ಅಭಿಪ್ರಾಯ / ಸಲಹೆಗಳು

ಪೂಜಾ ಕುಣಿತ

ಪೂಜಾ ಕುಣಿತವು ಕೂಡ ಮೂಲದಲ್ಲಿ ತಂತ್ರ ಪಂಥದ್ದಾಗಿದ್ದು ಅದರ ಪಳೆಯುಳಿಕೆಯಾಗಿಯಷ್ಟೇ ಈಗ ಪೂಜಾ ಕುಣಿತದ ಮಾದರಿ ಉಳಿದುಕೊಂಡಿದೆ. ಜಾನಪದದಲ್ಲಿನ ಅನೇಕ ಆಚರಣೆ ಮತ್ತು ಕಲೆಗಳು ಅವುಗಳ ಮೂಲ ಶೈಲಿ ಮತ್ತು ವಿನ್ಯಾಸಗಳಿಂದ ದೂರ ಸರಿದಿದ್ದು ಉದ್ದೇಶವನ್ನು ಅರ್ಥ ಮಾಡಿಕೊಳ್ಳಲು ಸಹ ಸಾಧ್ಯವಾಗದಂತಾಗಿದೆ. ಪೂಜಾ ಕುಣಿತವು ನಿಸ್ಸಂಶಯವಾಗಿಯೂ ಶಾಕ್ತಪಂಥದ ಶಾಖೆಯದ್ದೇ. ಮಾತೃದೇವತೆಯ ಆರಾಧನಾ ವಿಧಾನಗಳಲ್ಲಿನ ಒಂದು ವೈಖರಿ.

 

ತಮ್ಮ ನಂಬಿಕೆಯ ಆರಾಧ್ಯ ಮಾತೃಮೂರ್ತಿಯನ್ನು ಸರ್ವಾಲಂಕೃತ ಮಾದರಿಯ ಮೂಲಕ ಹೊತ್ತು ಮೆರೆಸುವುದು ಗುಡ್ಡರ ಈ ಹೊತ್ತಿನ ಉದ್ದೇಶವಿದ್ದಂತಿದೆ. ಆದರೂ ಪ್ರಾಚೀನ ಕಾಲದಲ್ಲಿ ಶಾಕ್ತ ಪಂಥದ ಅಧಿದೇವತೆಯನ್ನು ಬೆತ್ತಲಾಗಿಸಿ ಗುಡ್ಡರು ಅಥವ ಅಂದಿನ ಆರಾಧಕರಾಗಿದ್ದವರು ತಾವೂ ಸಂಪೂರ್ಣ ನಗ್ನವಾಗಿ ದೇವತೆಯನ್ನು ತಲೆ ಮೇಲೆ ಹೊತ್ತು ತಾಂತ್ರಿಕ ಆಚರಣೆಗಳನ್ನು ವಿಧಿಪೂರ್ವಕವಾಗಿ ಆಚರಿಸಲು ಶ್ಮಶಾನಗಳಿಗೆ ಹೊತ್ತೊಯ್ಯುತ್ತಿದ್ದರು. ಹೀಗೆ ನಗ್ನ ಮಾತೃದೇವತೆಯನ್ನು ತಲೆಯಮೇಲಿರಿಸಿ ಓಡುವಾಗ ಬೇರೆ ಯಾರೊಬ್ಬರೂ ದೇವತೆಯನ್ನು ನೋಡಬಾರದೆಂಬ ನಿಯಮವೂ ಮತ್ತು ಮೂರ್ತಿಯನ್ನು ಹೊತ್ತವನು ಎಲ್ಲಿಯೂ ನಿಲ್ಲದೆ, ಹಿಂದಿರುಗಿ ನೋಡದೆ ಸಂಬಂಧಿಸಿದ ಮಂಡಲ ರಚನೆಯ ಮಧ್ಯಭಾಗದಲ್ಲಿ ಇಡಬೇಕೆಂಬ ಕಟ್ಟುನಿಟ್ಟಿನ ನಿಯಮವೂ ಇತ್ತು. ಈ ಆಚರಣೆ ಸಹಜವಾಗಿಯೇ ಅಪರಾತ್ರಿಗಳಲ್ಲಿಯೇ ಜರಗುತ್ತಿದ್ದುದು. ತಂತ್ರ ಪಂಥಗಳ ಅತಿವಾಮಾಚರಣೆಯ ಬಗ್ಗೆ ಸಮಾಜದಲ್ಲಿ ಅನಾದರಣೆ ಬೆಳೆದ ನಂತರ ಈ ಬಗೆಯ ಆಚರಣೆಗಳಲ್ಲಿ ನಾಗರಿಕ ಸಮಾಜಕ್ಕೆ ಸಮ್ಮತವಾಗಬಲ್ಲಂತಹ ಬದಲಾವಣೆಗಳನ್ನು ಕ್ರಮೇಣ ತಂದುಕೊಂಡಿರಬಹುದು. ಈ ಬಗೆಯ ಪಲ್ಲಟ ಮತ್ತು ಬದಲಾವಣೆಗಳ ಕಾರಣದಿಂದಾಗಿಯೇ ಇಂದು ಬಹುಶಃ ಪೂಜಾ ಕುಣಿತದಲ್ಲಿ ನಗ್ನ ಶಾಕ್ತದೇವತೆಯ ಬದಲಿಗೆ ಆಯಾ ಪ್ರದೇಶದ ಗ್ರಾಮದೇವತೆಗಳಾದ ಮಾರಮ್ಮ, ಚೌಡಮ್ಮ, ಮುತ್ಯಾಲಮ್ಮ, ಗೌಡಚಂದ್ರಮ್ಮನಂತಹ ದೇವತೆಗಳು ಬಂದು ಕೂತಿದ್ದಾರೆ. ಆದರೆ ಪ್ರಾಚೀನ ಕಾಲದಲ್ಲಿ ಅವರು ಯಾವ ಶಾಕ್ತದೇವತೆಯ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದರೆಂಬ ಮಾಹಿತಿಗಳೆಲ್ಲವೂ ಇಂದು ಇತಿಹಾಸದ ಕತ್ತಲಲ್ಲಿ ಹೂತು ಹೋಗಿದೆ. ಜೊತೆಗೆ ಆ ಶಾಕ್ತಪಂಥವು ಶೈವ ಮೂಲದ್ದೋ ಜೈನ-ಬೌದ್ಧ-ಆಜೀವಕ ಅಥವ ಇನ್ನಿತರ ತಂತ್ರಪಂಥಗಳ ಶಾಖೆಗಳಾದ ಕೌಲ ಕಾಳಾಮುಖವೋ ಹೇಳಬಲ್ಲವರಿಲ್ಲ. ಚೌಡಿ, ಚಾಮುಂಡಿ, ಚೌಡಮ್ಮ ಇಂದು ಮುಖ್ಯ ಪ್ರವಾಹದ ಪ್ರತಿಷ್ಠಿತ ದೇವತೆಯಾಗಿ ಸಕಲ ರೀತಿಯಲ್ಲೂ ಸಾಂಸ್ಕೃತೀಕರಣಗೊಂಡಿದ್ದರೂ ಮೂಲದಲ್ಲಿ ಚಾಮುಂಡಿಯೂ ಒಬ್ಬ ಪ್ರಮುಖ ಶಾಕ್ತದೇವತೆಯೇ ಆಗಿದ್ದಳೆಂಬುದನ್ನು ನಾವು ಮರೆಯುವಂತೆಯೂ ಇಲ್ಲ. ಇದಲ್ಲದೆಯೂ ಪೂಜಾ ಕುಣಿತವು ಶಾಕ್ತದ ಬೇರೆ ಬಗೆಯ ಆಚರಣೆಯ ಪಳೆಯುಳಿಕೆಯೂ ಆಗಿರಬಹುದು. ಸಂಶೋಧನೆಯ ಮೂಲಕವಷ್ಟೇ ಸತ್ಯ ಸಂಗತಿಗಳನ್ನು ನಾವು ಅರಿಯಲು ಸಾಧ್ಯ.

 

ಈ ಹೊತ್ತು ಆಚರಿಸಲ್ಪಡುವ ಪೂಜಾ ಕುಣಿತದ ಮಾಹಿತಿಗಳು ಈ ರೀತಿಯಲ್ಲಿವೆ. ಮೂಲತ: ಕಡುಶ್ರದ್ಧೆಯ, ಕಟ್ಟುನಿಟ್ಟಿನ ಆರಾಧನಾತ್ಮಕ ಆಚರಣೆಯಾಗಿದ್ದರಬಹುದಾದ ಪೂಜಾ ಕುಣಿತವು ಇಂದು ಮನರಂಜನಾತ್ಮಕ ಹಂತದಲ್ಲಿಯಷ್ಟೇ ಉಳಿದಿದೆ. ಹೀಗೆ ಮನರಂಜನೆಯ ಉದ್ದೇಶಕ್ಕೆ ಅಗತ್ಯವಾದ ಬದಲಾವಣೆಗಳಿಗೂ ಒಳಪಟ್ಟಿದೆ.

 

ಪೂಜೆಯಲ್ಲಿ ಎರಡು ಬಗೆಗಳಿವೆ. ದೇವತೆಯ ಉತ್ಸವ ಮಾರ್ತಿಯನ್ನು ಒಂದು ಅಡ್ಡೆಗೆ ಬಿಗಿದು ನಾಲ್ಕಾರು ಜನ ಹೆಗಲ ಮೇಲೆ ಹೊತ್ತು ಮೆರೆಸುವುದು ಒಂದು ಬಗೆ. ತಳಿ ಅಥವ ತಟ್ಟೆಯಲ್ಲಿ ಅಲಂಕರಿಸಿದ ಪೂಜೆಯನ್ನು ಒಬ್ಬರೇ ಹೊತ್ತು ಕುಣಿಸುವುದು ಮತ್ತೊಂದು ಬಗೆ.

 

ಸುಮಾರು ಐದು ಅಡಿ ಎತ್ತರ, ನಾಲ್ಕು ಅಡಿ ಅಗಲದ ಸೀಳಿದ ಬಿದಿರು ದೆಬ್ಬೆಗಳ ಚೌಕಾಕೃತಿಯ ಹಂದರ ಸಿದ್ಧಪಡಿಸಿ ವಿಗ್ರಹವನ್ನಿಡಲು ಹಲಗೆ ಜೋಡಿಸುತ್ತಾರೆ. ಹಲಗೆಯ ಮೇಲೆ ದೇವತೆಯ ಪುಟ್ಟ ವಿಗ್ರಹವನ್ನು ಕೂರಿಸಿ ಭಕ್ತರು ಸಲ್ಲಿಸಿದ ಹರಕೆ ಆಭರಣಗಳನ್ನು ತೊಡಿಸುತ್ತಾರೆ. ಕೆಲವೆಡೆ, ಪೂರ್ಣಚಂದ್ರ ಅಥವ ಅರ್ಧ ಚಂದ್ರಾಕೃತಿಯ ಪ್ರಭಾವಳಿ, ಬೆಳ್ಳಿಯ ಮುಖವಾಡದೊಂದಿಗೆ ಹಂದರದ ಮಧ್ಯಭಾಗದಲ್ಲಿ ಬಿಗಿಯುತ್ತಾರೆ. ಹಂದರದ ತುದಿಯಲ್ಲಿ ಐದು ಅಥವ ಏಳು ಕಳಸಗಳನ್ನು ಕಟ್ಟುತ್ತಾರೆ. ಹಂದರದ ಮುಂಭಾಗದಲ್ಲಿ ಹರಕೆಯ ಸೀರೆಗಳನ್ನು ಇಳಿಬಿಟ್ಟು ಹಿಂದುಗಡೆಗೆ ಬೆನ್ನು ಬಟ್ಟಿ ಕಟ್ಟುತ್ತಾರೆ. ನಂತರ ಹೂಗಳಿಂದ ಇಡೀ ಹಂದರವನ್ನು ಅಲಂಕರಿಸುತ್ತಾರೆ. ಹಂದರದ ತಳಭಾಗದಲ್ಲಿ ತಲೆಯ ಮೇಲೆ ಹೊರಲು ಅನುಕೂಲವಾಗುವಂತೆ ಹಿತ್ತಾಳೆಯ ಗಿಂಡಿಯನ್ನು ಸೇರಿಸಿ ಕಟ್ಟುತ್ತಾರೆ. ಇದನ್ನೇ ‘ಪೂಜೆ’ ಎಂದು ಕರೆಯುತ್ತಾರೆ.

 

ಬನೀನು, ನಿಕ್ಕರ್ ಅಥವ ಪಂಚೆ, ಹಣೆಗೆ ವಿಭೂತಿ, ಕುಂಕುಮ, ಕಾಲಿಗೆ ಗೆಜ್ಜೆ ಧರಿಸಿದ ಕಲಾವಿದ ತಮಟೆ, ನಗಾರಿ, ಹರೆಗಳ ನಾದಕ್ಕೆ ತಕ್ಕಂತೆ ಕುಣಿಯುತ್ತಾನೆ. ಮೂರರಿಂದ ಹದಿನಾಲ್ಕರವರೆಗೂ ವಿವಿಧ ಹೆಜ್ಜೆ ಮಟ್ಟುಗಳಿವೆ. ಅದಲ್ಲದೆ ತೊಟ್ಟಿಲು ಕುಣಿತ, ಹಾಯ್ಗುಣಿತ, ಗೆಜ್ಜೆ ಕುಣಿತ, ಸುತ್ತು ಕುಣಿತ ಮತ್ತು ಎದುರು ಕುಣಿತಗಳೆಂಬ ಇತರ ಪ್ರಕಾರಗಳೂ ಇವೆ. ಬೋರಲು ಹಾಕಿದ ಮಡಕೆಗಳ ಮೇಲೆ ಹೆಜ್ಜೆ ಇಟ್ಟು ನಡೆವುದು, ಒಂದೇ ಕಡೆ ನಿಂತು ಕತ್ತು ಬೀಸಿ ಪೂಜೆಯನ್ನಿಡೀ ತಲೆಯ ಮೇಲೆ ಒಂದು ಸುತ್ತು ಬರುವಂತೆ ತಿರುಗಿಸುವುದು, ನೆಲದ ಮೇಲಿನ ನೋಟು ಮತ್ತು ಸೂಜಿಗಳನ್ನು ತುಟಿಯಿಂದ ಕಚ್ಚಿಹಿಡಿದು ಎತ್ತುವುದು…. ಹೀಗೆ ಬೇರೆ ಬೇರೆ ಬಗೆಯ ಚಮತ್ಕಾರಗಳನ್ನು ನಡೆಸುತ್ತಾರೆ. ಕೆಲವಡೆ ಪೂಜಾ ಕುಣಿತದೊಂದಿಗೆ ಒನಕೆ ಕುಣಿತವೂ ಇರುತ್ತದೆ.

 

ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪೂಜಾ ಕುಣಿತ ಹೆಚ್ಚು ಪ್ರಚಲಿತದಲ್ಲಿದೆ.

 

ಇತ್ತೀಚಿನ ನವೀಕರಣ​ : 13-06-2023 02:54 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080