ಅಭಿಪ್ರಾಯ / ಸಲಹೆಗಳು

ಕೊಂಬು ಕಹಳೆ

ಕೊಂಬು ಕಹಳೆಗಳು ಸಮರ ವಾದ್ಯಗಳು. ಅವುಗಳ ಹೆಸರೇ ಸೂಚಿಸುವಂತೆ ಕೋಣ ಅಥವ ಹೋರಿಯ ಭರ್ಜರಿ ಕೊಂಬುಗಳನ್ನೇ ಗಾಳಿವಾದ್ಯಗಳಾಗಿಸಿ ಬಳಸಲಾಗುತ್ತಿತ್ತು. ಹಿಂದೆ ಈ ಕೊಂಬು ಕಹಳೆಯನ್ನೇ ರಣ ಕಹಳೆ ಎಂದು ಕರೆಯಲಾಗುತ್ತಿತ್ತು. ಕೋಟೆಯ ಎಂಟು ದಿಕ್ಕಿನ ಬುರುಜುಗಳ ಮೇಲೆ ಕಾವಲು ನಿಂತವರು ಶತ್ರು ಸೈನ್ಯ ಆಗಮಿಸುವುದನ್ನು ದೂರದಿಂದಲೇ ಗುರುತಿಸಿ ಕೋಟೆಯೊಳಗಿನ ತಮ್ಮ ಸೈನಿಕರನ್ನು ಎಚ್ಚರಿಸುವ ಸಲುವಾಗಿಯೇ ಕೊಂಬು ಕಹಳೆಯನ್ನು ಊದಲಾಗುತ್ತಿತ್ತು. ಅದಷ್ಟೇ ಅಲ್ಲದೆ ಯುದ್ಧವನ್ನು ಆರಂಭಿಸುವ ಮುನ್ನವೂ ಸೈನಿಕರನ್ನು ಹುರಿದುಂಬಿಸುವ ಸಲುವಾಗಿಯೂ ಕೊಂಬು ಕಹಳೆಯನ್ನು ಊದಲಾಗುತ್ತಿತ್ತು. ಹಾಗೆಯೇ ಯುದ್ಧದ ನಿಲುಗಡೆಯ ಸೂಚನೆಯಾಗಿಯೂ ಕೊಂಬು ಕಹಳೆಯನ್ನು ಬಳಸಲಾಗುತ್ತಿತ್ತು. ಪುರಾಣ ಮತ್ತು ಮಹಾಕಾವ್ಯಗಳಲ್ಲಿನ ಯುದ್ಧದ ಸಂದರ್ಭಗಳಲ್ಲಿ ಹೇಗೆ ಶಂಖಗಳನ್ನು ಊದುವುದರ ಮೂಲಕ ಯುದ್ಧದ ಆರಂಭ ಹಾಗೂ ಅಂತ್ಯಗಳನ್ನು ಸೂಚಿಸಲಾಗುತ್ತಿತ್ತೋ ಹಾಗೆಯೇ ಇತಿಹಾಸದ ರಾಜರಾಡಳಿತಗಳಲ್ಲಿ ಕೊಂಬು ಕಹಳೆಗಳನ್ನು ಸಹ ಅದೇ ಉದ್ದೇಶಕ್ಕೆ ಬಳಸಲಾಗುತ್ತಿತ್ತು.

ಜಾನಪದ ಸಾಹಿತ್ಯದಲ್ಲೇ ‘ಕೊಂಬುಗಳು ಕರೆದಾವ ಕಾಳಿಗಳು ಊದ್ಯಾವ | ದಿಮ್ಮಿ ಕರಡೆಲ್ಲ ಕಣಕಣಿಸಿ- ನಿಬ್ಬಣದ| ಅಬ್ಬರ ಸಂಭ್ರಮ ಕೇಳ್ಯಾವ|’ ಎಂಬ ಉಲ್ಲೇಖವಿದೆ. ಇಲ್ಲಿ ಕೊಂಬು ರಣವಾದ್ಯವಾಗಿ ಬಳಕೆಯಾಗುತ್ತಿಲ್ಲ. ಬದಲಿಗೆ ಮದುವೆಯ ನಿಬ್ಬಣದ ಅಥವ ದಿಬ್ಬಣದ ಸಂಭ್ರಮ ಸೂಚಕವಾಗಿ ಬಳಕೆಯಾಗುತ್ತಿದೆ. ಹಿಂದೆ ಶ್ರೀಮಂತರ ಮನೆಯ ಮದುವೆ ಸಂದರ್ಭಗಳಲ್ಲಿ ಗಂಡಿನ ಕಡೆಯ ನಿಬ್ಬಣ ಬರುತ್ತಿರುವುದನ್ನು ಹೆಣ್ಣಿನ ಕಡೆಯವರಿಗೆ ತಿಳಿಸಲೆಂದೇ ಕೊಂಬು ಕಹಳೆಗಳನ್ನು ಊದುವ ಪದ್ಧತಿಯಿತ್ತು. ಜೊತೆಗೆ ಕೊಂಬು ಕಹಳೆಗಳ ಬಳಕೆ ಗೌರವದ ಸಂಕೇತವೂ ಹೌದು.

ಕೊಂಬು ಕಹಳೆ ವಾದ್ಯಗಳನ್ನು ದಲಿತ ವರ್ಗಗಳವರು ಬಹುತೇಕ ತಮ್ಮ ವಂಶ ಪಾರಂಪರ್ಯ ಕಲೆಯನ್ನಾಗಿಸಿಕೊಂಡಿದ್ದರು. ಈ ಕೊಂಬು ಮತ್ತು ಕಹಳೆಗಳು ಒಂದೇ ರೀತಿಯ ಗಾಳಿ ವಾದ್ಯಗಳಾದರೂ ಎರಡೂ ಭಿನ್ನ ಭಿನ್ನ. ಕೊಂಬು ಕೋಣನ ಕೊಂಬಿನಿಂದಲೇ ಸಿದ್ಧಗೊಳ್ಳುತ್ತಿತ್ತು. ಕೊಂಬಿನ ಒಳಭಾಗವನ್ನು ಶುಚಿಗೊಳಿಸಿ, ಅದರ ಚೂಪಾದ ತುದಿಭಾಗವನ್ನು ಕೊರೆದು ರಂಧ್ರ ಮಾಡಿದರೆ ಬಹುತೇಕ ಕೊಂಬು ವಾದ್ಯ ಸಿದ್ಧವಾದಂತೆಯೇ. ಆ ರಂಧ್ರದ ಚೂಪುಭಾಗದ ಕಡೆಯಿಂದ ಊದಿದರೆ, ಗಾಳಿ ಕೊಂಬಿನ ಒಳಗಿನ ಟೊಳ್ಳು ಭಾಗದಲ್ಲಿ ಕಂಪನಗಳೆಬ್ಬಿಸಿ, ಕೊಂಬು ಅಗಲಗೊಳ್ಳುತ್ತ ಹೋದಂತೆ ನಾದವೂ ವರ್ಧಿಸುತ್ತ ತಾರಕ ಸ್ವರದೊಂದಿಗೆ ಹೊಮ್ಮಿ ಬಹುದೂರದವರೆಗೂ ಕೇಳಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತದೆ. ಬಹುದೂರದವರೆಗೂ ಕೊಂಬು ಕಹಳೆಯ ನಾದವು ಕೇಳಿಸುತ್ತದೆಂಬ ಕಾರಣದಿಂದಲೇ ಅವುಗಳ ಬಳಕೆಯನ್ನು ತರಲಾಯಿತು.

ಕೊಂಬಿನ ವಾದ್ಯ ಕೇವಲ ಕರ್ನಾಟಕಕ್ಕಷ್ಟೇ ಸೀಮಿತವಾದುದಲ್ಲ. ಜಗತ್ತಿನ ಅನೇಕ ಭಾಗಗಳಲ್ಲಿ ಕೊಂಬು ವಾದ್ಯದ ಬಳಕೆಯಿತ್ತು. ಬಹುಶ: ಈಗಲೂ ಉಳಿದಿರಬಹುದು. ಕೊಂಬು ಕಹಳೆ ಊದುವವರು ರಾಜರ ಕಾಲದಲ್ಲಿಯಂತೆಯೇ ಇಂದಿಗೂ ಒಂದು ನಿರ್ದಿಷ್ಟ ವೇಷಭೂಷಣ ಧರಿಸಿ ಗಮನ ಸೆಳೆಯುತ್ತಾರೆ. ಈಗೀಗ ಕೋಟು ಮತ್ತು ಪೇಟ ಅಥವ ರುಮಾಲು ಈ ಕಲಾವಿದರ ವೇಷವಾಗಿ ಉಳಿದಿದೆ. ಕೊಂಬು ಮತ್ತು ಕಹಳೆ ಊದುವ ಕಲಾವಿದರಿಗೆ ಉಸಿರು ಹೊರಹೊಮ್ಮಿಸುವ ಶಕ್ತಿ ಹೆಚ್ಚಿರಬೇಕಾದ ಅಗತ್ಯವಿದೆ. ಅಂದರೆ ಕೊಂಬು ಕಹಳೆಯ ಕಲಾವಿದರ ಧಂಸಾಸ್ನ ಸಾಮxÀåðದ ಮೇಲೆಯೇ ಆ ವಾದ್ಯದ ಬಳಕೆಯ ಸಾಮರ್ಥ್ಯವೂ ಅವಲಂಬಿತವಾಗಿರುತ್ತದೆ. ಒಂದು ಕಾಲಕ್ಕೆ ಜೀವನೋಪಾಯದ ಮಾರ್ಗವಾಗಿದ್ದ ಕೊಂಬು ಕಹಳೆಗಳ ವಾದನವಿಂದು ಕೇವಲ ಜಾನಪದ ವಲಯದ ಒಂದು ವಾದ್ಯ ವಿಶೇಷವಾಗಿಯಷ್ಟೇ ಬಳಕೆಗೊಳ್ಳುವ ಹಂತಕ್ಕೆ ಸೀಮಿತಗೊಂಡಿದೆ. ಉತ್ಸವ, ಜಾತ್ರೆ, ಗಣ್ಯರ ಸ್ವಾಗತ, ಮೆರವಣಿಗೆ, ಧಾರ್ಮಿಕ ಆಚರಣೆಗಳ ಮಟ್ಟಿಗಷ್ಟೇ ಈಗ ಕೊಂಬು ಕಹಳೆಗಳ ಬಳಕೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕಂಬಳ, ಭೂತಕೋಲಗಳಲ್ಲೂ ಅಸ್ಪೃಶ್ಯರಾದ ನಲಿಕೆಯವರು ಕೊಂಬು ಕಹಳೆ ಊದುತ್ತಾರೆ.

ಕಹಳೆಯನ್ನು ಸಾಮಾನ್ಯವಾಗಿ ಹಿತ್ತಾಳೆಯಿಂದ ತಯಾರಿಸಿ ಸಿದ್ಧಪಡಿಸಲಾಗುತ್ತದೆ. ಹೆಚ್ಚೂ ಕಡಿಮೆ ಇಂಗ್ಲೀಷಿನ S ಆಕಾರದಲ್ಲಿನ ಹಿತ್ತಾಳೆ ತಗಡಿನ ಕಹಳೆಯ ವಿನ್ಯಾಸವನ್ನು ಎರಡು ಮೂರು ಭಾಗಗಳಲ್ಲಿ ತಯಾರಿಸಿ ನಂತರ ಒಂದಕ್ಕೊಂದು ಸೇರಿಸಿ ಬೆಸುಗೆ ಹಾಕುತ್ತಾರೆ. ಬೆಸುಗೆ ಹಾಕಿದ್ದು ಗೊತ್ತಾಗದಂತೆ ಹಿತ್ತಾಳೆಯ ಕಲಾತ್ಮಕವಾದ ಉರುಟು ಬಳೆಗಳನ್ನು ಜೋಡಿಸಿ ಅಲಂಕರಿಸುತ್ತಾರೆ. ಊದುವ ಕಿರಿದಾದ ಭಾಗಕ್ಕೆ ಹಿತ್ತಾಳೆಯ ಕಿರಿದಾದ ಉದ್ದ ಪಟ್ಟಿಯನ್ನು ಜೋಡಿಸುತ್ತಾರೆ. ಗಾಳಿ ವಾದ್ಯಗಳ ಗುಂಪಲ್ಲಿ ಕಹಳೆಗೇ ಅಗ್ರ ಸ್ಥಾನ. ಕಹಳೆಯ ದನಿ ಒಂದೆರಡು ಮೈಲುಗಳವರೆಗೂ ಕೇಳಿಸಬಲ್ಲದು. ಕಹಳೆಯಲ್ಲಿ S ಆಕಾರದ್ದಷ್ಟೇ ಅಲ್ಲದೆ ಅರ್ಥಚಂದ್ರಾಕೃತಿಯ ಕಹಳೆಗಳೂ ಇದ್ದು ಅವೇ ಹೆಚ್ಚು ಪ್ರಸಿದ್ಧಗೊಂಡಿವೆ.

ಹಿಂದೆ ಕಹಳೆಯ ಮೂಲಕ ಹದಿನಾಲ್ಕು ಬಗೆಯ ನಾದಗಳನ್ನು ಹೊರಡಿಸುತ್ತಿದ್ದರಂತೆ. ಯುದ್ಧದಲ್ಲಿ ರಣಕಹಳೆ, ಬೇಟೆಯಲ್ಲಿ ಹುಲಿಗಹಳೆ, ಪ್ರತಿಷ್ಠೆಗಾಗಿ ಬಿದಿರು ಕಹಳೆ, ಸಮಯ ಸೂಚಿಸಲಿಕ್ಕಾಗಿ ಜಾವಗಹಳೆಯಂತ ಭಿನ್ನ ನಾದ ಹೊರಡಿಸಬಲ್ಲ ಕಹಳೆಗಳೂ ಅಸ್ತಿತ್ವದಲ್ಲಿದ್ದವೆಂಬ ಉಲ್ಲೇಖಗಳೂ ಉಂಟು.

ಕೊಂಬು ಕಹಳೆಗಳು ಮೈಸೂರು, ಮಂಡ್ಯ, ಬೆಂಗಳೂರು, ತುಮಕೂರು ಮುಂತಾದ ಕಡೆಗಳಲ್ಲಿ ಹೆಚ್ಚು ಬಳಕೆಯಲ್ಲಿವೆ. ಕೊಂಬು ಅತ್ಯಂತ ಪ್ರಾಚೀನ ವಾದ್ಯರೂಪವಾಗಿದ್ದು, ಕಹಳೆ ಬಹುಶ: ಅದರ ಸುಧಾರಿತ ರೂಪವಾಗಿರಬಹುದೆಂಬ ಅಭಿಪ್ರಾಯ ಜಾನಪದ ವಿದ್ವಾಂಸರಲ್ಲಿದೆ.

 

 

 

ಇತ್ತೀಚಿನ ನವೀಕರಣ​ : 20-09-2020 12:33 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080