ಅಭಿಪ್ರಾಯ / ಸಲಹೆಗಳು

ಡೊಳ್ಳು ಕುಣಿತ

‘ಡೆಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು’ ಎಂಬ ಗಾದೆಯ ಮಾತಿದೆ. ಅಂದರೆ ಡೊಳ್ಳಿನ ತಾಡನದ ಲಯ ನಮ್ಮ ಹೃದಯದ ಬಡಿತದ ಲಯಕ್ಕೆ ತುಂಬಾ ಹತ್ತಿರ. ಡೊಳ್ಳಿನ ತಾಡನ ನಿರಂತರವಾದುದುಲ್ಲ-ಹಲಗೆ, ತಬಲದ ರೀತಿ. ಬದಲಿಗೆ ಹೃದಯದ ಬಡಿತಗಳ ನಡುವೆ ಇರುವ ಅಂತರದಂತೆಯೇ ಡೊಳ್ಳಿನ ಬಡಿತದ ನಡುವೆಯೂ ನಿರ್ದಿಷ್ಟ ಅಂತರದ ಲಯ ಇದ್ದೇ ಇರುತ್ತದೆ. ಹಾಗಾಗಿ ಒಂದೇ ಪೆಟ್ಟು. ಡೊಳ್ಳು ವಾದನ ಸದೃಢ ಮೈಕಟ್ಟಿನ ಪುರುಷರಿಗಷ್ಟೇ ಮೀಸಲು ಎಂಬ ನಂಬಿಕೆ ಹಿಂದೆ ಇತ್ತು. ಈಗ ಆ ನಂಬಿಕೆ ಹುಸಿಯಾಗಿ ಮಹಿಳೆಯರ ಡೊಳ್ಳು ಕುಣಿತದ ತಂಡಗಳೂ ಸಕ್ರಿಯವಾಗಿವೆ ಮತ್ತು ಪುರುಷರ ತಂಡಗಳಷ್ಟೇ ಸಮಾನ ಗಮನ ಸೆಳೆಯುತ್ತಿವೆ.

ಡೊಳ್ಳು ಕುಣಿತದಲ್ಲಿ ಪರಂಪರಾಗತವಾದ ಪರಿಣಿತಿಯನ್ನು ಸಾಧಿಸಿರುವವರು ಕುರುಬ ಸಮುದಾಯದವರೊಬ್ಬರೇ. ಆದರೂ ದೀವರು, ನಾಯಕರು ಮತ್ತು ಉಪ್ಪಾರರು ಕೂಡ ಈ ಕಲೆಯಲ್ಲಿ ಪಾಲ್ಗೊಳ್ಳುತ್ತಾರೆ. ಶಿವಮೊಗ್ಗ ಜಿಲ್ಲೆಯ ದೀವರಂತೂ ಡೊಳ್ಳು ಮೇಳವನ್ನು ತಮ್ಮ ಆರಾಧನೆಗಳ ಕಡ್ಡಾಯ ಭಾಗವಾಗಿಸಿಕೊಂಡಿದ್ದಾರೆ. ಉತ್ತರದ ಬಿಜಾಪುರದಿಂದ ಹಿಡಿದು ಬೆಳಗಾವಿ, ಬಳ್ಳಾರಿ, ರಾಯಚೂರು, ಕಲಬುರ್ಗಿ, ಚಿಕ್ಕಮಗಳೂರು, ಧಾರವಾಡ, ಚಿತ್ರದುರ್ಗ, ಶಿವಮೊಗ್ಗ ಹಾಗೂ ತುಮಕೂರಿನವರೆಗೂ ಡೊಳ್ಳಿನ ಕುಣಿತ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ.

ಡೊಳ್ಳುವಾದನ ಬೀರೇದೇವರ ಭಜನೆಯಿದ್ದಂತೆ ಎಂದು ಹೇಳುತ್ತಾರೆ. ಬೀರೇದೇವರೆಂದರೆ ಈರೇದೇವರೆಂದೇ ಅರ್ಥ. ‘ಈರ’ ಎಂದರೆ ನೀರು. ದ್ರಾವಿಡ ಸಂಸ್ಕೃತಿಯಲ್ಲಿ ನೀರಿನ ಈರೇದೇವರೆಂದರೆ ಶಿವನೇ. ಡೊಳ್ಳಿಗೆ ಸಂಬಂಧಿಸಿದಂತೆ ಇರುವ ಜಾನಪದೀಯ ಪುರಾಣಗಳಲ್ಲಿ ಶಿವನೇ ಜಗತ್ತಿನ ಪ್ರಥಮ ಡೊಳ್ಳು ತಯಾರಕ, ವಾದಕ ಮತ್ತು ನರ್ತಕ.  ಶಿವನನ್ನು ಕುರಿತು ಸೂಜಿ ಮೊನೆಯ ಮೇಲೆ ನಿಂತು ತಪಸ್ಸು ಮಾಡಿದ ಡೊಳ್ಳು ಹೊಟ್ಟೆಯ ಡೊಳ್ಳಾಸುರನೆಂಬುವವನಿಗೆ ಶಿವ ತನ್ನನ್ನೇ ನುಂಗುವ ವರ ನೀಡಿದನಂತೆ. ಆದರೆ ಹೊಟ್ಟೆಯಲ್ಲಿನ ಶಿವನ ಭಾರ ತಡೆಯಲಾಗದೆ ಅಸುರ ಹೊರಬರುವಂತೆ ಶಿವನನ್ನು ಕೋರಿದ. ಅಸುರನ ಹೊಟ್ಟೆ ಸೀಳಿಕೊಂಡು ಹೊರಬಂದ ಶಿವ ಅಸುರನ ಡಿಂಬವನ್ನೇ ಡೊಳ್ಳು ಮಾಡಿ ಚರ್ಮ ಸುಲಿದು ಎರಡೂ ಬದಿಗೆ ಹೊಂದಿಸಿ ಕರುಳನ್ನೇ ಹಗ್ಗ ಮಾಡಿ ಬಿಗಿದು, ಕೈಗಳನ್ನೇ ಬಿದಿರು ಕೋಲಿನ ಗುಣಿ ಮಾಡಿ ಬಡಿದು ನರ್ತಿಸಿದನಂತೆ. ನಂತರ ತನ್ನ ಒಕ್ಕಲಾದ ಹಾಲುಮತದ ಕುರುಬರಿಗೆ ಶಿವ ಡೊಳ್ಳನ್ನು ದಾನ ಮಾಡಿದನಂತೆ. ಈ ಡೊಳ್ಳಾಸುರನಿಗೆ ಸಂಬಂಧಿಸಿದ ಪುರಾಣಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನ ಪಠ್ಯಗಳಲ್ಲಿದ್ದು ಕೆಲವೆಡೆ ವಿಷ್ಣುವಿನ ಅನಗತ್ಯ ಮಧ್ಯ  ಪ್ರವೇಶವೂ ಪ್ರಕ್ಷಿಪ್ತದಂತೆ ಸೇರಿಕೊಂಡಿದೆ.

ಯಾಕೆಂದರೆ ಜಾನಪದ ಸಂಸ್ಕೃತಿಯಲ್ಲಿ ಶಿವ-ಗಂಗೆ, ಗೌರಿ, ಪಾರ್ವತಿಯರ ಪ್ರಸ್ತಾಪಗಳೇ ಪ್ರಧಾನವಾಗಿ ಕಂಡುಬರುವಂತಹವು. ಜಾನಪದಕ್ಕೆ ಹೊರತಾದ ವೈದಿಕ ಮೂಲದ ವಿಷ್ಣುವಿನ ಸೇರ್ಪಡೆಗಳೆಲ್ಲವೂ ನಿಸ್ಸಂಶಯವಾಗಿಯೂ ಪ್ರಕ್ಷಿಪ್ತಗಳೇ. ಅದರೊಂದಿಗೆ ‘ಅಸುರ’ ಎಂಬುದರ ಮೂಲ ಪರ್ಷಿಯನ್ ಭಾಷೆಯ ‘ಅಹುರ’ ಎಂಬ ಪದವೇ. ಪಾರ್ಸಿಗಳ ಸರ್ವಶಕ್ತ ದೇವರೇ ಅಹುರ್ ಮಜ್ದಾ. ಆದರೆ ಭಾರತೀಯ ಆರ್ಯ ವೈದಿಕರ ಕಡುವೈರಿ ದಾಯಾದಿಗಳಾದ ಪಾರ್ಸಿಗಳ ದೈವವಾದ ಅಹುರನನ್ನೇ ದುಷ್ಟನನ್ನಾಗಿ ರೂಪಿಸಿ ಅಸುರನನ್ನಾಗಿಸಿ ಪುರಾಣ ಹೊಸೆದವರು ವೈದಿಕರೇ. ಪರ್ಷಿಯನ್ ಭಾಷೆಯಲ್ಲಿನ ‘ಹ’ಕಾರ ವೈದಿಕ ವಾಜ್ಞಯದಲ್ಲಿ ‘ಸ’ಕಾರವಾಗುತ್ತದೆ. ಹಾಗಾಗಿ ಅಹುರ ಅಸುರನಾದ. ದಕ್ಷಿಣದ ನಮ್ಮ ಜಾನಪದಕ್ಕೂ ಪಾರ್ಸಿಗಳಿಗೂ ಎಲ್ಲಿಗೆಲ್ಲಿಯ ಸಂಬಂಧ?!

ಆದರೆ ಡೊಳ್ಳಿಗೆ ಸಂಬಂಧಿಸಿದಂತೆ ಮತ್ತೊಂದು ಪುರಾಣವೂ ಇದೆ. ಅದರ ಪ್ರಕಾರ ಶಿವ- ಪಾರ್ವತಿಯರು ಜೂಜಾಡುತ್ತ ಸೋತವರು ಕೈಲಾಸ ತೊರೆದು ಯಾರಿಗೂ ಕಾಣದಂತೆ ಜೀವಿಸಬೇಕೇಂಬ ಪಣ ಕಟ್ಟಿಕೊಂಡರಂತೆ. ಜೂಜಲ್ಲಿ ಶಿವ ಸೋತ. ಪಣದಂತೆ ಶಿವ ಗವಿಯೊಂದರಲ್ಲಿ ಕಲ್ಲಾಗಿ (ಲಿಂಗ?) ಬಿದ್ದಿದ್ದನಂತೆ. ಶಿವನಿಲ್ಲದೆ ಲೋಕ ಪಾಲನೆ ಕಷ್ಟವಾದಾಗ ನಾರದ ಶಿವನನ್ನು ಪತ್ತೆ ಮಾಡಿದನಂತೆ. ಶಿವ ತನ್ನನ್ನು ಮಾಯಾರೂಪದಿಂದ ಕಾಯುತ್ತಿದ್ದ ಮಾಯಾಮೂರ್ತಿಯನ್ನು ಕೊಂದು ಅವನ ಕಳೇಬರದಿಂದ ಡೊಳ್ಳನ್ನು ಮಾಡಿದನಂತೆ. ನಾರದ ಈ ಡೊಳ್ಳನ್ನು ಬಾರಿಸುತ್ತ ‘ದೇವಿ ನಿಮ್ಮಯ ದೇವರು ಬಂದಾನ ಬನ್ನಿರೇ’ ಎಂದು ಪಾರ್ವತಿಯನ್ನು ಕರೆದನಂತೆ. ಆಗ ಪಾರ್ವತಿಯೂ ಸಂಭ್ರಮದಿಂದ ಗಂಡನನ್ನು ಸ್ವಾಗತಿಸುತ್ತ ‘ಸ್ವಾಮಿ ನಮ್ಮಯ ದೇವರು ಬಂದಾನ ಬನ್ನಿರೇ’ ಎಂದು ತನ್ನ ಸಖಿಯರನ್ನು ಕರೆದಳಂತೆ. ಈಗಲೂ ಡೊಳ್ಳಿನ ಪದಗಳು ಪ್ರಾರಂಭವಾಗುವುದು ಹೀಗೇ ಮತ್ತು ಈ ಕಾರಣಕ್ಕೇ ಎಂಬುದು ನಂಬಿಕೆ. ಈ ಪುರಾಣದಲ್ಲಿ ಶಿವ ಮಾಯೆಯನ್ನು ಕೊಲ್ಲುವುದು ಅದರ ನಿರಸ್ತಿತ್ವವನ್ನು ಡೊಳ್ಳಿನ ಮೂಲಕ ಸಾರುವುದು ಸಾಂಸ್ಕೃತಿಕವಾಗಿ ಗಮನಾರ್ಹ.

ಹೆಬ್ಬೇವು, ಹೊನ್ನೆಮರ, ತಾಳೆ ಮರಗಳಿಂದ ಎರಡೂವರೆ ಅಡಿಯಿಂದ ಮೂರುವರೆ ಅಡಿ ಉದ್ದದ ಪೀಪಾಯಿ ಆಕಾರದ ಡೊಳ್ಳಿನ ಮೈಯನ್ನು ಸಿದ್ಧಪಡಿಸಿ ಅದರ ಎಡಭಾಗಕ್ಕೆ ಆಡಿನ ಚರ್ಮವನ್ನೂ, ಬಲಭಾಗಕ್ಕೆ ಕುರಿಯ ಚರ್ಮವನ್ನೂ ಬಿಗಿಯಲಾಗುತ್ತದೆ. ಡೊಳ್ಳನ್ನು ಸೊಂಟಕ್ಕೆ ಬಿಗಿದುಕೊಂಡು ಒಂದೂವರೆ ಅಡಿ ಉದ್ದದ ಬಿದಿರು ಕೋಲಿನ ಗುಣಿಯಿಂದಲೂ ಮತ್ತು ಕೈಯಿಂದಲೂ ಡೊಳ್ಳನ್ನು ಬಾರಿಸಲಾಗುತ್ತದೆ. ಕೆಲವೆಡೆ ಒಂದು ಬದಿಗೆ ಹೋತದ ಚರ್ಮ ಮತ್ತೊಂದು ಬದಿಗೆ ಆಡಿನ ಚರ್ಮವನ್ನು ಬಳಸುವುದುಂಟು. ಬಲಬದಿಯಲ್ಲಿ ಗುಣಿಯಿಂದ ಬಾರಿಸಿದರೆ, ಎಡಬದಿಯಲ್ಲಿ ಕೈಯಿಂದಲೇ ಬಾರಿಸುವುದರಿಂದಲೂ ಮತ್ತು ಚರ್ಮಗಳಲ್ಲಿನ ವ್ಯತ್ಯಾಸದಿಂದಲೂ ಡೊಳ್ಳಿನ ಶಬ್ದ ವಿಚಿತ್ರ ನಾದ ಸಂಯೋಜನೆಯನ್ನು ಹೊಂದಿದಂತೆ ಕೇಳಿಸುತ್ತದೆ. ಕುರುಬ ಸಮುದಾಯ ಮೂಲದ ಡೊಳ್ಳು ಆ ಸಮುದಾಯದ ಕಾಯಕ ಜಗತ್ತಿನ ಕುರಿ-ಹೋತ-ಆಡುಗಳ ಚರ್ಮವನ್ನೇ ಹೊಂದುವುದು ಕಾಯಕ ಸಂಸ್ಕೃತಿಗೆ ಸಹಜವೆಂಬಂತಿದೆ.

ಡೊಳ್ಳು ಕುಣಿತದಲ್ಲಿ ಕೆಲವೊಮ್ಮೆ ಕಂಚಿನ ತಾಳ, ಹಿತ್ತಾಳೆಯ ಜಾಗಟೆ ಮತ್ತು ಕೊಳಲೂ ಇರುವುದುಂಟು. ಡೊಳ್ಳಿನ ಮೇಳವನ್ನು ‘ಒಡ್ಡಿವಾಲಗ’ ಎಂದೂ ಕರೆಯುತ್ತಾರೆ. ಮೇಳದಲ್ಲಿ ಕನಿಷ್ಟ ಹತ್ತು ಜನ ಕಲಾವಿದರಿರುತ್ತಾರೆ. ಪ್ರದರ್ಶನದಲ್ಲಿ ಕೆಲವೊಮ್ಮೆ ಮೈಗೆ ಕಂಬಳಿ ಸುತ್ತಿಕೊಳ್ಳುತ್ತಾರೆ. ದೀವರು ಬರಿಮೈಗೆ ಸೊಪ್ಪು ಕಟ್ಟಿಕೊಂಡು ಡೊಳ್ಳು ಬಾರಿಸುವುದು ರೂಢಿ. ಈಗೀಗ ಪ್ರದರ್ಶನಗಳ ಆಕರ್ಷಣೆಯ ಸಲುವಾಗಿ ಹುಲಿ ಚರ್ಮದ ವಿನ್ಯಾಸದ ವಸ್ತ್ರವನ್ನು ನಡುವಿನಿಂದ ಕೆಳಗೆ ಇಳಿಬಿಟ್ಟಂತೆ ಸುತ್ತಿಕೊಳ್ಳುವುದೂ ಉಂಟು. ಡೊಳ್ಳುಗಾರರ ಮಧ್ಯದಲ್ಲಿರುವಾತ ‘ಕಾಶಿ’ ಉಟ್ಟುಕೊಂಡು ತಾಳ ನುಡಿಸುತ್ತ ಹಾಡುತ್ತಿರುತ್ತಾನೆ. ಈತ ಮೇಳದ ಸೂತ್ರಧಾರ ಮತ್ತು ಗುರು. ಇವನ ತಾಳದ ವರಸೆಯ ಬದಲಾವಣೆಗಳೊಂದಿಗೇ ಡೊಳ್ಳು ಕುಣಿತದ ಭಂಗಿಗಳೂ ಬದಲಾಗುತ್ತಿರುತ್ತವೆ. ಡೊಳ್ಳು ನುಡಿಸುತ್ತ ಕುಣಿದವರ ಕಾಲಿನ ಗೆಜ್ಜೆಯ ಝೇಂಕಾರವೂ ಲಯದ ಗತ್ತಿಗೆ ತಕ್ಕ ಹಿನ್ನೆಲೆ ಒದಗಿಸುತ್ತದೆ.

ವೃತ್ತಾಕಾರವಾಗಿ ಸಜ್ಜುಗೊಂಡು ನಿಂತ ಡೊಳ್ಳು ಕಲಾವಿದರು ನಿಧಾನವಾಗಿ ಡೊಳ್ಳು ಬಾರಿಸುವುದರೊಂದಿಗೆ ಸುತ್ತಲು ಪ್ರಾರಂಭಿಸುತ್ತಾರೆ. ಡೊಳ್ಳಿನ ಬಡಿತ ‘ಗುಣಿ’ ಲೆಕ್ಕದಲ್ಲಿರುತ್ತದೆ. ಒಂದು ಗುಣಿಗೆ ಮೊದಲ ಹೆಜ್ಜೆ ಎನ್ನುತ್ತಾರೆ. ಬಲಬದಿಯ ಕೋಲು ಪಟ್ಟಿಗೆ ಎಡಬದಿಯ ಕೈ ಪಟ್ಟಿ ಸೇರಿದರೆ ಒಂದು ಗುಣಿ. ಇದು ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಗುಣಿ ಸಾಮಾನ್ಯವಾಗಿ ಬೆಸ ಸಂಖ್ಯೆಯಲ್ಲಿಯೇ ಇರುತ್ತದೆ. ಹಾಗಾಗಿಯೇ ಡೊಳ್ಳಿನ ಬಡಿತದ ದನಿ ಹೃದಯದ ಬಡಿತದಂತಿದ್ದರೂ ವಿರುದ್ಧ ಲಯದಲ್ಲಿ ಕೇಳಿಸುತ್ತದೆ. ಆದರೆ ಏಳು ಗುಣಿಯನ್ನು ಡೊಳ್ಳು ಕಲಾವಿದರು ಅಶುಭವೆಂಬ ಕಾರಣಕ್ಕೆ ಬಾರಿಸುವುದಿಲ್ಲ.

ಕುಕ್ಕರಗಾಲಲ್ಲಿ ಕೂತು ಡೊಳ್ಳು ಬಾರಿಸುತ್ತ ಕುಪ್ಪಳಿಸುವ, ಕೂತು ಪಾಲಿ, ಲಾಗ ಹಾಕುವುದು, ಡೊಳ್ಳು ಬಾರಿಸುತ್ತಲೇ ನೆಗೆಯುವುದು, ಎಡಗಾಲು ಮಂಡಿಯೂರಿ ಬಾರಿಸುವುದು, ಮರಗಾಲು ಕಟ್ಟಿಕೊಂಡು ಡೊಳ್ಳು ಬಡಿವುದು, ಬಾಯಲ್ಲಿ ನೀರಿನ ಕೊಡ ಕಚ್ಚಿಕೊಂಡು ಡೊಳ್ಳು ಬಾರಿಸುತ್ತ ನೀರು ಚೆಲ್ಲುವುದು, ಅಂಗಾತ ಮಲಗಿ ಡೊಳ್ಳು ಬಾರಿಸುವುದು, ಡೊಳ್ಳಿನ ಮೇಲೆ ಚಿಕ್ಕ ಡೊಳ್ಳನ್ನಿಟ್ಟು ಎರಡನ್ನೂ ಒಂದಾದ ಮೇಲೊಂದರಂತೆ  ಧ್ವನಿ ವೈವಿಧ್ಯತೆಗಾಗಿ ಬಾರಿಸುವುದು, ಡೊಳ್ಳಿನ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಬಾರಿಸುವುದು ಹೀಗೆ ವೈವಿಧ್ಯಮಯ ಶೈಲಿಗಳಿವೆ. ಒಂದ್ಹೆಜ್ಜೆ ಕುಣಿತ, ಎರಡ್ಹೆಜ್ಜೆ ಕುಣಿತ, ಮಂಡಲ ಕುಣಿತ, ಜೇಡುಪಾಲಿ ಎಂಬ ಕುಣಿತದ ವೈವಿಧ್ಯತೆಗಳೂ ಉಂಟು. ಡೊಳ್ಳು ಕುಣಿತದಲ್ಲಿ ಲವಳ ಹಾಕುವುದು, ಅಂದರೆ ವೃತ್ತಾಕಾರದ ಸಣ್ಣ ಹಲಗೆಯ ಕೊರೆದ ರಂಧ್ರಗಳಿಗೆ ಜೋಡಿಸಿದ ನೂಲಿನ ಹಗ್ಗಗಳನ್ನು ಎಡಗೈಯಲ್ಲಿ ಹಿಡಿದ ಕಲಾವಿದರು ಕುಣಿಯುತ್ತ ಜಡೆಕೋಲಾಟದಲ್ಲಿನಂತೆ, ಆದರೆ ಮೇಲಿನಿಂದ ಇಳಿಬಿದ್ದಂತಿರದೆ, ಹರಡಿಕೊಂಡಂತೆ ಜಡೆ ಹೆಣೆದು ಬಿಚ್ಚುವ ವೈಖರಿಯೂ ಉಂಟು. ಹಾಲುಮತ ಪುರಾಣ, ಮೈಲಾರಲಿಂಗನ ಕಥೆ, ಅನಸೂಯ ಕಥೆ, ಬೀರಲಿಂಗೇಶ್ವರನ ಮಹಿಮೆ, ರೇವಣ ಸಿದ್ಧೇಶ್ವರ, ಭಕ್ತ ಮಡಿವಾಳ, ಡೊಳ್ಳು ಮರದ ಪದ, ಕರಿಯಪ್ಪನ ಪದ, ಹರಳಯ್ಯನ ಪದ, ಕುಂಬಾರ ಗುಂಡಯ್ಯ, ಪಾಂಡವರ ಪದ, ಬಸವಣ್ಣನವರ ಚರಿತ್ರೆ, ತಿರುನೀಲಕಂಠ, ಪದ್ಮಾದೇವಿ ಮಂತಾಗಿ ಹಲವು ಕಥನಗಳನ್ನು ದೀರ್ಘಕಾಲದವರೆಗೂ ಡೊಳ್ಳು ಕಲಾವಿದರು ಹಾಡಬಲ್ಲರು.

 

 

 

 

ಇತ್ತೀಚಿನ ನವೀಕರಣ​ : 13-06-2023 01:19 PM ಅನುಮೋದಕರು: Creator


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080