಕೃತಿಯ ಪ್ರಪ್ರಾಚೀನ ನಡವಳಿಕೆಯಾಗಿದೆ. ಇದಷ್ಟೇ ಅಲ್ಲದೆ ‘ಮೈದುಂಬುವ’ ಪರಿಕಲ್ಪನೆ ಆಫ್ರಿಕದಿಂದ ಮೊದಲ್ಗೊಂಡು ಆಸ್ಟ್ರೇಲಿಯಾದ ಮೂಲನಿವಾಸಿಗಳವರೆಗೂ ಬಹುತೇಕ ಎಲ್ಲಾ ಆದಿವಾಸಿ ಜನಾಂಗಗಳಲ್ಲಿರುವಂತದ್ದೇ. ವಿಪರ್ಯಾಸವೇನೆಂದರೆ ವೈದಿಕ ಸಂಸ್ಕೃತಿಯಲ್ಲಿ ದೈವ ಮೈದುಂಬುವ ಪರಿಕಲ್ಪನೆಯ ಪ್ರಾಥಮಿಕ ಅಂಶಗಳೂ ಗೋಚರಿಸುವುದಿಲ್ಲವೆಂಬುದು. ವಸ್ತುಸ್ಥಿತಿ ಹೀಗಿರುವಾಗ ಅವೆಸ್ತಾದ ಹೋಮ ಅರ್ಥಾತ್ ವೈದಿಕರ ಸೋಮ ಅಗ್ನಿಯನ್ನು ತುಳಿದು, ಗಂಗೆ ಪೂಜೆಗೆ ಹೊರಡುವ ತನ್ನ ಅದಿದೈವದ ಅಂಗರಕ್ಷಕನಾಗಿ ಮೈದುಂಬಿಸಿಕೊಳ್ಳುವುದೆಂದರೇನು? ಅಗ್ನಿ ಮತ್ತು ಜಲ-ಎರಡನ್ನು ಒಟ್ಟಿಗಿರಿಸುವ ವಿರೋಧಾಬಾಸ, ಅರ್ಥಹೀನ ಮತ್ತು ತರ್ಕಹೀನದ ಆಚರಣೆಗೆ ನಾವು ಸಮ್ಮತಿಸುವುದೆಂದರೆ ಸಾಂಸ್ಕೃತಿಕ ಹೇರಿಕೆಯ ಗುಲಾಮತನವನ್ನು ನಾವು ಒಪ್ಪಿಕೊಂಡಂತಲ್ಲವೇ? ಅಗ್ನಿ ಮತ್ತು ನೀರು ಯಾವುದೇ ಜನಾಂಗಭೇದವಿಲ್ಲದೆ ಎಲ್ಲರಿಗೂ ಅವಶ್ಯಕವಾದ ಅಂಶಗಳೆಂಬುದು ಸತ್ಯವಾದರೂ ಇಲ್ಲಿ ನಾವು ಚರ್ಚಿಸುತ್ತಿರುವುದು ಕೇವಲ ಸಂಸ್ಕೃತಿ ನೆಲೆಯ ನಂಬಿಕೆಗಳನ್ನು ಮಾತ್ರ, ಹಾಗಾಗಿ ಸೋಮನ ಕುಣಿತವೆಂಬುದೆ ಮೂಲದಲ್ಲಿ ಈರಣ್ಣ-ಕೆಂಪಮ್ಮರ ಕುಣಿತವಷ್ಟೇ ಆಗಿರಬಲ್ಲದು. ಇಲ್ಲದಿದ್ದಲ್ಲಿ ಸೋಮನೆಂಬ ಹೆಸರೇ ಈ ಆಚರಣೆಯ ಸಂದರ್ಭದಲ್ಲಿ ಯಾಕಾಗಿ ಅನಿವಾರ್ಯ ಎಂಬುದಕ್ಕೆ ಕೂಡ ಗಟ್ಟಿಯಾದ ಸಮರ್ಥನೆಗಳೂ ಇಲ್ಲ. ಈ ನೆಲದ ಮೂಲ ಸಂಸ್ಕೃತಿಯ ಸ್ವರೂಪವನ್ನು ಪುನಾರಚಿಸುವ ನಿಟ್ಟಿನಲ್ಲಿ ಇಂತಹ ಮರುಮೌಲ್ಯ ಮಾಪನಗಳ ಅಗತ್ಯ ಎಷ್ಟಾದರೂ ಇದೆ.

 

ಕಲೆಯ ವಿವರಗಳು:

ಸೋಮನ ಕುಣಿತದ ಮುಖವಾಡ ಮಾಮೂಲಿ ಮನುಷ್ಯನ ಮುಖಕ್ಕಿಂತಲೂ ಐದಾರು ಪಟ್ಟು ದೊಡ್ಡದಾಗಿರುತ್ತದೆ.ಈ ಮುಖವಾಡಗಳನ್ನು ರಕ್ತಬೂತಾಳೆ ಎಂಬ ವಿಚಿತ್ರ ಹೆಸರಿನ ಮರದಿಂದಲೇ ತಯಾರಿಸಬೇಕೆಂಬ ಕಟ್ಟುನಿಟ್ಟಾದ ನಿಯಮವೇ ಇದೆ.ಹೀಗೆ ತಯಾರಿಸುವಾಗಲೂ ಅದರದ್ದೇ ಆದ ವಿಧಿ ನಿಯಮಗಳಿದ್ದು ಇಂದಿಗೂ ಅವನ್ನು ಶ್ರದ್ಧೆಯಿಂದಲೇ ಅನುಸರಿಸಲಾಗುತ್ತದೆ.

 

ಮುಖವಾಡದಲ್ಲಿ ಅಗಲವಾದ ಹಣೆ, ವಿಶಾಲವಾದ ಕಿವಿಗಳು, ಕಣ್ಣುಗಳು ಮತ್ತು ದೊಡ್ಡ ಮೂಗು ಇರುವಂತೆ ಕೆತ್ತಲಾಗುತ್ತದೆ.ದಕ್ಷಿಣ ಭಾರತದ ಎಲ್ಲ ದೈವಗಳ ಅಂಗರಕ್ಷಕರಿಗೂ ಇರುವಂತೆ ಈ ಸೋಮನಿಗೂ ಕೋರೆ ಹಲ್ಲುಗಳಿರುತ್ತವೆ. ಮುಖವಾಡಕ್ಕೆ ಬಳಿದ ಬಣ್ಣಗಳು ಕೂಡ ತೀವ್ರ ಸಂವೇದನೆಗಳಿಗೆ ಸಂಬಂಧಿಸಿದ ಕೆಂಪು, ಹಳದಿ ಮತ್ತು ಕಪ್ಪು ಬಣ್ಣಗಳೇ ಎಂಬುದೂ ಇಲ್ಲಿ ಮುಖ್ಯ. ಮುಖವಾಡದ ಹಿಂಬದಿಗೆ ಬಿದರಿನ ಕಮಾನನ್ನು ರಚಿಸಿ ಬಣ್ಣ ಬಣ್ಣದ ಬಟ್ಟೆ- ಸೀರೆಗಳಿಂದ ಪ್ರಭಾವಳಿ ನಿರ್ಮಿಸಿ ಅಲಂಕರಿಸಲಾಗುತ್ತದೆ. ಸುಮಾರು ಹತ್ತು ಹನ್ನೆರಡು ಬಣ್ಣ ಬಣ್ಣದ ಸೀರೆಗಳನ್ನು ಕುಣಿವವನ ಕಾಲುಗಳವರೆಗೂ ಇಳಿಬಿಟ್ಟಂತೆ ಎರಡೂ ಬದಿಗಳಲ್ಲಿ ನೇತುಬಿಡುತ್ತಾರೆ. ಸೋಮನ ಮುಖವಾಡದಲ್ಲಿ ತಲೆ ತೂರಿಸಿ ಹೊತ್ತು ಕುಣಿಯುವ ಕಲಾವಿದರಿಗೆ ಹೊರಗಿನದು ಸ್ಪಷ್ಟವಾಗಿ ಕಾಣಿಸಲು ಅನುಕೂಲವಾಗುವಂತೆ ಮುಖವಾಡದ ಮೂಗಿನ ಹೊಳ್ಳೆಗಳಿಗೂ, ಕಲಾವಿದನ ಕಣ್ಣುಗಳಿಗೂ ಹೊಂದಿಕೆಯಾಗುವಂಥ ದೃಷ್ಠಿಗೋಚರ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.

 

ಕುಣಿವವರು ಸೊಂಟಕ್ಕೆ ಹರಕೆಯ ಸೀರೆಯನ್ನು ಸುತ್ತಿಕೊಂಡು ಕೊರಳಲ್ಲಿ ದೇವರ ತಾಳಿ ಧರಿಸಿರುತ್ತಾರೆ. ಬಹುಶ: ಕೆಂಪುಸೋಮ ಅಥವ ಕೆಂಪಮ್ಮನ ಮುಖವಾಡಧಾರಿಗೆ ಮಾತ್ರ ಈ ತಾಳಿ ಧರಿಸುವ ನಿಯಮವಿದ್ದದ್ದು ಬಹುಶ: ಈಗದು ಈರಣ್ಣನಿಗೂ ಅನಗತ್ಯ ವಿಸ್ತರಿಸಿಕೊಂಡಂತಿದೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಬೆಳ್ಳಿ ಕಡಗದ ಜೊತೆಗೆ ಕರಗಧಾರಿಯಂತೆಯೇ ಮತ್ತೊಂದು ಕೈಯಲ್ಲಿ ಬೆಳ್ಳಿ ಬೆತ್ತವಿರುತ್ತದೆ.

 

ಹರೆ, ದೋಣು, ತಮಟೆ, ನಗಾರಿ ಮತ್ತು ಮುಖವೀಣೆಗಳ ವಾದನ, ಗತ್ತು ಮತ್ತು ಸ್ತುತಿ ಪದಗಳಿಗೆ ತಕ್ಕಂತೆ ಕುಣಿವವನು ಹೆಜ್ಜೆ ಹಾಕುತ್ತಾನೆ. ಗಮನಿಸಲೇ ಬೇಕಾದಂತಹ ಮುಖ್ಯ ಅಂಶವೆಂದರೆ ತಂತ್ರಪಂಥ ಮೂಲದ ಈ ಮುಖವಾಡಗಳಿಗೆ ಆ ಪಂಥದಲ್ಲಿ ವಿಶೇಷ ಮಹತ್ವ ನೀಡಲಾಗುವ ಕೆಂಪು ದಾಸವಾಳ, ಕೆಂಪು ಕಣಿಗಲೆ ಮತ್ತು ಹೊಂಬಾಳೆಗಳಿಂದ ಅಲಂಕರಿಸಲಾಗುತ್ತದೆಂಬುದು.

 

ಸೋಮನ ಕುಣಿತವು ಮಂಡ್ಯ, ತುಮಕೂರು, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.ಅಂದರೆ ಹಳೇ ಮೈಸೂರು ಪ್ರಾಂತ್ಯಕ್ಕೇ ವಿಶಿಷ್ಟವಾದ ಜಾನಪದ ಕುಣಿತವಿದು.

 

 

ಇತ್ತೀಚಿನ ನವೀಕರಣ​ : 13-06-2023 02:45 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080