ಅಭಿಪ್ರಾಯ / ಸಲಹೆಗಳು

ಕರಗ ನೃತ್ಯ ಅಥವ ಶಕ್ತ್ಯೋತ್ಸವ

ತಮಿಳುನಾಡಿನಿಂದ ಶತಮಾನಗಳ ಹಿಂದೆಯೇ ಕರ್ನಾಟಕಕ್ಕೆ ವಲಸೆ ಬಂದ ತಿಗಳರು ಅಥವ ಪಳ್ಳಿಗರೆಂದು ಕರೆಸಿಕೊಳ್ಳುವ ಜನಾಂಗದವರು ಪ್ರತಿ ವರ್ಷ ಚೈತ್ರಮಾಸದ ಹುಣ್ಣಿಮೆಯಂದು ನಡೆಸುವ ಶಕ್ತ್ಯುತ್ಸವವೇ ಕರಗ ಆಚರಣೆ. ತಿಗಳರು ತರಕಾರಿ ಮತ್ತು ಹೂಗಳನ್ನು ಬೆಳೆವ ತೋಟಗಾರಿಕೆಯಲ್ಲಿ ಪರಂಪರಾಗತ ಅನುಭವ ಮತ್ತು ಪರಿಣಿತಿಯನ್ನು ಪಡೆದ ಜನಾಂಗ. ಸಾಧಾರಣವಾಗಿ ಕಾಯಕ ಜೀವಿಗಳ ವೃತ್ತಿಗೂ ಅವರು ಸೃಷ್ಟಿಸಿಕೊಳ್ಳುವ ಪುರಾಣಗಳಿಗೂ ಅತ್ಯಂತ ನಿಕಟ ಸಂಬಂಧಗಳಿರುತ್ತದೆ. ತಾವೇ ಬೆಳೆದ ಮಲ್ಲಿಗೆ ಹೂಗಳಿಂದ ಅಲಂಕರಿಸಿದ ಹೂಕರಗವನ್ನು ಹೊತ್ತು ಬೆಳದಿಂಗಳಲ್ಲಿ ಕುಣಿಯುವಾಗಿನ ಸೊಬಗನ್ನು ಹೂಗಳನ್ನು ಬೆಳೆದ ಕಣ್ಣುಗಳು ಸವಿಯುವ ಪರಿಯೇ ಬೇರೆ…………..

 

ಕರಗದ ಆಚರಣೆ ನಿಸ್ಸಂಶಯವಾಗಿಯೂ ಪ್ರಾಚೀನವಾದುದೇ. ಒಂದು ಸಾವಿರ ವರ್ಷದ ಹಿಂದೆಯೇ ಕನ್ನಡ ಸಾಹಿತ್ಯದಲ್ಲಿ ‘ಕರಗಂಬೊತ್ತು’ ಎಂಬ ಪದದ ಪ್ರಯೋಗವಾಗಿರುವುದನ್ನು ನಾವು ಮರೆಯುವಂತೆಯೂ ಇಲ್ಲ. ಆದರೆ ‘ಕರಗಂಬೊತ್ತು’ ಪದ ಪ್ರಯೋಗದ ಸಾಂದರ್ಭಿಕ ಅರ್ಥ ಜಲಕುಂಭ ಅಥವ ನೀರಿನ ಕಲಶ ಎಂದೇ ಆಗುತ್ತದೆ. ಹಾಗೆ ನೋಡಿದರೆ ‘ಕರಗ’ ಎಂಬ ಪದಕ್ಕೆ ಜಲಸೂಚಕ ಅರ್ಥಪರಂಪರೆಯೇ ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಇರುವುದು ಕೂಡ ಗಮನಾರ್ಹ. ನೀರು, ಮಳೆ, ಮೇಘ ಇತ್ಯಾದಿ ನೀರಿನ ಸಂಬಂಧದ ಅರ್ಥಗಳೇ ನಿಘಂಟುಗಳಲ್ಲೂ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಹಳಗನ್ನಡದಲ್ಲಿ ನೀರಿನ ಕಲಶಗಳನ್ನೇ ಕರಗವೆಂದು ಕರೆಯುತ್ತಿದ್ದರೆಂಬುದು ಸ್ಪಷ್ಟವಾಗುತ್ತದೆ. ಆದರೂ ಕರಗವೆಂದರೆ ಕೇವಲ ನೀರಿನ ಕಲಶಗಳಷ್ಟೇ ಎಂದು ನಾವು ತೀರ್ಮಾನಿಸುವುದು ಕೂಡ ಕೊಂಚ ಕಷ್ಟವೇ. ಯಾಕೆಂದರೆ ಒಂದು ಪದದ ಅರ್ಥಗಳು ಸಾವಯವ ಸಂಬಂಧಗಳ ಮೂಲಕ ವಿಸ್ತರಿಸಿಕೊಳ್ಳುವ ಪರಿ ಭಾಷಾ ವಿಜ್ಞಾನಿಗಳಿಗೆ ತಿಳಿಯದ ವಿಷಯವೇನಲ್ಲ.

 

ದ್ರೌಪದಿಯ ಪಂಥದ ಇಂದಿನ ಕೇಂದ್ರವಾಗಿರುವ ಸೆಂಜಿಯ ಇತಿಹಾಸವನ್ನು ಕರಗ ಪರಂಪರೆಯ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಲೇ ಬೇಕಾಗುತ್ತದೆ. ತಮಿಳುನಾಡಿನಲ್ಲಿ ಮಧುರೆ ಮೀನಾಕ್ಷಿ ಮತ್ತು ಕಂಚಿ ಕಾಮಾಕ್ಷಿಯರು ಆಯಾ ಕಾಲದಲ್ಲಿ ಅಲ್ಲಿ ಆಳಿದ ಅರಸುಮನೆತನಗಳ ಸಂಸ್ಥಾನದೇವತೆಗಳಾಗಿ ಆಯಾ ಸಾಮ್ರಾಜ್ಯಗಳ ಜನರನ್ನು ಭಾವುಕವಾಗಿಯೂ, ಧಾರ್ಮಿಕವಾಗಿಯೂ ಒಂದುಗೂಡಿಸಲು ನೆರವಾಗುತ್ತಿದ್ದವು. ೧೨೦೦-೧೩೦೦ರಲ್ಲಿ ಸೆಂಜಿಯಲ್ಲಿ ಯಾದವರ ಕೋನಾರ್ ಎಂಬ ಅರಸು ಮನೆತನದವರು ರಾಜ್ಯವಾಳುತ್ತಿದ್ದರು. ಆ ಅರಸುಮನೆತನದ ಕೃಷ್ಣ ಕೋನಾರ್ ಎಂಬಾತ ಇತರೆ ಸಂಸ್ಥಾಗಳಲ್ಲಿರುವಂತೆ ತನ್ನ ಸಂಸ್ಥಾನಕ್ಕೂ ಒಬ್ಬ ಅಧಿದೇವತೆಯಿದ್ದಲ್ಲಿ ಜನರನ್ನು ಭಾವುಕವಾಗಿ ಒಂದುಗೂಡಿಸಿ ಸಮರ್ಥ ಆಡಳಿತ ನೀಡಬಹುದೆಂದು ತರ್ಕಿಸಿ ಆತ ದ್ರೌಪದಿಯ ದೇವಾಲಯ ನಿರ್ಮಿಸಿ, ದ್ರೌಪದಿಯನ್ನೇ ತನ್ನ ಸಂಸ್ಥಾನದ ಅಧಿದೇವತೆ ಎಂದು ಘೋಷಿಸಿದ. ಇಂದಿಗೂ ಸೆಂಜಿಯಲ್ಲಿರುವ ದ್ರೌಪದಿಯ ದೇವಾಲಯದಲ್ಲಿ ದ್ರೌಪದಿಯೊಂದಿಗೆ ಕುಂತಿ, ದುರ್ಗೆ ಮತ್ತು ಸುಭದ್ರೆಯರ ವಿಗ್ರಹಗಳಿವೆ. ಈ ಸೆಂಜಿ ದೇವಾಲಯದ ಹಿನ್ನೆಲೆಯಲ್ಲಿ ಒಂದು ಪುರಾಣ ಕಥೆಯೂ ಹುಟ್ಟಿಕೊಂಡಿದೆ. ಹಾಗೆ ಹುಟ್ಟಿಕೊಂಡ ಪುರಾಣ ಕಥೆಯೇ ಬಹುಶಃ ಇಂದಿನ ಕರಗದ ಆಚರಣೆಗೆ ನಾಂದಿ ಹಾಕಿ ಕರಗವೆಂದರೆ ದ್ರೌಪದಿಯಮ್ಮನೇ ಎಂಬ ನಂಬಿಕೆ ಬಲವಾಗಿ ಬೇರೂರುವಂತೆ ಮಾಡಿತು. ಯಾಕೆಂದರೆ ಇಂದಿಗೂ ತಮಿಳುನಾಡಿನಲ್ಲಿ ಕರಗದಾಚರಣೆ ನಡೆಯುವ ಚೈತ್ರಮಾಸದ ಹುಣ್ಣಿಮೆಯಲ್ಲಿ ಏಳು ದಿನ ಇಲ್ಲ ಹದಿನೆಂಟುದಿನಗಳ ಕಾಲ ಮಹಾಭಾರತದ ಪಠಣವಷ್ಟೇ ನಡೆಯುತ್ತದೆಯೇ ಹೊರತು ಕರಗವಲ್ಲ. ಕೆಲವೆಡೆ ಈ ಪಠಣಗಳೊಂದಿಗೆ ಬೀದಿ ಬಯಲಾಟವೂ ನಡೆಯುತ್ತದೆ. ಆದರೆ ಸೆಂಜಿಯನ್ನು ಒಳಗೊಂಡಂತೆ ಎಲ್ಲೂ ಕರಗದ ಕುಣಿತದ ಆಚರಣೆಯಿಲ್ಲ.

 

ಸೆಂಜಿಯ ದ್ರೌಪದಿ ದೇವಾಲಯದ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ಪುರಾಣ ಈ ರೀತಿ ಇದೆ. ಪಾಂಡವರ ವಂಶಕುಡಿಯಾದ ಜನಮೇಜಯನ ನಂತರದ ಹತ್ತನೇ ಸಂತತಿಯ ಸುನೀತ ಎಂಬುವವನು ತನ್ನ ರಾಜ್ಯದ ಮೇಲೆ ದಂಡೆತ್ತಿ ಬಂದ ಬಕಾಸುರನ ವಂಶದ (ಬಕಾಸುರನನ್ನು ಕೊಂದದ್ದು ಭೀಮ ತಾನೆ? ಹಾಗಾಗಿ ಬಕಾಸುರನ ವಂಶದವರಿಗೆ ಭೀಮ ಅರ್ಥಾತ್ ಪಾಂಡವರ ವಂಶದವರು ವೈರಿಗಳೇ ಆಗುತ್ತಾರಲ್ಲವೇ?) ಅಕಲಮಾಸುರನ್ ಎಂಬುವವನ ಹಾವಳಿ ತಡೆಯಲಾರದೆ ಆಪ್ತರಲ್ಲಿ ಸಲಹೆ ಕೇಳುತ್ತಾನೆ. ಅವರು ಅದೇ ವಂಶದ ಶಕ್ತಿಸ್ವರೂಪಿಣಿಯಾದ ದ್ರೌಪದಿಯ ಮೊರೆಹೋಗಿ ಒಲಿಸಿಕೊಳ್ಳುವಂತೆ ತಿಳಿಸುತ್ತಾರೆ. ಸುನೀತ ದ್ರೌಪದಿಯ ಕ್ಷೇತ್ರ ಹುಡುಕಿಕೊಂಡು ಸೆಂಜಿಗೆ ಬಂದು ಅಲ್ಲಿ ದ್ರೌಪದಿಯ ಕುರಿತು ಯಜ್ಞ ನಡೆಸಿ ದ್ರೌಪದಿಯನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ದ್ರೌಪದಿ ಅಲ್ಲಿ ಅನೇಕ ಕಳಶಗಳೊಂದಿಗೆ ಕಾಳಿಯಂತೆ ಶಕ್ತಿಸ್ವರೂಪಿಣಿಯಾಗಿಯೇ ಕಾಣಿಸಿಕೊಳ್ಳುತ್ತಾಳೆ. ನಂತರ ಆಕೆ ನೂರೊಂದು ತಲೆಗಳನ್ನುಳ್ಳ           ಅಕಲಮಾಸುರನನ್ನು ಕೊಲ್ಲುವುದು ಕಷ್ಟವೆಂದು ತಿಳಿಸಿ ಉಪಾಯವೊಂದನ್ನು ಸೂಚಿಸುತ್ತಾಳೆ. ಅದರಂತೆ ಅಕಲಮಾಸುರನ ನೂರು ತಲೆಗಳನ್ನು ತರಿದು ಹಾಕಬಹುದು; ಆದರೆ ಕೊನೆಯದಾದ ನೂರೊಂದನೆ ತಲೆ ಮಾತ್ರ ನೆಲಕ್ಕೆ ತಾಕುವಂತಿಲ್ಲ. ಹಾಗಾಗಿ ಆ ನೂರೊಂದನೆ ತಲೆಯನ್ನು ಯಾರಾದರೂ ಸಮರ್ಥರು ಜೀವನ ಪರ್ಯಂತ ತನ್ನ ಕೈಯಲ್ಲೇ ಹಿಡಿದಿಟ್ಟು ಕೊಂಡಿರಬೇಕಾಗುತ್ತದೆ. ಅಂತಹ ಸಾಮರ್ಥ್ಯವಿರುವವನು ಮಹಾ ಶಿವಭಕ್ತನಾದ ಪೋತುರಾಜು ಮಾತ್ರ. ಹಾಗಾಗಿ ಸುನೀತ ದ್ರೌಪದಿ ದೇವಿಯ ಸಲಹೆಯಂತೆ ಪೋತುರಾಜನನ್ನು ಕರೆಸಿಕೊಂಡು ಅಕಲಮಾಸುರನ ನೂರೊಂದನೆಯ ತಲೆ ಅವನ ಬೊಗಸೆಗೆ ಬೀಳುವಂತೆ ಮಾಡುತ್ತಾನೆ. ಹೀಗೆ ದ್ರೌಪದಿಯ ಸಾಕ್ಷಾತ್ಕಾರ ಅಕಲಮಾಸುರನ ಸಾವು ಮತ್ತು ಸುನೀತನ ವಿಜಯದ ಸಂಕೇತವಾಗಿಯೇ ಚೈತ್ರಮಾಸದ ಹುಣ್ಣಿಮೆ ದ್ರೌಪದಿ ಆರಾಧನೆಯ ವಿಶೇಷ ದಿನವಾಗಿ ದ್ರೌಪದಿ ಪುರಾಣವೂ ಅದರೊಂದಿಗೆ ಬೆರೆತು ಕರಗವು ದ್ರೌಪದಿ ದೇವಿಯದು ಎಂಬಂತಾಗಿ ಹೋಯಿತು. ಈ ಕರಗ ಮತ್ತು ದ್ರೌಪದಿಯ ಸಮೀಕರಣವಾದದ್ದು ಬಹುಶಃ ಕರ್ನಾಟಕ ತಮಿಳುನಾಡು ಮತ್ತು ರಾಯಲಸೀಮ ಪ್ರದೇಶಗಳು ಸಂಧಿಸುವ ಗಡಿ ಪ್ರದೇಶಗಳಲ್ಲಿ. ಕರಗದ ಆಚರಣೆಯಿರುವುದೂ ಈ ಪ್ರದೇಶದಲ್ಲಿ ಮಾತ್ರ.

 

ಜಲಸಂಸ್ಕೃತಿಯ ಲಿಂಗ, ಶಿವ ಮತ್ತು ಗಂಗೆಗೂ, ಅಗ್ನಿಯಲ್ಲಿ ಹುಟ್ಟಿದ ದ್ರೌಪದಿಗೂ ಎಲ್ಲಿಗೆಲ್ಲಿಯ ಸಂಬಂಧ? ಪ್ರಾಚೀನ ಕಾಲದಿಂದಲೂ ಜಲ ಸಂಸ್ಕೃತಿಯ ಲಿಂಗಾರಾಧಕರು, ಪಳೆಯಮ್ಮನ್ ಎಂಬ ಮಾತೃದೇವಿಯ ಆರಾಧಕರು, ಕೃಷಿ ಮೂಲದ ಫಲವಂತಿಕೆಯ ಸಂಸ್ಕೃತಿಯಲ್ಲೇ ತೋಟಗಾರಿಕೆಯ ಕಸುಬನ್ನೇ ವಂಶ ಪಾರಂಪರ್ಯ ವೃತ್ತಿಯನ್ನಾಗಿ ಮಾಡಿಕೊಂಡ ಪಳ್ಳಿಗರಿಗೂ ಯಜ್ಞಕುಂಡದ ಬೆಂಕಿಯಲ್ಲಿ ಜನಿಸಿದವಳೆಂಬ ಪುರಾಣದ ದ್ರೌಪದಿಗೂ ಕೂಡ ಹೀಗೆ ಯಾವ ಸಂಬಂಧವೂ ಇಲ್ಲ. ಇಡೀ ದಕ್ಷಿಣ ಭಾರತವೇ ಉತ್ತರದ ಸಾಂಸ್ಕೃತಿಕ ಯಜಮಾನಿಕೆಗೆ ಒಳಪಡುತ್ತ ಹೋದಂತೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳು ಹಾಗೂ ಇನ್ನಿತರ ಪುರಾಣಗಳು ಕೂಡ ದಕ್ಷಿಣಭಾರತದ ಸಾಂಸ್ಕೃತಿಕ ಜಗತ್ತನ್ನು ಪ್ರಭಾವಿಸುತ್ತ ಹೋದವು. ಈ ಬಗೆಯ ಪ್ರಭಾವದ ಕಾರಣದಿಂದಾಗಿಯೆ ದಕ್ಷಿಣದಲ್ಲಿ ಮಹಾಭಾರತ ಪಠಣದಂತಹ ಆಚರಣೆಗಳು ಜಾರಿಗೆ ಬಂದವು. ಅವು ಕ್ರಮೇಣ ಸ್ಥಳೀಯ ಸಾಂಸ್ಕೃತಿಕ, ಧಾರ್ಮಿಕ ಪರಿಕಲ್ಪನೆಗಳನ್ನೇ ಬದಲಿಸಿ ಉತ್ತರದ ಇಂಗಿತಗಳಿಗೆ ಹೊಂದುವಂತಹ ಹೊಸ ಸಂಬಂಧಗಳ ಸ್ವರೂಪವನ್ನು ಸ್ಪಷ್ಟಿಸಿಕೊಳ್ಳುತ್ತ ಹೋದವು.

 

ಈ ಬಗೆಯ ಬೆಳವಣಿಗೆ ಎಂತಹ ಅನಾಹುತಗಳಿಗೆ ದಾರಿಮಾಡಿಕೊಟ್ಟಿತೆಂದರೆ ನೀರು ಮತ್ತು ಬೆಂಕಿಯನ್ನು ಒಂದೇ ಎಂದು ಭಾಷಿಕ ಚಮತ್ಕಾರಗಳ ಮುಸುಗಲ್ಲಿ ಸಾಧಿಸಿಬಿಟ್ಟವು. ಹಾಗಾಗಿಯೇ ಜಲಮೂಲ ಸಂಸ್ಕೃತಿಯವರಾದ ಪಳ್ಳಿಗರು ಒಮ್ಮೆ ದ್ರೌಪದಿಯನ್ನು ತಮ್ಮ ಕುಲಮೂಲ ದೇವತೆ ಎಂದು ಒಪ್ಪಿಕೊಂಡಾದ ಮೇಲೆ ಆ ಜಲಮೂಲವೇ ಅಗ್ನಿಮೂಲವಾಗಿ ಪರಿವರ್ತಿತಗೊಂಡು ಬೆಂಕಿಯಲ್ಲಿ ದ್ರೌಪದಿ ಹುಟ್ಟಿದವಳಾದ್ದರಿಂದ ತಾವೂ ಕೂಡ ಅಗ್ನಿ ವಂಶಜರೆಂದೂ ವಹ್ನಿ(ಬೆಂಕಿ) ಕುಲವೆಂದು ಮುಗ್ಧವಾಗಿ ನಂಬತೊಡಗಿದರು. ದುರಂತವೆಂದರೆ ಈಗವರಿಗೆ ತಾವು ಜಲಸಂಸ್ಕೃತಿಯ ಮೂಲದ ಜನಾಂಗದವರೆಂಬ ನೆನಪು ಕೂಡ ಉಳಿದಿಲ್ಲ. ಅಷ್ಟೇ ಅಲ್ಲ; ಬೆಂಕಿಮೂಲದವರೇ ಎಂದೂ ಸಾಧಿಸಲಿಕ್ಕೆ ಇಲ್ಲದ ಪವಾಡ, ಪುರಾಣವುಗಳನ್ನೆಲ್ಲ  ಸೃಷ್ಟಿಸಿಕೊಂಡುಬಿಟ್ಟಿದ್ದಾರೆ. ಇದು ಸಾಂಸ್ಕೃತಿಕ ವಿಸ್ಮೃತಿಯ ದುರಂತ.

 

ಅಗ್ನಿ ಎಂಬುದು ಕಕೇಷಿಯನ್ ಮೂಲದ ಆರ್ಯಭಾಷಿಕರ ಪಾಲಿನ ಆರಾಧ್ಯ ದೈವ. ಪಾರ್ಸಿಗಳು ಇಂದಿಗೂ ಅಗ್ನಿ ಪೂಜಕರೆ. ಪಾರ್ಸಿಗಳ ದೇವಾಲಯಗಳಲ್ಲಿ ಇಂದಿಗೂ ನಾವು ಯಜ್ಞ ಕುಂಡದಲ್ಲಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗಳ ಲಾಂಛನಗಳನ್ನು ಗಮನಿಸಬಹುದು. ಭಾರತದ ವೈದಿಕಾರ್ಯರಿಗೂ ಅಗ್ನಿಯೇ ಪವಿತ್ರತೆಯ ಸಂಕೇತ. ಇಂಡೋ-ಯುರೋಪಿಯನ್ನಿನ ಆರ್ಯ ಭಾಷಾ ವರ್ಗದ ಅನೇಕ ಪಾಶ್ಚಿಮಾತ್ಯ ದೇಶಗಳ ಭಾಷೆಗಳಲ್ಲಿ ಇಂದಿಗೂ ಸಂಸ್ಕೃತದ ‘ಅಗ್ನಿ’ ಎಂಬ ಪದದ ಧ್ವನಿ ಸಾಮೀಪ್ಯವನ್ನು ಕೂಡ ಭಾಷಾ ವಿಜ್ಞಾನಿಗಳು ಈಗಾಗಲೇ ಗುರುತಿಸಿಟ್ಟಿದ್ದಾರೆ. ಉದಾಹರಣೆಗೆ ಗಮನಿಸಬಹುದಾದಲ್ಲಿ ಸಂಸ್ಕೃತ ಭಾಷೆಯಲ್ಲಿ ‘ಅಗ್ನಿ’ ಎಂತಿದ್ದರೆ ಅದಕ್ಕೆ ಸಂವಾದಿತ ಪದ ‘ಇಗ್ನಿ’ (Ignious) ಎಂದೇ ಉಳಿದಿದೆ ಗ್ರೀಕ್, ಲ್ಯಾಟಿನ್, ಜರ್ಮನ್, ಲಿಥುವೇನಿಯ ಹೀಗೆ ಅನೇಕ ಭಾಷೆಗಳಲ್ಲಿ ಸಂಸ್ಕೃತ ಮತ್ತು ಪಾರ್ಸಿಯಲ್ಲಿನ ಧಾರ್ಮಿಕ ಮೂಲದ ಪಾರಿಭಾಷಿಕ ಪದಗಳ ಧ್ವನಿಯನ್ನೇ ಹೋಲುವ ಸಾವಿರಾರು ಪದಗಳು ಇಂದಿಗೂ ಉಳಿದಿದ್ದು ಅವುಗಳ ಪಟ್ಟಿ,  ವ್ಯುತ್ವತ್ತಿ ಮೂಲ, ಬೇರುಗಳನ್ನೆಲ್ಲಾ ಭಾಷಾ ವಿಜ್ಞಾನಿಗಳು ಸಂಶೋಧಿಸಿ ಪಟ್ಟಿ ಮಾಡಿಕೊಟ್ಟಿದ್ದಾರೆ.

 

ಪ್ರೋಟೋ-ಆಸ್ಟ್ರಲಾಯ್ಡ್ ಅಥವ ಆಸ್ಟ್ರಲಾಯ್ಡ್ ಮೂಲದವರೂ ದ್ರಾವಿಡ ಭಾಷಾವರ್ಗದವರೂ ಆದ ಪಳ್ಳಿಗರಿಗೂ ಪಾರ್ಸಿ-ಸಂಸ್ಕೃತಿ ಮತ್ತು ಆರ್ಯಭಾಷೆಗಳಿಗೂ ಹೇಗೆ ತಾನೇ ಕುಲಮೂಲದ ನಿಕಟ ಸಂಬಂಧಗಳು ಪ್ರಾಚೀನ ಕಾಲದಿಂದಲೂ ಇದ್ದಿರಲಿಕ್ಕೆ ಸಾಧ್ಯ? ತಮ್ಮ ಮೂಲ ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಹರೆ ಮತ್ತು ಅಸ್ಮಿತೆಯನ್ನು ಪಳ್ಳಿಗರಷ್ಟೇ ಅಲ್ಲದೆ ದಕ್ಷಿಣ ಭಾರತದ ನೂರಾರು ಜಾತಿ, ಜನಾಂಗಗಳವರು ಬಿಟ್ಟುಕೊಟ್ಟು ತಮ್ಮ ಆತ್ಮಗೌರವಗಳಿಂದ ವಂಚಿತರಾಗಿದ್ದಾರೆ. ಅದರ ಫಲವೇ ತಮ್ಮದಲ್ಲದ ಹಾಗೂ ತಮ್ಮ ಮೇಲೆ ಹೇರಲ್ಪಟ್ಟ ಧರ್ಮ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮದೆಂದೇ ಒಪ್ಪಿ ಬಲವಾಗಿ ಸಮರ್ಥಿಸಿಕೊಳ್ಳುವ ದ್ವಿತೀಯ ದರ್ಜೆಯ ಬದುಕನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಜಗತ್ತಿನ ಸಂಸ್ಕೃತಿ ಚಿಂತಕರನೇಕರು ಒಪ್ಪಿಕೊಂಡಿರುವಂತೆ ಯಾವುದೇ ಒಂದು ಜನಾಂಗವನ್ನು ನಾಶಪಡಿಸಬೇಕಾದರೆ ಮೊದಲು ಅವರ ಭಾಷೆ ಮತ್ತು ಸಂಸ್ಕೃತಿಯನ್ನು ನಾಶಪಡಿಸಿದರೆ ಸಾಕಂತೆ. ಅದು ಈಗಾಗಲೇ ಘಟಿಸಿಯಾಗಿದೆ. ಪಶ್ಚಿಮದ ಬಿಳಿಯರು, ಬಂಡವಾಳಶಾಹಿಗಳಾಗಿ ವಿಕಾಸಗೊಂಡಿರುವ ಪಾರ್ಸಿಗಳು ಮತ್ತು ಸಾಂಸ್ಕೃತಿಕ ಯಜಮಾನಿಕೆಯ ಭಾರತೀಯ ಆರ್ಯರೊಂದಿಗೆ ದೈಹಿಕ ಶ್ರಮದ ಪಳ್ಳಿಗರನ್ನು ಎಲ್ಲಿ ಇಟ್ಟು ಹೋಲಿಸಲು ಸಾಧ್ಯ ?!

 

ಸಾಂಸ್ಕೃತಿಕವಾಗಿ ಪಲ್ಲಟಗೊಂಡ ಇಂದಿನ ಕರಗ ಆಚರಣೆಯ ವಿವರಗಳು ಹೀಗಿವೆ :

 

ಕರಗ ಆಚರಣೆಯ ಹಿನ್ನೆಲೆಯಲ್ಲಿ ಇಂದಿಗೂ ತಿಗಳ ಜನಾಂಗದಲ್ಲಿ ರೂಢಿಯಲ್ಲಿರುವ ಕಥೆಗಳು ಸಾಂಸ್ಕೃತೀಕರಣಗೊಂಡ ನಂತರ ಹುಟ್ಟುಕೊಂಡಂತಹವು. ಕೆಲವು ಕಥೆಗಳನ್ನು ಇಲ್ಲಿ ಪರಿಶೀಲಿಸಬಹುದು.

 

ಕಥೆ ೧ : ಪಾಂಡವರು ದ್ರೌಪದಿಯ ಶೀಲದ ಬಗ್ಗೆ ಸಂಶಯ ತಾಳಿ, ಆಕೆಯ ಪಾತಿವ್ರತ್ಯವ ಪರೀಕ್ಷೆಗಾಗಿ ಪೋತುರಾಜನಿಂದ ಕರಗವನ್ನು ತರಿಸುತ್ತಾರೆ. ದ್ರೌಪದಿ ಹರಿಷಿಣದ ಬಟ್ಟೆ ಧರಿಸಿ, ಕರಗವನ್ನು ತಲೆಯ ಮೇಲೆ ಹೊತ್ತು ಕೈಯಲ್ಲಿ ವೀರಚಾಟಿ ಹಾಗೂ ಬೆಳ್ಳಿ ಬೆತ್ತ ಹಿಡಿದು ಅಗ್ನಿಪ್ರವೇಶ ಮಾಡಿ, ಯಾವುದೇ ಹಾನಿಗೊಳಗಾಗದೆ ತಾನು ಪತಿವ್ರತೆ ಎಂದು ಸಾಬೀತು ಮಾಡುತ್ತಾಳೆ. ಈ ನೆನಪಿಗಾಗಿ ಇಂದಿಗೂ ಕರಗವನ್ನು ಆಚರಿಸಲಾಗುತ್ತದೆ.

 

ಕಥೆ ೨ : ಪಾಂಡವರ ಸ್ವರ್ಗಾರೋಹಣ ಪ್ರಸ್ಥಾನದಲ್ಲಿ ಮಾರ್ಗಮಧ್ಯೆಯೇ ಆಯಾಸಗೊಂಡು ದ್ರೌಪದಿ ಮೂರ್ಚಿತಳಾಗಿ ಬೀಳುತ್ತಾಳೆ. ದ್ರೌಪದಿ ಮರಣಿಸಿದಳೆಂದೇ ತಿಳಿದು ಪಾಂಡವರು ಆಕೆಯನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗುತ್ತಾರೆ. ಒಂಟಿ ಹೆಣ್ಣನ್ನು ಕಂಡ ತಿಮಿರಾಸುರನೆಂಬ ರಾಕ್ಷಸ ಆಕೆಯನ್ನು ಬಲಾತ್ಕರಿಸಹೋಗುತ್ತಾನೆ. ಸಿಟ್ಟಿಗೆದ್ದ ದ್ರೌಪದಿ ಆದಿಶಕ್ತಿ ಸ್ವರೂಪವನ್ನು ಧರಿಸಿ ತಲೆಯ ಮೇಲೆ ಕರಗಹೊತ್ತು ತಿಮಿರಾಸುರನನ್ನು ಸಂಹರಿಸುತ್ತಾಳೆ. ಆಗ ಶಿರದಲ್ಲಿ ಧರಿಸಿದ ಕಲಶವೇ ಇಂದಿನ ಕರಗ .

 

ಮೇಲಿನ ಕಥೆಗಳಿಗಿಂತಲೂ ಶಿಥಿಲವಾದ ಇನ್ನೂ ಎರಡು ಮೂರು ಕಥೆಗಳಿವೆಯಾದರೂ ಅವು ಪರಿಶೀಲನಾರ್ಹವು ಕೂಡ ಅಲ್ಲವಾದ್ದರಿಂದ ಇಲ್ಲಿ ಬೇಕಂತಲೇ ಕೈಬಿಡಲಾಗಿದೆ. ಅಗ್ನಿಸಂಭವಳಾದ ದ್ರೌಪದಿ ಅದೇ ಅಗ್ನಿಯನ್ನು ಪ್ರವೇಶಿಸಿ ತನ್ನ ಪಾತಿವ್ರತ್ಯವನ್ನು ನಿರೂಪಿಸುವುದೆಂದರೇನು? ಅವಳು ಹುಟ್ಟಿದ್ದೇ ದ್ರುಪದನ ಯಜ್ಞಕುಂಡದ ಬೆಂಕಿಯಲ್ಲೇ. ಆಗ ಸುಡದ ಬೆಂಕಿ ಈಗ ಪತಿತಳೇ ಆಗಿದ್ದರೂ ಕೂಡ ದ್ರೌಪದಿಯನ್ನು ಸುಟ್ಟೀತೇ? ಎರಡನೆಯದಾಗಿ ಶೀಲದ ಪರಿಕಲ್ಪನೆ. ಆದಿಶಕ್ತಿ ಸ್ವರೂಪಿಣಿಯೆಂದು ಭಾವಿಸಲಾಗುವ ದ್ರೌಪದಿಗೂ ಶೀಲದ ಅನುಮಾನಗಳು ಕಾಡದೆ ಬಿಟ್ಟಿಲ್ಲವೆಂದರೆ ಅದರ ಅರ್ಥ ಸ್ತ್ರೀಗೆ ಮಾತ್ರ ಅಂಟಿಕೊಂಡಿದ್ದ ಶೀಲದ ವಿಷಯದಲ್ಲಿ ಆಕೆಯೂ ಕೂಡ ಸಾಮಾನ್ಯ ಹೆಣ್ಣೇ ಆಗಿದ್ದಳು ಎಂಬ ಮಾಹಿತಿಯನ್ನೇ ನಮಗೆ ನೀಡುತ್ತದೆ. ಇದಷ್ಟೇ ಅಲ್ಲದೆ ಐವರು ಗಂಡಂದಿರನ್ನು ಹೊಂದಿಯೂ ದ್ರೌಪದಿ ಕರ್ಣನನ್ನು ಕೂಡ ಗುಪ್ತವಾಗಿ ಮನಸಲ್ಲೇ ಮೋಹಿಸಿದ್ದಳು. ಈ ವಿಚಾರ ಗೊತ್ತಿದ್ದ ಕೃಷ್ಣ ಋಷಿಯೊಬ್ಬನಿಗೆ ಆಹಾರವಾಗಬೇಕಿದ್ದ ಮಾವಿನ ಹಣ್ಣೊಂದನ್ನು ಅರ್ಜುನ ತನ್ನ ಬಾಣದಿಂದ ಹೊಡೆದುರುಳಿಸಿದಾಗ ಋಷಿಯ ಶಾಪದ ಭಯದಿಂದ ಪುನಃ ಅದನ್ನು ತೊಟ್ಟಿನ ಸ್ವಸ್ಥಾನಕ್ಕೆ ಮರಳಿಸಲು ಪಾಂಡವರೆಲ್ಲರೂ ತಮ್ಮ ಮನದಾಳದಲ್ಲಿನ ರಹಸ್ಯಗಳನ್ನು ತನ್ನ ಬಳಿ ಏಕಾಂತದಲ್ಲಿ ಹೇಳಬೇಕೆಂಬ ಷರತ್ತನ್ನು ವಿಧಿಸಿದಾಗ ದ್ರೌಪದಿ ಕರ್ಣನ ಬಗೆಗಿನ ತನ್ನ ಮೋಹವಾಂಛೆಯನ್ನು ವ್ಯಕ್ತಪಡಿಸುತ್ತಾಳೆ. ಅಂದರೆ ಇಲ್ಲಿ ಶೀಲವೆಂದರೆ ಕೇವಲ ದೇಹಸ್ಪರ್ಶ ಮಾತ್ರವೇ ಅಥವ ಮನಸಿನ ಹಾದರವೂ ಶೀಲವನ್ನು ಕೆಡಿಸಬಲ್ಲದಾ ಎಂಬ ನೈತಿಕ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗುತ್ತದೆ.

 

ಎರಡನೆಯ ಕಥೆಯ ವಿವರಣೆ: ಆರು ಜನ ಸ್ವರ್ಗಾರೋಹಿಗಳಲ್ಲಿ ಮೊದಲನೆಯವಳಾಗಿ ಸ್ವರ್ಗಾರೋಹಣ ಆರ್ಹತೆಯನ್ನು ಕಳೆದುಕೊಳ್ಳುವವಳು ದ್ರೌಪದಿಯೇ. ಅಂದರೆ ಆದಿಶಕ್ತಿ ಸ್ವರೂಪಿಣಿ ಸ್ವರ್ಗವನ್ನು ಸೇರಬೇಕೆಂಬ ಕಲ್ಪನೆಯಾದರೂ ಎಂತಹದು?! ಅವಳು ಸ್ವರ್ಗಕ್ಕೂ ಮುಂಚೆ ಹುಟ್ಟಿದ್ದವಳು. ತ್ರಿಮೂರ್ತಿಗಳಿಗೂ ಮುಂಚೆ ಹುಟ್ಟಿದ್ದವಳು. ಅಂತಹ ಆದಿಶಕ್ತಿಗೇ ಸ್ವರ್ಗಕ್ಕೆ ಪ್ರವೇಶವಿಲ್ಲವೆಂದಾದಲ್ಲಿ ಹುಲು ಮಾನವgÁåರಾದರೂ ಎಂದಿಗಾದರೂ ಸ್ವರ್ಗವನ್ನು ಸೇರುವುದು ಶಕ್ಯವೇ? ಆದರೆ ತನ್ನ ಇಳಿವಯಸ್ಸಿನಲ್ಲಿ ಸ್ವರ್ಗಾರೋಹಣದ ಮಾರ್ಗಾಯಾಸದಿಂದಲೇ ಮೂರ್ಚಿತಳಾಗುವಷ್ಟು ದುರ್ಬಲಳೂ, ಅಶಕ್ತಳೂ ಆಗಿರುವ ದ್ರೌಪದಿಯನ್ನು ಯಾರಾದರೂ ಮೋಹಿಸುವುದೆಂದರೇನು? ಆ ವಯೋವೃದ್ಧೆಯನ್ನು ಶೀಲಗೆಡಿಸಲು ಪೀಡಿಸುವುದೆಂದರೇನು? ಹಾಗೊಮ್ಮೆ ಬಲತ್ಕಾರಿಸಿದನೆಂದೇ ಭಾವಿಸಿದರೂ ನಡಿಗೆಯ ಆಯಾಸಕ್ಕೇ ಮೂರ್ಚೆಹೋಗಿರುವ ದ್ರೌಪದಿ ಆದಿಶಕ್ತಿಸ್ವರೂಪಿಣಿಯಾಗಿ ಆ ತಿಮಿರಾಸುರನನ್ನು ಸಂಹರಿಸುವುದೆಂದರೇನು? ತಿಮಿರಾಸುರನನ್ನು ಸಂಹರಿಸಬಲ್ಲಷ್ಟು ದಿವ್ಯಶಕ್ತಿಗಳನ್ನು ಹೊಂದಿರುವ ದ್ರೌಪದಿ ಅರ್ಥಾತ್ ಆದಿಶಕ್ತಿ ನಡಿಗೆಯ ಆಯಾಸಕ್ಕೆ ಮೂರ್ಚೆಹೋಗುವಷ್ಟು ದುರ್ಬಲಳು ಹೇಗೆತಾನೆ ಆದಾಳು? ಅದೂ ಒತ್ತಟ್ಟಿಗಿರಲಿ ಸ್ವಯಂ ತಾನೇ ಆದಿಶಕ್ತಿಯಾಗಿರುವಾಗ ಸ್ವರ್ಗಕ್ಕೆ ಅನರ್ಹಳಾಗುವುದೆಂದರೇನರ್ಥ? ಸ್ವರ್ಗವನ್ನು ಸೇರಲಾಗದಂತಹ ವ್ಯಕ್ತಿತ್ವವೊಂದು ಅದು ಹೇಗೆ ತಾನೆ ದೈವತ್ವಕ್ಕೇರಿ ಆರಾಧಿಸಲ್ಪಡಬಲ್ಲಳು? ಹೀಗೆ ಕೊನೆಮೊದಲಿಲ್ಲದ ಪ್ರಶ್ನೆ ಅನುಮಾನಗಳ ಸರಪಳಿಯನ್ನೇ ನಾವು ಎದುರಿಸಬೇಕಾಗುತ್ತದೆ. ಒಟ್ಟಾರೆಯಾಗಿ ಪೌರಾಣಿಕ ಹಿನ್ನೆಲೆಯಿಲ್ಲದ ಆದಿಮ ಸ್ವರೂಪದ ಶಾಕ್ತ ಆಚರಣೆಯೊಂದನ್ನು ಹೀಗೆ ಸಾಂಸ್ಕೃತೀಕರಿಸಿ ಪುರಾಣಗಳನ್ನು ಕಟ್ಟಿಕೊಂಡು ಸಮರ್ಥಿಸಹೊರಟರೆ ಹೀಗೆ ಅಸಂಬದ್ಧಗಳ ಮೊತ್ತ ಸೃಷ್ಟಿಯಾಗುತ್ತದೆಂಬುದನ್ನು ನಾವು ಎಚ್ಚರದಿಂದಲೇ ಗಮನಿಸಬೇಕು.

 

ಈ ಹಿಂದೆಯೇ ಹೇಳಿದಂತೆ ಕರಗದ ಆಚರಣೆಯು ಕರ್ನಾಟಕ, ತಮಿಳುನಾಡು ಮತ್ತು ಸೀಮಾಂಧ್ರದ ಗಡಿ ಪ್ರದೇಶದಲ್ಲಿ ಮಾತ್ರ ಪ್ರಚಲಿತದಲ್ಲಿರುವ ವಿಶಿಷ್ಟವೂ, ಆಸಕ್ತಿದಾಯಕವೂ ಆದ ಶಕ್ತ್ಯುತ್ಸವವಾಗಿದೆ. ಚೈತ್ರ ಪೌರ್‍ಣಮಿಗೆ  ಏಳು ದಿನಗಳ ಮೊದಲೇ ಧರ್ಮರಾಯ ದೇವಸ್ಥಾನದ ಮುಂಭಾಗದಲ್ಲಿ ಧ್ವಜಾರೋಹಣದೊಂದಿಗೆ ಕರಗದ ಆರಾಧನೆಯು ವಿದ್ಯುಕ್ತವಾಗಿ ಪ್ರಾರಂಭವಾಗುತ್ತದೆ. ಈ ಧ್ವಜವು ಆದಿಶಕ್ತಿಯ ಆಚರಣೆಯ ಚಾಚಿದ ನಾಲಗೆಯ ವಿನ್ಯಾಸದಲ್ಲಿರುತ್ತದೆ. ಎರಡನೆಯ ದಿನ ದೀಪಾರತಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಗರಡಿ ಮನೆಯ ಯುವಕರು ಪಾಲ್ಗೊಂಡು ದೊಣ್ಣೆವರಸೆ, ಕತ್ತಿವರಸೆ, ಬಿಜಲಿ ವರಸೆ, ಬೆಂಕಿಭರಾಟೆಗಳ ತಮ್ಮ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ. ಮೂರನೆಯ ದಿನ ಅಂದರೆ ತ್ರಯೋದಶಿಯಂದು ಹಸಿಕರಗದ ಆಚರಣೆ ನಡೆಯುತ್ತದೆ. ಪಳ್ಳಿಗ ಕುಲದ ಹಿರಿಯರು, ಕರಗದ ಪೂಜಾರಿ ಅಥವ ಭಾರತ ಪೂಜಾರಿ, ಗಂಟೆ ಪೂಜಾರಿ, ಗಣಾಚಾರಿ ಮತ್ತು ವೀರಕುಮಾರರೆಲ್ಲರೂ ಒಟ್ಟುಕೂಡಿ ಧರ್ಮರಾಯಸ್ವಾಮಿಯ ದೇವಸ್ಥಾನದಿಂದ ಹೊರಟು ನಿರ್ಧಿಷ್ಟ ಪಡಿಸಿದ ನೀರಿನ ಕುಂಟೆಯೊಂದರ ಬಳಿಗೆ ಬರುತ್ತಾರೆ. ಈ ಜಲಪೂಜೆ ಅಥವ ಗಂಗಾ ಪೂಜೆಯ ನಂತರ ಕರಗ ಹೊರುವಾತ ನೀರಿಗಿಳಿದು ನೀರಿನಲ್ಲಿ ಅವಿತಿಟ್ಟಿರುವ ಹಸಿ ಹರಗವನ್ನು ಕೈಗೆತ್ತಿಕೊಂಡು ಮರೆಯೊಂದರಲ್ಲಿ ತಂದಿರಿಸಿ ಅದನ್ನು ಹೂಗಳಿಂದ ಅಲಂಕರಿಸಿ ಹಸಿಕರಗದ ಕುಣಿತಕ್ಕೆ ಸಿದ್ದಪಡಿಸುತ್ತಾರೆ. ಕುಣಿತ ಪ್ರಾರಂಭವಾದೊಡನೆ ವೀರಕುಮಾರರಿಗೆ ಮೈದುಂಬಿ ಎದೆ ಮತ್ತು ಭುಜಗಳಿಗೆ ಕತ್ತಿಗಳಿಂದ ಹೊಡೆದುಕೊಳ್ಳುವ ಅಲಗು ಸೇವೆ ನಡುಯುತ್ತದೆ. ನಂತರ ಹಸಿಕರಗದ ಕುಣಿತ ಮುಂದುವರೆಯುತ್ತದೆ.ಹಾಗೆ ನೋಡಿದರೆ ಹೂವಿನ ಕರಗಕ್ಕಿಂತಲೂ ಹೆಚ್ಚು ಪ್ರಾಚೀನ ಮತ್ತು ಮೂಲ ವಿನ್ಯಾಸ ಉಳಿದುಕೊಂಡಿರುವುದು ಹಸಿಕರಗದಲ್ಲೇ. ಕರಗದ ಆಚರಣೆಯೆಂಬುದೇ ಜಲಮೂಲದ ಹಾಗೂ ಶಾಕ್ತೇಯ ಹಿನ್ನೆಲೆಯ ಆಚರಣೆಯೆಂಬುದನ್ನು ಈ ಹಸಿಕರಗವು ತನ್ನಿಂತಾನೇ ಸಾಬೀತುಪಡಿಸಬಲ್ಲಂತಿದೆ. ಯಾಕೆಂದರೆ ಈ ಹಸಿಕರಗ ಅವಿತಿರುವುದು ನೀರಿನಲ್ಲೇ. ಅದನ್ನು ಹೊರತೆಗೆಯುವ ಮುನ್ನ ಗಂಗೆಗೆ ಪೂಜಿಸಿ ಅನುಮತಿ ಬೇಡಲಾಗುತ್ತದೆ. ಅಂದರೆ ಕರಗದ ಮೂಲ ನೀರೆ ಹೊರತು ಬೆಂಕಿಯಲ್ಲವೆಂಬುದನ್ನು ಈ ಅಂಶವೇ ದೃಢೀಕರಿಸಬಲ್ಲದು. ಹೊರತಂದ ನಂತರ ಅದಕ್ಕೆ ಶಾಕ್ತಾಗಮಗಳ ಪ್ರಕಾರವೇ ಮೊದಲ ಬಲಿ ನೀಡಲಾಗುತ್ತದೆ. ಆದರೆ ಈ ನಡುವೆ ಪುರೋಹಿತನೊಬ್ಬ ಪ್ರವೇಶಿಸಿ ಹಸಿಕರಗಕ್ಕೆ ಪೂಜೆಸಲ್ಲಿಸಿ ತನ್ನ ಪಾಲಿನ ಕಾಣಿಕೆಯನ್ನು ಪಡೆದು ಹೊರಟುಹೋದ ನಂತರ ಆ ಮಲಿನವನ್ನು ಶುದ್ಧೀಕರಿಸುವ ರೀತಿಯಲ್ಲಿ ಶಾಕ್ತಾಗಮಗಳ ಶೈಲಿಯಲ್ಲಿ ಬಲಿ, ಪೂಜೆಗಳು ನಡೆಯುತ್ತವೆ. ನಂತರ ಕರಗದಡಿಗೆ ಅಂಗೈಗಳನ್ನು ನೀಡುತ್ತಾರೆ. ಮೂವರು ಹೀಗೆ ಹಸಿಕರಗವನ್ನು ತಮ್ಮ ಅಂಗೈಗಳಲ್ಲೇ ಎತ್ತಾಡಿಸುತ್ತ ಕುಣಿಯುತ್ತಾರೆ. ಹಸಿಕರಗವನ್ನು ಹೊರುವ ಈ ಮೂವರ ಮಧ್ಯೆ ಚಲನೆಗಳ ಕುರಿತಂತೆ ಸಮತೂಕದ ಹೊಂದಾಣಿಕೆ ಇರಬೇಕಾದುದು ಎಷ್ಟು ಮುಖ್ಯವೋ ದೈಹಿಕವಾಗಿ ಶಕ್ತರೂ, ಸಮರ್ಥರೂ ಆಗಿರಬೇಕಾದ್ದು ಕೂಡ ಅಷ್ಟೇ ಮುಖ್ಯ. ಹಸಿಕರಗದ ನೃತ್ಯವು ನಿಜಕ್ಕೂ ನಯನ ಮನೋಹರವೇ.

 

ಕರಗದ ಆಚರಣೆಯ ಉದ್ದಕ್ಕೂ ವೀರಕುಮಾರರು ಇರಲೇಬೇಕು. ಆದರೆ ಇಡೀ ಕರಗದಾಚರಣೆಯೇ ಸಾಂಸ್ಕೃತಿಕವಾಗಿ ಪಲ್ಲಟಗೊಂಡಿರುವಂತೆಯೇ ಈರಕುಮಾರರು ಕೂಡ ವೀರಕುಮಾರರಾಗಿ ಹೋಗಿದ್ದಾರೆ. ಈರ ಎಂದರೆ ನೀರು. ಈಗಾಗಲೇ ಈ ಅಂಶವನ್ನು ನಾವು ಗಮನಿಸಿದ್ದೇವಷ್ಟೇ. ಈರ್ ಚೆಲ್ಲುವ, ಇರಚಲು, ಈರ್ ತುಂಬಿರುವುದರಿಂದಾಗಿ ಈರುಳ್ಳಿ ಅಥವ ನೀರುಳ್ಳಿ, ನೀರ ನೀಡುವುದರಿಂದ ಈಚಲು, ಈಜು ಹೀಗೆ ಈ ತರದ ಜ್ಞಾತಿ ಪದಗಳು ದ್ರಾವಿಡ ಭಾಷಾವರ್ಗದಲ್ಲಿ ಬೇಕಾದಷ್ಟಿವೆ. ನೀರಿನ ಸಂಸ್ಕೃತಿಯ ಆಚರಣೆಗಳಲ್ಲಿ ಈರಕುಮಾರರು ಅಥವ ಈರಣ್ಣರು ಇರಬಲ್ಲರೇ ಹೊರತು ಸಂಸ್ಕೃತ ಭಾಷೆಯ ವೀರಕುಮಾರರಲ್ಲ. ಇವರು ನಿಸ್ಸಂಶಯವಾಗಿಯೂ ಜಲದೇವತೆ ಅಥವ ಗಂಗೆಯ ಮಕ್ಕಳು ಮತ್ತು ಜಲದೇವತೆಯ ರಕ್ಷಕರು.

 

ನಾಲ್ಕನೆಯ ದಿನ ಪೊಂಗಲು ಸೇವೆ ನಡೆಯುತ್ತದೆ. ಮಹಿಳೆಯರದೇ ಇಲ್ಲಿ ಪ್ರಧಾನ ಪಾತ್ರ. ಹುಣ್ಣಿಮೆಯ ರಾತ್ರಿ ಹೂ ಕರಗದ ಉತ್ಸವ. ಕೆಲವೆಡೆ ಹೂಕರಗದ ಮುನ್ನಾದಿನ ದೀಪಾರಾಧನೆ ನಡೆಯುವುದುಂಟು. ತಂಬಿಟ್ಟಿನ ದೀಪಗಳ ಆರಾಧನೆಯಲ್ಲಿ ಗಂಗೆಯ ಮಕ್ಕಳಾದ ಅಸ್ಪೃಶ್ಯರದು ಪ್ರಧಾನ ಪಾತ್ರವಿರುತ್ತದೆ. ದೀಪಾರಾಧನೆ ಆಯಾಯಾ ಭಾಗದ ಸ್ಥಳೀಯ ದೇವತೆಗಳು ಅಂದರೆ ಮಾತೃದೇವತೆಗಳ ಆರಾಧನೆಯೂ ಆಗಿರುತ್ತದೆ. ಚಾಮುಂಡಿಯ ದೀಪಾರಾಧನೆಯಲ್ಲಿ ಅಲಗು ಸೇವೆಯದೇ ಪ್ರಧಾನ ಆಕರ್ಷಣೆ.

 

ಕರಗ ಹೊರುವ ಪೂಜಾರಿ ಹೂ ಕರಗ ಹೊರುವ ಮುನ್ನ ಅರಿಷಿಣ ಬಣ್ಣದ ಸೀರೆತೊಟ್ಟು, ಬಳೆತೊಟ್ಟು ಪರಿಪೂರ್ಣ ಸ್ತ್ರೀವೇಷಧಾರಿಯಾಗಿ ಬದಲಾಗುತ್ತಾನೆ. ಈ ಅವಧಿಯಲ್ಲಿ ಕರಗದ ಪೂಜಾರಿಯ ಹೆಂಡತಿ ವೈಧವ್ಯದಲ್ಲಿರಬೇಕಾದುದು ಕಡ್ಡಾಯ. ಕರಗದ ಪೂಜಾರಿ ಸ್ತ್ರೀವೇಷ ಧರಿಸುವುದು ದ್ರೌಪದಿಯನ್ನು ಸಂಕೇತಿಸಲಿಕ್ಕಾಗಿ ಎಂಬುದು ಈಗಿನ ಭಾವನೆಯಾದರೂ ಅದು ಬಹುಶಃ ಮೂಲದಲ್ಲಿ ಸ್ತ್ರೀಯರೇ ಕರಗ ಹೊರುತ್ತಿದ್ದರೆಂಬುದೇ ಹೆಚ್ಚು ವಾಸ್ತವಕ್ಕೆ ಹತ್ತಿರವಾದುದು.

 

ಮಲ್ಲಿಗೆಯಿಂದ ಅಲಂಕೃತವಾದ ಕರಗವು ಮಧ್ಯರಾತ್ರಿಯ ನಂತರ ಗುಡಿಯಿಂದ ಹೊರಬಂದು ಊರಿನ ಎಲ್ಲಾ ಬೀದಿಗಳಲ್ಲಿ ಮನೆ ಮನೆಯ ಮುಂದೆಯೂ ಪೂಜೆಯನ್ನು ಸ್ವೀಕರಿಸಿ ಸೂರ್ಯೋದಯದ ಹೊತ್ತಿಗೆ ಪುನಃದೇವಸ್ಥಾನಕ್ಕೆ ವಾಪಸ್ಸಾಗುತ್ತದೆ. ಗುಡಿಗೆ ಮೂರು ಬಾರಿ ಪ್ರದಕ್ಷಿಣೆ ಬಂದನಂತರ ಅಗ್ನಿಕುಂಡ ಹಾಯುವ ಆಚರಣೆ. ತಮ್ಮನ್ನು ಅಗ್ನಿವಂಶಜರೆಂದೂ ತಮ್ಮ ಕುಲಮೂಲ ಪುರುಷನೇ ಅಗ್ನಿಸಂಭವನೆಂದೂ ಇಂದು ಹೇಳಿಕೊಳ್ಳುವ ತಿಗಳರು ಅಗ್ನಿಕುಂಡ ಹಾಯುವ ಮೂಲಕ ಅದೇ ಅಗ್ನಿಯನ್ನು ತುಳಿದು ಪ್ರತಿಭಟಿಸುತ್ತಾರೆ. ತಲೆಮೇಲೆ ಲಿಂಗ ಮತ್ತು ಗಂಗೆಯನ್ನು ಹೊತ್ತು ಸ್ವತಃ ಜಲದೇವತೆಯ ಸ್ತ್ರೀವೇಷಧಾರಿಯಾದ ಕರಗಪೂಜಾರಿ ಅಗ್ನಿಯನ್ನು ತುಳಿದು ವೈದಿಕಾರ್ಯರ ಆಕ್ರಮಣಶೀಲ ಅಗ್ನಿಸಂಸ್ಕೃತಿಗೆ ತನ್ನ ಪ್ರತಿರೋಧವನ್ನು ಹೀಗೆ ಆಚರಣಾತ್ಮಕವಾಗಿ ವ್ಯಕ್ತಪಡಿಸುತ್ತಾನೆ. ಆತನನ್ನು ಹಿಂಬಾಲಿಸಿ ಎಲ್ಲ ಈರಕುಮಾರರೂ ಹಾಗೂ ಭಕ್ತರೂ ಸಹ ಅಗ್ನಿಯನ್ನು ತುಳಿದು ತಮಗೆ ಗೊತ್ತಿಲ್ಲದಂತೆ ಅದಕ್ಕೆ ಅಪಮಾನವೆಸಗುತ್ತಾರೆ. ಅಗ್ನಿ ಪ್ರವೇಶವನ್ನು 'ಪರಿಶುದ್ಧರಾಗಲಿಕ್ಕೆ' ಎಂದು ಸಮಜಾಯಿಷಿ ನೀಡಿದರೂ ಸಹ ನಮ್ಮಲ್ಲಿ ಪರಿಶುದ್ದರಾಗಲಿಕ್ಕೆ ನಾವು ನೀರನ್ನೇ ಬಳಸುವ ಬಹುದೊಡ್ಡ ಪರಂಪರೆಯೇ ಇದೆ. ಜಾನಪದದಲ್ಲಿ ಅರಿವಿನ ಪರಂಪರೆಗೆ ಹೊರತಾದ ಅಥವ ಅದಕ್ಕೆ ತದ್ವಿರುದ್ಧವಾದ ಆಚರಣೆ ಇರಲಿಕ್ಕೆ ಸಾಧ್ಯವಿಲ್ಲ. ಅದೇನಿದ್ದರೂ ಹೇರಿಕೆ ಮಾತ್ರ.

 

ಅಗ್ನಿಕೊಂಡದ ಆಚರಣೆಯ ರಾತ್ರಿಯೇ ಪೋತುರಾಜು ಗಾವು ಸಿಗಿವ ಆಚರಣೆ ನಡೆಯುತ್ತದೆ. ಅಂದು ರಾತ್ರಿ ಭಾರತ ಪೂಜಾರಿ ಮಹಾಭಾರತದ ಕಥಾ ಪಠಣವನ್ನು ಮಧ್ಯರಾತ್ರಿ ದಾಟಿದ ಒಂದು ಹೊತ್ತಿನವರೆಗೂ ನಡೆಸಿ ನಂತರ ಪೋತುರಾಜನಿಗೆ ಆತನ ತಂಗಿ ಮುದ್ದುಲ ನಾಗಮ್ಮನನ್ನು ಮುದ್ದಲ ನಾಗಮ್ಮನ ಅತ್ಯಂತ ಅಪರೂಪದ ಕಲ್ಲಿನ ಕೆತ್ತನೆಯೊಂದು ಸಿಕ್ಕಿದ್ದು, ಅದು ನಾಗದೇವತೆಯ ರೂಪದಲ್ಲಿದೆ. ಅಂದರೆ ಮುದ್ದುಲ ನಾಗಮ್ಮ ಮತ್ತು ಆಕೆಯ ಬಳಗ ನಾಗ ಸಂಸ್ಕೃತಿಯ ಮೂದವರೆಂಬ ಕ್ಷೀಣ ಸೂಚನೆಯೂ ಇಲ್ಲಿ ಗ್ರಹಿಕೆಗೆ ಸಿಗುವಂತಿರುವುದು ಅಧ್ಯಯನದ ದೃಷ್ಠಿಯಿಂದ ಗಮನಾರ್ಹ. ತಾವು ವರಿಸಿದ್ದರ ಬದಲಿಗೆ ಪಾಂಡವರು ನೀಡಿದ ಹೋತದ ಮರಿಯನ್ನು ಬಲಿಯಾಗಿ ಅರ್ಪಿಸುತ್ತಾರೆ. ಇದು ಪುನಃ ಹೋತದ ಬಲಿಯ ಮೂಲಕ ಜೀವ ಪಡೆದ ದಕ್ಷನನ್ನು ಮತ್ತೊಮ್ಮೆ ತಲೆತರಿವ ಮೂಲ ಆಚರಣೆಯೇ ಆಗಿದೆ. ಇಲ್ಲಿ ನಾವು ಗಮನಿಸಬೇಕಾಗಿದ್ದು ದ್ರಾವಿಡ ಭಾಷಾವರ್ಗಗಳಲ್ಲಿ ಬಲಿ ಎಂಬ ಸಂಸ್ಕೃತದ ಪದಕ್ಕೆ 'ಗಾವು' ಎಂಬ ಪದವೇ ಪರ್ಯಾಯವಾದುದು. ಹಾರ, ಆಹುತಿ, ಬಲಿ ಎಂಬೆಲ್ಲಾ ಪದಗಳೂ ಸಂಸ್ಕೃತ ಮೂಲದವೇ. ತಮಿಳಿನಲ್ಲಿ ಬಲಿಗೆ 'ಕಾವು' ಎನ್ನುತ್ತಾರೆ. ಅದು ಕನ್ನಡದಲ್ಲಿ ಗಾವು ಎಂದಾಗಿದೆ. ಆದರೆ ಇಂದು ಯಾವ ಕನ್ನಡಿಗನೂ ಗಾವು ಎಂಬ ಪದ ಬಳಸುವುದಿಲ್ಲ. ನಂತರ ವಸಂತೋತ್ಸವ ನಡೆದು ಈರಕುಮಾರರು ಹಾಗೂ ಇತರೆ ಕುಲದ ಮುಖ್ಯಸ್ಥರು ಹರಿಷಿಣ ಕುಂಕುಮ ಬೆರೆಸಿದ ನೀರಿನ ಓಕುಳಿಯಾಡುತ್ತಾರೆ. ಆ ರಾತ್ರಿಯೇ ಧ್ವಜವನ್ನು ಇಳಿಸಿ ಕರಗದಾಚರಣೆಯನ್ನು ಮುಕ್ತಾಯಗೊಳಿಸಲಾಗುತ್ತದೆ.

 

ನೀರಿನಲ್ಲಿನ ಹಸಿಕರಗದ ಮೂಲಕ ಅಧಿಕೃತ ಆಚರಣೆ ಪ್ರಾರಂಭವಾಗಿ ನಡುವೆ ಬೆಂಕಿ ತುಳಿದು ಕೊನೆಯಲ್ಲಿ ಪುನಃ ನೀರಿನಲ್ಲೇ ನೆನೆದು ಓಕುಳಿಯಾಡಿ ಒನಕೆಯ ಮೇಲೆ ನೀರಿನ ಚೆಂಬು ಇಟ್ಟು ಕರಗದ ಪೂಜಾರಿ ಒಂದು ಹನಿಯನ್ನು ಚೆಲ್ಲದಂತೆ ಕುಣಿದು ಗಂಗೆಗೆ ತಮ್ಮ ಶ್ರದ್ಧೆ, ಗೌರವಗಳನ್ನು ಅರ್ಪಿಸುವ ಈ ಜಾನಪದೀಯ ಆಚರಣೆ ತನ್ನೆಲ್ಲಾ ಅರ್ಥದಲ್ಲೂ ಅತ್ಯಂತ ಮಹತ್ವದ ಜಲ ಸಂಸ್ಕೃತಿಯ ಆಚರಣೆಯೇ ಆಗಿದೆ.

 

ಇತ್ತೀಚಿನ ನವೀಕರಣ​ : 19-04-2024 12:19 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080