ಅಭಿಪ್ರಾಯ / ಸಲಹೆಗಳು

ಜಗ್ಗಲಿಗೆ

ಚರ್ಮವಾದ್ಯಗಳಲ್ಲೇ ಅತ್ಯಂತ ಬೃಹತ್ತಾದುದು ಜಗ್ಗಲಿಗೆ. ಈ ವಾದ್ಯದ ಹೆಸರೇ ಸೂಚಿಸುವಂತೆ ಇದು ಹಲಗೆಯ ವಿಸ್ತಾರ ರೂಪ. ಸಾಧಾರಣವಾಗಿ ಜಗ್ಗಲಿಗೆಗಳು ಐದು ಅಡಿ ಎತ್ತರವಿರಬಲ್ಲವು. ಕಲಾವಿದ ಜಗ್ಗಲಿಗೆಯನ್ನು ನೆಲದ ಮೇಲೆ ಉರುಳಿಸುತ್ತಾ ಬಾರಿಸುತ್ತಾನೆ. ಯಾಕೆಂದರೆ ಮಾಮೂಲಿ ಹಲಗೆಯಂತೆ ಈ ಜಗ್ಗಲಿಗೆಯನ್ನು ಹೆಗಲಿಗೆ ನೇತು ಹಾಕಿಕೊಂಡು ಬಾರಿಸಲಾಗುವುದಿಲ್ಲವಲ್ಲ.

 

ಎತ್ತಿನ ಗಾಡಿಯ ಚಕ್ರದಲ್ಲಿನ ಕಬ್ಬಿಣದ ವೃತ್ತಾಕಾರದ ಪಟ್ಟಿಗೇ ಹದಗೊಳಿಸಿದ ಎತ್ತು, ಎಮ್ಮೆ ಅಥವ ಕೋಣದ ಚರ್ಮವನ್ನು ಚರ್ಮದ ದಾರಗಳಿಂದಲೇ ಬಿಗಿದು ಜಗ್ಗಲಿಗೆಯನ್ನು ಸಿದ್ಧಪಡಿಸಲಾಗುತ್ತದೆ. ವಿಶೇಷವೆಂದರೆ ಜಗ್ಗಲಿಗೆಯ ಚರ್ಮದ ಮೇಲೆ ವಿವಿಧ ಬಣ್ಣಗಳಿಂದ ಚಿತ್ರಗಳನ್ನು ಬಿಡಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿರುತ್ತಾರೆ. ಜಗ್ಗಲಿಗೆಯನ್ನು ‘ರಣಹಲಗೆ’ ಎಂದೂ ಕರೆಯುತ್ತಾರಾದರೂ, ಯುದ್ಧಭೂಮಿಗಳಲ್ಲಿ ಈ ರಣಹಲಗೆಯಾದ ಜಗ್ಗಲಿಗೆಯನ್ನು ಬಾರಿಸುತ್ತಿದ್ದರೆಂಬ ಬಗ್ಗೆ ಅಂತಹ ಉಲ್ಲೇಖಗಳೇನೂ ದೊರೆಯುವುದಿಲ್ಲ.

 

ಜಗ್ಗಲಿಗೆ ಮೇಳದಲ್ಲಿ ಸುಮಾರು ಹದಿನೈದು- ಇಪ್ಪತ್ತು ಮಂದಿ ಕಲಾವಿದರು ಭಾಗವಹಿಸುತ್ತಾರೆ. ಮೇಳದ ಮುಖ್ಯಸ್ಥ ಹಲಗೆಯಲ್ಲಿನ ಮಧ್ಯಮ ಗಾತ್ರದ ಖಣಿ ಹಲಗೆಯನ್ನು ಬಾರಿಸುತ್ತಿರುತ್ತಾನೆ. ಈ ಮುಖ್ಯಸ್ಥ ಯಾವ ತಾಳಗಳನ್ನು ಬಾರಿಸುತ್ತಾನೋ ಅದೇ ತಾಳಗಳನ್ನು ಜಗ್ಗಲಿಗೆ ಕಲಾವಿದರೂ ಅನುಸರಿಸುತ್ತಾರೆ. ನಿಲುವಂಗಿ, ಕಚ್ಚೆ, ಧೋತರ, ರುಮಾಲು ಹಾಗೂ ಸೊಂಟಕ್ಕೆ ನಡುವಸ್ತ್ರ – ಇವು ಜಗ್ಗಲಿಗೆ ಕಲಾವಿದರ ಸರಳ ವೇಷಭೂಷಣಗಳು. ಎತ್ತಿನ ಗಾಡಿಯ ಚಕ್ರದ ಸುತ್ತಳತೆಯುಳ್ಳ ಜಗ್ಗಲಿಗೆಯನ್ನು ಎಡಗೈಯಿಂದ ಉರುಳಿಸುತ್ತ ಬಲಗೈಯಿಂದ ತಾಳದ ವಿವಿಧ ಗತ್ತುಗಳಿಗೆ ಅನುಗುಣವಾಗಿ ಬಡಿಯುತ್ತಾರೆ. ಹಿಡಿತ ಎಲ್ಲೇ ತಪ್ಪಿದರೂ ಜಗ್ಗಲಿಗೆ ಉರುಳಿ ಹೋಗಬಲ್ಲದು. ಸಡಿಲವಾದರೆ ಗತ್ತು ಹೊರಡುವುದಿಲ್ಲ ಅಥವ ತಾಳ ತಪ್ಪಬಹುದು. ಹೀಗಾಗಿ ಜಗ್ಗಲಿಗೆ ಕಲಾವಿದರಿಗೆ ನಾದದ ಅರಿವಿನೊಂದಿಗೆ ಶಕ್ತಿಯೂ ಅಗತ್ಯ.

 

ಜಗ್ಗಲಿಗೆ ಮೇಳದ ಕುಣಿತದ ಗತ್ತುಗಳು ಅಲಾವಿ ಕುಣಿತದ ಗತ್ತುಗಳನ್ನೇ ಹೋಲುತ್ತವೆ. ಸಾಮೂಹಿಕ ಜಗ್ಗಲಿಗೆ ವಾದನವು ಅತ್ಯಂತ ರೋಮಾಂಚನಕಾರಿಯಾದ ಅನುಭವ ನೀಡಬಲ್ಲದು. ಮೇಳದಲ್ಲಿ ಕುಣಿಯುತ್ತ, ಸರಸರ ಹರಿದಾಡುತ್ತ, ಕಲಾವಿದರು ಒಬ್ಬರ ಹಿಂದೆ ಒಬ್ಬರು, ಅಡ್ಡಲಾಗಿ, ಎದುರು ಬದುರಾಗಿ, ತ್ರಿಕೋನಾಕಾರವಾಗಿ, ವಿವಿಧ ವಿನ್ಯಾಸಗಳಲ್ಲಿ ಪ್ರದರ್ಶನ ನೀಡುತ್ತಾರೆ. ತಾರಕದಲ್ಲಿ ನಾಲ್ಕು ಮಂದಿ ಕಲಾವಿದರು ಎತ್ತಿ ಹಿಡಿದ ಜಗ್ಗಲಿಗೆಯ ಮೇಲೆ ಮುಖ್ಯಸ್ಥ ನಿಂತು ಖಣಿ ಹಲಗೆ ಬಾರಿಸಿ ಚಮತ್ಕಾರ ತೋರುವುದುಂಟು. ಧಾರವಾಡ ಜಿಲ್ಲೆಯಲ್ಲಿ ಜಗ್ಗಲಿಗೆ ಮೇಳಗಳನ್ನು ನಾವು ವಿಶೇಷವಾಗಿ ಗಮನಿಸಬಹುದಾಗಿದೆ.

 

 

 

ಇತ್ತೀಚಿನ ನವೀಕರಣ​ : 13-06-2023 02:43 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080