ಅಭಿಪ್ರಾಯ / ಸಲಹೆಗಳು

ಕಂಗೀಲು ಕುಣಿತ

ಕರಾವಳಿ ಭಾಗದ ಉಡುಪಿ ಮತ್ತು ಮಂಗಳೂರುಗಳಲ್ಲಿ ವಾಸಿಸುವ ಮುಂಡಾಲ ಜನಾಂಗದವರು ಆಚರಿಸುವ ಕುಣಿತವೇ ಕಂಗೀಲು ಕುಣಿತ. ಈ ಮುಂಡಾಲರಿಗೂ ಉತ್ತರ ಬಾರತದ ಕೋಲಾ-ಮುಂಡಾಗಳಿಗೂ ಏನಾದರೂ ಸಂಬಂಧವಿದೆಯೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಕರಾವಳಿ ಭಾಗದಲ್ಲಷ್ಟೇ ಅಲ್ಲದೆ ಕರ್ನಾಟಕ ಇತರೆಡೆಗಳಲ್ಲೂ ಮುಂಡಾಗಳಿದ್ದಾರೆ. ಇವರೆಲ್ಲರ ಮೂಲ ಒಂದೇ ಆಗಿದ್ದರೂ ಅಚ್ಚರಿಯೇನಿಲ್ಲ.

 

ಪ್ರತಿ ವರ್ಷದ ಮಾರ್ಚ್‌‌ ತಿಂಗಳಿನ ಹುಣ್ಣಿಮೆಯಂದು ತಮ್ಮ ಕುಲದೈವವಾದ ಕಡಗೇಶ್ವರಿಯ ಪ್ರೀತ್ಯರ್ಥವಾಗಿ ಈ ಮುಂಡಾಲರು ಏಳು ದಿನಗಳ ಕಾಲ ನಡೆಸುವ ಆರಾಧನ ಕುಣಿತವೇ ಕಂಗೀಲು ಕುಣಿತ. ತುಳು ಭಾಷೆಯಲ್ಲಿ ‘ಕಂಗ್’ ಎಂದರೇ ತೆಂಗಿನ ಮರ ಎಂದು ಅರ್ಥ. ಹಳೆಗನ್ನಡದಲ್ಲಿ ಕೂಡ ಕಂಗು ಎಂದರೆ ತೆಂಗಿನ ಮರ ಎಂದರ್ಥವೇ ಇದೆ. ಕಂಗೀಲು ಕುಣಿತದ ಮುಂಡಾಲರು ತೆಂಗಿನ ಮರದ ಎಳೈರಿ ಮತ್ತು ಹಾಳೆಗಳನ್ನು ಇನ್ನಿತರ ಬಟ್ಟೆಗಳೊಂದಿಗೆ ವಿಶೇಷ ವೇಷಭೂಷಣವಾಗಿ ಧರಿಸುವುದರಿಂದ ಬಹಶ: ಈ ಕುಣಿತಕ್ಕೆ ಕಂಗೀಲು ಕುಣಿತ ಎಂಬ ಹೆಸರು ಬಂದಿರಬಹುದೆಂಬುದು ವಿದ್ವಾಂಸರ ಅಭಿಮತ.

 

ಕುಲದೈವವಾದ ಕಡಗೇಶ್ವರಿ ಅಥವ ಮಾರಿಯಮ್ಮನಿಗೆ ಪೂಜೆ ಸಲ್ಲಿಸಿ ವೇಷಭೂಷಣ ಧರಿಸಿ ವೃತ್ತಾಕಾರದಲ್ಲಿ ನಿಂತು ಕಾಸೆ ಅಥವ ಡೋಲಿನ ಬಡಿತಕ್ಕನುಗುಣವಾಗಿ ಕುಣಿಯ ತೊಡಗುತ್ತಾರೆ. ಕೈಯಲ್ಲಿ ಗಂಟಾಮಣಿ ಹಿಡಿದ ನಾಕು ಮಂದಿ ಹಾಡುಗಾರರು, ಹಾಡಿಗೆ ತಕ್ಕಂತೆ ಬಾರಿಸುತ್ತಿದ್ದರೆ ಉಳಿದವರು ಕುಣಿಯುತ್ತಾರೆ. ಇವರ ನಡುವೆ ಹೂಮಾಲೆ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೊರಗ ವೇಷಧಾರಿಯೊಬ್ಬ ಮೈಗೆ ಕಪ್ಪು ಬಣ್ಣದೊಂದಿಗೆ ಮುಖವಾಡವನ್ನು ಧರಿಸಿ ವಿಚಿತ್ರವಾಗಿ ಕುಣಿಯುತ್ತ ಎಲ್ಲರ ಗಮನ ಸೆಳೆಯುತ್ತಾನೆ. ಇಲ್ಲಿ ಕುಣಿಯುವವರು ಹಾಡಿಗೆ ದನಿಗೂಡಿಸುವುದಿಲ್ಲ. ಬದಲಿಗೆ ಹಾಡಿನ ನಡುವೆ ಆಗೀಗ ‘ ಕೂ’ ಎಂದು ಕೂಗು ಹಾಕುತ್ತಾರೆ.

 

ಕಂಗೀಲು ಕುಣಿತದವರು ರಾತ್ರಿ ಮತ್ತು ಹಗಲು ನಿರ್ಧಿಷ್ಟ ಪಡಿಸಿದ ಮನೆಗಳಿಗೆ ಹೋಗಿ ಅಲ್ಲಿ ಕುಣಿದು ಅವರಿಂದ ಧವಸ ಧಾನ್ಯ ಬೇಡಿ ತರುತ್ತಾರೆ. ಸಾಧಾರಣವಾಗಿ ಕಂಗೀಲು ಕುಣಿತದವರಿಗೆ ಧವಸ ನೀಡದೆ ಯಾರು ಬರಿಗೈಯಲ್ಲಿ ಕಳಿಸುವುದಿಲ್ಲ. ಹೀಗೆ ಸಂಗ್ರಹಗೊಂಡ ಧವಸದಿಂದ ಕೊನೆಯ ದಿನ ಸಾಮೂಹಿಕವಾಗಿ ಎಲ್ಲರೂ ಕಲೆತು ಅಡುಗೆ ಮಾಡಿ ಉಂಡು ಸಂಭ್ರಮಿಸುತ್ತಾರೆ. ಅದಕ್ಕೂ ಮುನ್ನ ಮಾರಿಗೆ ನೈವೇಧ್ಯವನ್ನಾಗಿ ಬಡಿಸಿ ದೂರ ಕೊಂಡೊಯ್ದು ಬಿಟ್ಟು ಬಂದ ನಂತರ ತಮ್ಮ ವೇಷ ಭೂಷಣ ಕಳಚುತ್ತಾರೆ. ತೆಂಗಿನ ಗರಿಗಳನ್ನು ಕೆರೆಯ ನೀರಲ್ಲಿ ಬಿಟ್ಟು ಬರುತ್ತಾರೆ. ವಿಶೇಷವೇನೆಂದರೆ ಮಂಗಳೂರು ಭಾಗದಲ್ಲಿ ಗಂಡಸರು ಕಂಗೀಲು ಕುಣಿತ ಪ್ರದರ್ಶಿಸಿದರೆ, ಉಡುಪಿ ಭಾಗದಲ್ಲಿ ಹೆಂಗಸರು ಕಂಗೀಲು ಕುಣಿತವನ್ನು ನಿರ್ವಹಿಸುತ್ತಾರೆ. ಊರಿಗೆ ಬಂದ ಮಾರಿ, ಜನ-ಜಾನುವಾರುಗಳಿಗೆ ತಗುಲುವ ಪೀಡೆ, ರೋಗ-ರುಜಿನ ಪರಿಹಾರವಾಗಲೆಂಬ ಆಶಯ ಮತ್ತು ಸಸ್ಯಸಮೃದ್ಧಿಯ ಉದ್ದೇಶ ಈ ಕಂಗೀಲು ಕುಣಿತ ಆಚರಣೆಯಲ್ಲಿ ಅಂತರ್ಗತವಾಗಿದೆ.

 

 

ಇತ್ತೀಚಿನ ನವೀಕರಣ​ : 13-06-2023 02:44 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080