ಅಭಿಪ್ರಾಯ / ಸಲಹೆಗಳು

ಕಂಸಾಳೆ ನೃತ್ಯ

ಚಾಮರಾಜ ನಗರ ಜಿಲ್ಲೆಯ ಮಲೆ ಮಾದಾರಿ ಮಾದಯ್ಯನ ಒಕ್ಕಲುಗಳಾಗಿ, ತಮ್ಮ ಆ ದೈವದ ಲೀಲಾಮಾನುಷ ಕಥೆ, ಪವಾಡಗಳನ್ನು ಹಾಡುಗಬ್ಬದ ಮೂಲ ಪ್ರಾಚಾರ ಪಡಿಸುತ್ತ ಆ ದೈವಕ್ಕೆ ತಮ್ಮ ಕಲಾ ಸೇವೆಯನ್ನು ಸಲ್ಲಿಸುವ ವಿಶಿಷ್ಟ ಗಾಯಕ ನರ್ತಕರೇ ಕಂಸಾಳೆಯವರು. ಈ ಕಂಸಾಳೆ ಗಾಯಕ ವರ್ಗದವರು ವಂಶಪಾರಂಪರ್ಯವಾಗಿಯೂ, ಗುರುದೀಕ್ಷೆಗಳ ಮೂಲಕವೂ ಮಾದಾರಿ ಮಾದಯ್ಯನ ಕಥೆಯನ್ನು ಹಾಡುವ ಹಕ್ಕು ಮತ್ತು ಅರ್ಹತೆಯನ್ನು ಪಡೆಯುತ್ತಾರೆ. ಅದೇ ಅವರ ಬದುಕಿನ ವಿಶೇಷ ವೃತ್ತಿಯಾಗಿಯೋ ಅಥವ ಪ್ರವೃತ್ತಿಯಾಗಿಯೋ ನಂತರ ಮುಂದುವರೆಯುತ್ತದೆ. ಕಂಸಾಳೆಯವರನ್ನು ಮಲೆ ಮಾದಾರಿಯ ಗುಡ್ಡರು ಎಂದೇ ಕರೆಯುತ್ತಾರೆ.

 

ಚಾಮರಾಜನಗರ ಜಿಲ್ಲೆಯ ಮಲೆಮಾದೇಶ್ವರ ಬೆಟ್ಟದಲ್ಲಿನ ಮಾದಾರಿ ಮಾದಯ್ಯನ ತಳ ಕಂಸಾಳೆಯವರ ಮೂಲಕ್ಷೇತ್ರ. ಈ ಮಾದಾರಿ ಮಾದಯ್ಯ ಶರಣ ಚಳುವಳಿಯ ನಂತರದಲ್ಲೆಂದೋ ಹುಟ್ಟಿಕೊಂಡಿರಬಹುದಾದ ಬಂಡುಕೋರ ಧಾರ್ಮಿಕ ವ್ಯಕ್ತಿ. ಬಹುಶಃ ಮಾದಾರಿ ಮಾದಯ್ಯ ಮೂಲತಃ ಮಾದಿಗರ ಮಾದಯ್ಯನಾಗಿರಬೇಕೆಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದು ಸತ್ಯಕ್ಕೆ ಹತ್ತಿರದ ಸಂಗತಿಯೂ ಆಗಿರಬಹುದು. ಬಸವಣ್ಣನ ನಂತರದಲ್ಲಿ ಶರಣ ಚಳವಳಿಯಲ್ಲಿ ಪುನಃ ತಲೆ ಎತ್ತಿದ ಜಾತೀಯತೆಯಿಂದ ಹತಾಶವಾದ ತಳ ಜಾತಿಗಳವರ ಸಮರ್ಥ ಅಭಿವ್ಯಕ್ತಿಗಳೇ ಬಹುಶಃ ಮಾದಾರಿ ಮಾದಯ್ಯ ಮತ್ತು ಮಂಟೇಸ್ವಾಮಿಗಳು ಎನಿಸುತ್ತದೆ. ಮಂಟೇ ಸ್ವಾಮಿಯನ್ನಂತೂ ಅಲ್ಲಮನ ವ್ಯಕ್ತಿತ್ವದ ಮೂಲಕವೇ ಗುರುತಿಸಿ ಮಂಟೇದಲ್ಲಮ ಎಂದೇ ನೀಲಗಾರರು ಕರೆಯುತ್ತಾರೆ. ಮಂಟೇಸ್ವಾಮಿಯ ಕಾವ್ಯದಲ್ಲೂ ಮಂಟೆದಲ್ಲಮನನ್ನು ಹೊಲೆಯರ ವ್ಯಕ್ತಿ ಎಂದೇ ನಂಬಲಾಗಿದೆ. ಇಬ್ಬರೂ ಉತ್ತರದ ಕತ್ತಲನಾಡಿನಿಂದ ಅಂದರೆ ಬಹುಶಃ ಜಾತೀಯತೆಯಿಂದ ಕುರುಡಾದ ಬಸವೋತ್ತರ  ಕಲ್ಯಾಣದತ್ತಲಿಂದ ಬಂದವರೆಂದು ಭಾವಿಸುತ್ತಾರೆ.

 

ಇದು ಏನೇ ಇದ್ದರೂ ಮಾದಿಗರ ವ್ಯಕ್ತಿತ್ವದ ಮಾದಾರಿ ಮಾದಯ್ಯ ಇಂದು ತನ್ನ ಮೂಲಸ್ವರೂಪದಲ್ಲಿ ನಮಗೆ ಕಾಣಸಿಗುವುದಿಲ್ಲ. ಬದಲಿಗೆ ಮುಖ್ಯ ಪ್ರವಾಹದ ಶೈವಧಾರೆಯ ಮೂಲಕ ಸಾಂಸ್ಕೃತೀಕರಣಕ್ಕೊಳಪಟ್ಟು ಮಾದಯ್ಯ ಮಹದೇಶ್ವರನಾಗಿ ಸಾಕ್ಷಾತ್ತು ಶಿವನಾಗಿ ಅಲ್ಲಿ ಲಿಂಗದ ಪ್ರತಿಷ್ಟಾಪನೆಯಾಗಿ ಹೋಗಿದೆ. ಆದರೂ ಮಾದಯ್ಯನ ಹಾವುಗೆಗಳು, ಬೆತ್ತ, ಜೋಳಿಗೆ, ಇತ್ಯಾದಿಗಳನ್ನು ಬಹುಶಃ ಅಲ್ಲಿನ ಬೇಡ ಕಂಪಣರು ಮತ್ತು ಮೂಲ ಮಠವೊಂದು ರಕ್ಷಿಸಿಟ್ಟಿದೆ. ಈ ನೆಲದ ಉದ್ದಗಲಕ್ಕೂ ಶೈವ-ವೈಷ್ಣವದ ಉತ್ಕಟ ಸಂಘರ್ಷವೊಂದು ಮುಂದುವರೆದುಕೊಂಡೇ ಬಂದಿದ್ದರೆ ಸ್ಥಳೀಯವಾಗಿ ಇಂತಹ ಶೈವ-ವೈಷ್ಣವವೆರಡರ ಅತಿಕ್ರಮಗಳು ಸಾವಿರಾರು ಕಥೆಗಳ ಮೂಲವನ್ನು ಮರೆಮಾಚಿಟ್ಟಿವೆ. ಶರಣ ಚಳುವಳಿಯೊಂದಿಗಿನ ಸಂಬಂಧದ ಎಳೆಯಷ್ಟೇ ಅಲ್ಲದೆ, ಹರದನಹಳ್ಳಿಯ ಗೋಸಲ ಮಠ ಹಾಗೂ ಅದರ ಒಕ್ಕಲುಗಳಲ್ಲಿ ಒಬ್ಬರಾಗಿದ್ದ ಬೇಡ ಕಂಪಣರ ಮೂಲಕ ಮಲೆ ಮಾದಾರಿಗೆ ಆಜೀವಕದ ಸಂಪರ್ಕವೂ ಇದ್ದಿರಬಹುದೆಂಬ ಕ್ಷೀಣ ಸೂಚನೆಗಳೂ ಸಂಶೋಧನಾರ್ಥಿಗಳಿಗೆ ಲಭಿಸುತ್ತದೆ. ಮಲೆ ಮಾದಾರಿ ಮತ್ತು ಮಂಟೆಸ್ವಾಮಿಗಳ ಪಂಥಗಳ ಹುಟ್ಟು ಬೆಳವಣಿಗೆಯ ಹಿಂದೆ ಪಣಕಟ್ಟು ವ್ಯವಸ್ಥೆಯ ಎಡ-ಬಲ ಸಂಘರ್ಷದ ನೆರಳೂ ಆಡುತ್ತಿದೆಯಾದರೂ ಆ ನೆಲೆಯಿಂದ ಇನ್ನು ಮುಂದಷ್ಟೇ ಅಧ್ಯಯನಗಳು ನಡೆಯಬೇಕಿದೆ. ಮಾದಾರಿ ಮತ್ತು ಮಂಟೇಸ್ವಾಮಿಯ ಒಕ್ಕಲು ಜಾತಿಗಳವರು ಬಹುತೇಕ ಕೆಳಜಾತಿಗಳೇ ಆದರೂ ಈ ಈರ್ವರು ಅಸ್ಪೃಶ್ಯರನ್ನು ತಮ್ಮ ಪಾಲಿನ ಆರಾಧ್ಯ ದೈವವಾಗಿಸಿಕೊಂಡು ಅಂದಿನಿಂದ ಇಂದಿನವರೆಗೂ ಏಕ ರೀತಿಯ  ಶ್ರದ್ಧಾಭಕ್ತಿಗಳನ್ನು ವ್ಯಕ್ತಪಡಿಸುತ್ತಿರುವ ತಳ ಸಮುದಾಯಗಳು, ಹಿಂದುಳಿದ ವರ್ಗಗಳವರ ಜಾತ್ಯತೀತ ಮನೋಭಾವ ಕುರಿತ ತೀವ್ರ  ಬದ್ಧತೆಯ ಹಿಂದೆ ಬಹುಶಃ ಶರಣ ಚಳುವಳಿಯ ಆಶಯ, ನಿರೀಕ್ಷೆಗಳೇ ಪ್ರೇರಕ ಅಂಶಗಳಾಗಿ ಇದ್ದವೆನಿಸುತ್ತದೆ. ಆದರೂ ಮಾದಾರಿ ಮಂಟೆಸ್ವಾಮಿಗಳ ಉಳಿದೆಲ್ಲಾ ಪವಾಡಗಳಿಗಿಂದತೂ ಈ ಜಾತ್ಯತೀತವಾಗಿ ಸಮೂಹವೊದು ಶತಮಾನಗಳ ಕಾಲ ಬದುಕುತ್ತ ಬರುವಂತೆ ಮಾಡಿದ್ದೇ ಬಹು ದೊಡ್ಡ ಪವಾಡವೆನಿಸುತ್ತದೆ.

 

ಕಂಸಾಳೆಯು ಮೂಲತಃ ಒಂದು ಸಮರಕಲೆಯೇ. ಬೀಸು ಕಂಸಾಳೆಯ ನೃತ್ಯವನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಈ ಅಂಶ ಖಂಡಿತ ಅರಿವಿಗೆ ಬಾರದೆ ಇರದು. ಹಾಗಲ್ಲದೆಯೂ ಮಾದಾರಿಯ ಒಕ್ಕಲುಗಳೂ ಮತ್ತು ಗುಡ್ಡರು ಕೆಲವು ಶತಮಾನಗಳ ಹಿಂದಿನ ಮಲೆ ಮಾದಾರಿ ಬೆಟ್ಟದ ದಟ್ಟ ಕಾಡು ಪ್ರದೇಶಗಳಲ್ಲಿ ಕಾಲುನಡಿಗೆಯಲ್ಲಿಯೇ ಯಾತ್ರೆ ಹೊರಡಬೇಕಾದಾಗ ಕಾಡು ಮೃಗಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿಯಾದರೂ ಅವರು ಪ್ರಯಾಣದ ದಣಿವು ಕಾಣದಂತೆ ಹಾಡುತ್ತ ಬಡಿಯುತ್ತ ಮೃಗಗಳನ್ನು ಎಚ್ಚರಿಸಿ, ಹೆದರಿಸಿ ಆ ಕಂಚಿನ ಕಂಸಾಳೆಯ ತಾರಕ ದನಿಯ ಮೂಲಕವೇ ದೂರಕ್ಕೆ ಅಟ್ಟುವಲ್ಲಿ ಸಪಲರಾಗುತ್ತಿದ್ದರೆನಿಸುತ್ತದೆ. ಈ ಉದ್ದೇಶದಿಂದಲಷ್ಟೇ ಕಂಸಾಳೆಯೆಂಬ ವಾದ್ಯಗಳ ವಿನ್ಯಾಸ ರೂಪುಗೊಂಡಿತೆಂದು ಹೇಳಲು ಬರುವುದಿಲ್ಲವಾದರೂ ಅದು ಕಂಸಾಳೆಯ ಬಡಿತ ಎಬ್ಬಿಸುವ ನಾದದ ಹುಯಿಲಿನಿಂದ ತಮ್ಮನ್ನು ಹೀಗೆ ರಕ್ಷಿಸಿಕೊಳ್ಳಲು ಕೂಡ ನೆರವಾಗಿದ್ದಿರಬಹುದಾಗಿದೆ.

 

ತಾಳವಾದ್ಯವಾದ ಕಂಸಾಳೆಯಲ್ಲಿ ಎರಡು ಘಟಕಗಳಿರುತ್ತವೆ. ಎಡಗೈಯಲ್ಲಿ ದಾರದ ಕುಚ್ಚು ಕಟ್ಟಿರುವ ಅಂಗೈ ಅಗಲದ ಮಿಶ್ರಲೋಹದ ಬಟ್ಟಲು ಹಾಗೂ ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಇವುಗಳನ್ನು ಗೊಂಡೆಗಳ ಮೂಲಕ ಅಲಂಕರಿಸಿರುತ್ತಾರೆ. ಮೇಲು ಮುಖವಾದ ಬಟ್ಟಲಿಗೆ ಕೆಳಮುಖವಾದ ತಾಳವನ್ನು ತಟ್ಟಿ ವಿಶಿಷ್ಟವಾದ ನಾದವನ್ನು ಹೊಮ್ಮಿಸಲಾಗುತ್ತದೆ. ಕಂಸಾಳೆಯ ಹಿಮ್ಮೇಳದಲ್ಲಿನ ವಿವಿಧ ಗುತ್ತುಗಳೊಂದಿಗೆ ಪದಗಳನ್ನು ಹಾಡುವುದರೊಂದಿಗೆ ಕುಣಿತವನ್ನು ಪ್ರದರ್ಶಿಸುತ್ತಾರೆ. ಕಂಸಾಳೆಯನ್ನೇ ಕೈಸಾಲೆ, ಕೌಸಾಳೆ, ಬಟ್ಲು ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಕಂಸಾಳೆ ಸಂಪ್ರದಾಯದಲ್ಲಿ ಬರೀ ಕಥನದ ಹಾಡುಗಾರಿಕೆಯೂ ಉಂಟು. ಬಯಲಲ್ಲಿ ನರ್ತಿಸುವುದೂ ಉಂಟು. ಬೀಸುಕಂಸಾಳೆಯಂತೂ ಬರೀ ಕುಣಿತಕ್ಕೇ ಮೀಸಲಾದದ್ದು. ಕಥನದ ಹಾಡುಗಾರಿಕೆಯಲ್ಲಿನ ಕಂಸಾಳೆಯ ಗತ್ತು ಬೇರೆ, ಕುಣಿತದ ಸಂದರ್ಭದ ಗತ್ತು ಬೇರೆ. ಕಂಸಾಳೆಕಲಾವಿದರ ವೇಷಭೂಷಣವೂ ಸರಳ. ಕಾವಿ ಧೋತರ, ಬಿಳಿ ಅಂಗಿ, ಕೊರಳಿಗೆ ರುದ್ರಾಕ್ಷಿಸರ, ಸೊಂಟದಲ್ಲಿ ಕೆಂಪು ವಸ್ತ್ರ ಮತ್ತು ಹಣೆಯಲ್ಲಿ ವಿಭೂತಿ ಧರಿಸುತ್ತಾರೆ. ದೀಕ್ಷಾ ಬದ್ಧರಾದವರು ಹಾಡುವುದರ ಮೂಲಕ ಭಿಕ್ಷೆಪಡೆಯುವುದರಿಂದ ಜೋಳಿಗೆಯೂ ಇರುತ್ತದೆ. ಶಿವರಾತ್ರಿ, ನವರಾತ್ರಿ, ಮತ್ತು ದೀಪಾವಳಿಯಂತಹ ಮುಖ್ಯ ಶೈವ ಹಬ್ಬಗಳಲ್ಲಿ ಮಲೆಗೆ ಹೋಗಿಯೇ ಮಾದಪ್ಪನ ಸೇವೆ ಮಾಡಿಬರುತ್ತಾರೆ.

 

ಕಂಸಾಳೆಯ ಹಾಡುಗಾರಿಕೆ ಮೇಳದವರು ಕೆಲವು ರಾತ್ರಿಗಳ ಕಾಲ ಹಾಡಬಹುದಾದಂತಹ ಜಾನಪದ ಮಹಾ ಕಾವ್ಯವನ್ನು ಹಾಡಬಲ್ಲರು. ಮಾದಯ್ಯನ ಕಾವ್ಯವೇ ಅಲ್ಲದೆ ನಂಜುಂಡ-ಚಾಮುಂಡಿ, ಪಿರಿಯಾಪಟ್ಟಣದ ಕಾಳಗ, ಸಾರಂಗಧರ, ಬಿಳಿಗಿರಿರಂಗನ ಕಾವ್ಯ, ಬಾಲನಾಗಮ್ಮ, ಚೆನ್ನಿಗರಾಯನಂತಹ ಇನ್ನಿತರ ಕಾವ್ಯಗಳನ್ನೂ ಹಾಡುತ್ತಾರೆ.

 

ಬೀಸುಕಂಸಾಳೆಯಲ್ಲಿ ಕನಿಷ್ಟ ನಾಲ್ಕು ಕಲಾವಿದರಾದರೂ ಇರಬೇಕು. ಚಮತ್ಕಾರ, ಶ್ರಮ ಮತ್ತು ಎಚ್ಚರಗಳನ್ನು ಬೇಡುವ ಈ ಬೀಸುಕಂಸಾಳೆಯ ಪ್ರದರ್ಶನದಲ್ಲಿ ಕೊಂಚ ಎಚ್ಚರ ತಪ್ಪಿದರೂ, ತಾಳತಪ್ಪಿ ಪೆಟ್ಟು ಮೈಗೆ ಬೀಳಬಹುದು. ಈ ಬೀಸುಕಂಸಾಳೆಯಲ್ಲಿ ಒಬ್ಬ ಕಲಾವಿದ ಮಧ್ಯದಲ್ಲಿದ್ದು ತಲೆಯ ಮೇಲೆ, ಬೆನ್ನಹಿಂದೆ, ಕಾಲಕೆಳಗೆ, ಕುಳಿತು, ನಿಂತು, ಬಾಗಿ ಉರುಳಾಡಿ ತಾಳ ನೀಡುತ್ತಾ, ಬೀಸುಕಂಸಾಳೆಯ ಪ್ರದರ್ಶನ ನೀಡುತ್ತಾರೆ. ಕತ್ತಿ ಪವಾಡದ ಹಳ್ಳದಲ್ಲಿ ತಮ್ಮ ಸಿಸುಮಕ್ಕಳಾದ ಕಾರಯ್ಯ-ಬಿಲ್ಲಯ್ಯರನ್ನೂ ಪರೀಕ್ಷೆಗೆ ಒಳಗುಮಾಡಿದ ಮಾದಾರಿ ಅವರು ಪರೀಕ್ಷೆಯಲ್ಲಿ ಜಯಗಳಿಸಿದ ಸಂತೋಷದಿಂದ ಬೀಸು ಕಂಸಾಳೆ ನೃತ್ಯ ಮಾಡಿದ್ದರಿಂದ ಗುಡ್ಡರಲ್ಲಿ ಈ ಕುಣಿತಕ್ಕೆ ವಿಶೇಷ ಮಾನ್ಯತೆಯಿದೆ. ಬೀಸುಕಂಸಾಳೆಯಲ್ಲಿ ತಟ್ ಬಟ್ಲ್‌, ತಾರ್ ಬಟ್ಲ್ ಎಂಬ ಎರಡು ವಿಧಗಳಿವೆ. ಕಂಚಿನ ಕಂಸಾಳೆಯ ಅದ್ಭುತನಾದ, ಮಿಂಚಿನಂತೆ ಕೌಶಲ್ಯಪೂರ್ಣವಾಗಿ ಹರಿದಾಡುವ ಕಲಾವಿದರು ಎಲ್ಲಿಯೂ ಕ್ರಮ ತಪ್ಪದಿರುವುದೇ ಬೀಸು ಕಂಸಾಳೆಯ ಅನನ್ಯ ಅಂಶ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬೀಸು ಕಂಸಾಳೆ ಪ್ರದರ್ಶಿಸುವುದಂತೂ ಅತ್ಯಂತ ರೋಮಾಂಚಕಾರಿಯದುದಾದರೂ ಅಪಾಯಕಾರಿಯಾದುದು ಕೂಡ.

 

ಕಂಸಾಳೆಯವರಿಗೆ ಮಲೆ ಮಾದೇಶ್ವರ ಕಾವ್ಯವೇ ಪ್ರಧಾನ ಮತ್ತು ನೆಚ್ಚಿನ ಕಾವ್ಯ. ಏಳು ಸಾಲುಗಳ ಕಾವ್ಯವನ್ನು ಹಾಡಬಲ್ಲರು. ಒಂದೊಂದು ಸಾಲನ್ನು ಒಂದೊಂದು ರಾತ್ರಿಯ ಕಾಲ ಹಾಡಬಲ್ಲರು. ಇಲ್ಲಿ ಸಾಲು ಎಂದರೆ ಅಧ್ಯಾಯವೆಂದೇ ಅರ್ಥ. ತಾಳುಗತೆ, ಶ್ರಾವಣದೊರೆಯ ಸಾಲು, ಜುಂಜೇಗೌಡನಸಾಲು, ಶಂಕರಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಬೇವಿನಹಟ್ಟಿ ಕಾಳಿಯ ಸಾಲು, ಸರಗೂರಮ್ಮನ ಸಾಲು ಹೀಗೆ ಧೀರ್ಘ ಕಥನಗಳನ್ನು ಹಾಡುತ್ತಾರೆ.

 

ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಸಾಳೆ ಕಲಾವಿದರ ಪರಂಪರೆ ಹೆಚ್ಚಾಗಿ ಕಂಡುಬರುತ್ತದೆ. 

ಇತ್ತೀಚಿನ ನವೀಕರಣ​ : 13-06-2023 02:51 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080