ಅಭಿಪ್ರಾಯ / ಸಲಹೆಗಳು

ಹೆಜ್ಜೆ ಜಾಡು

ಕರ್ನಾಟಕ ಜಾನಪದ ಅಕಾಡೆಮಿ ಇತಿಹಾಸ 

ಭಾರತೀಯ ಸಂಸ್ಕೃತಿ ಎಂದರೆ ಕೇವಲ ವೈದಿಕ ಸಂಸ್ಕೃತಿ ಎಂದು ಬಿಂಬಿಸುತ್ತ ಬಂದಿರುವ ಅಪಾಯವನ್ನು ಎಲ್ಲರೂ ಬಲ್ಲರು. ಆದರೆ ಅದೇ ಭಾರತೀಯ ಸಂಸ್ಕೃತಿಯ ಆಳದಲ್ಲಿ ಬಹುಸಂಖ್ಯಾತ ಅನಕ್ಷರಸ್ಥ ಸಮುದಾಯಗಳು ಸದ್ದಿಲ್ಲದೆ ಸಾವಿರಾರು ವರ್ಷಗಳಿಂದಲೂ ಮೌಖಿಕ ಪರಂಪರೆಯ ಸಂಸ್ಕೃತಿಯನ್ನು ಪೋಷಿಸುತ್ತ ಬಂದಿರುವುದರ ಬಗ್ಗೆ ಕಳೆದ ಶತಮಾನದ ಆದಿಭಾಗದಿಂದಲೇ ಗಮನ ಸೆಳೆಯುವ ಪ್ರಯತ್ನಗಳು ನಡೆದಿವೆ. ಶ್ರಮಜೀವಿಗಳನ್ನು ಈ ನೆಲದಲ್ಲಿ ಹೇಗೆ ನಿಕೃಷ್ಟವಾಗಿ ಕಾಣಲಾಯಿತೋ, ಹಾಗೆಯೇ ಅವರ ಹಾಡು-ಹಸೆ, ಕಲೆ-ಕಾವ್ಯಾದಿಗಳನ್ನು ಕೂಡ ನಿಕೃಷ್ಟವಾಗಿ ಕಾಣುತ್ತಲೇ ಬಂದಿದ್ದು ಸಂಸ್ಕೃತಿ ನೆಲೆಯ ಅತ್ಯಂತ ದುರಂತದ ಸಂಗತಿಯಾಗಿದೆ. ಹಾಗೆ ನೋಡಿದರೆ ಭಾರತದ ಬಹುಸಂಖ್ಯಾತರ ಮೂಲ ಸಂಸ್ಕೃತಿ ಎಂದರೆ ಅದು ಬಹುಮುಖಿಯಾದ ಜನಪದ ಸಂಸ್ಕೃತಿಯೇ. ನಾವು ಇಲ್ಲಿಯೇ ನೆನಪಿಸಿಕೊಳ್ಳಬಹುದಾದ ಮತ್ತೊಂದು ಅಂಶವೇನೆಂದರೆ ಇಡೀ ಮನುಕುಲದ ಆದಿ ಸಂಸ್ಕೃತಿಯೇ ಜಾನಪದ ಸಂಸ್ಕೃತಿ. ಇಡೀ ಜಗತ್ತಿನ ಯಜಮಾನ ಸಂಸ್ಕೃತಿಯ ವಾರಸುದಾರರ ಜೀವ, ಬೆನ್ನೆಲುಬುಗಳು ಹೇಗೆ ಕಾಯಕ ಜೀವಿಗಳ ಶ್ರಮ, ಬೆವರುಗಳಿಂದಲೇ ಉಳಿದು ಬಂದಿದೆಯೋ ಹಾಗೆಯೇ ಅವರ ಸಂಸ್ಕೃತಿ-ಧರ್ಮ – ಕಲೆಗಳ ಮೂಲಸತ್ವ ಕೂಡ ಜಾನಪದ ಸಂಸ್ಕೃತಿಯಿಂದಲೇ ಎರವಲು ಪಡೆದದ್ದು. ಜಗತ್ತಿನ ಮೊಟ್ಟಮೊದಲ ಕಾವ್ಯ ಹುಟ್ಟಿದ್ದು ಆಸ್ಟ್ರೇಲಿಯಾದ ಮಾವೋರಿ ಆದಿವಾಸಿಗಳ ಸಾಂಗ್ ಲೈನ್ ಗಳ ಮೂಲಕ. ಅದು ಆದಿವಾಸಿ ತಲೆಮಾರುಗಳು ಜತನವಾಗಿ ತಮ್ಮ ನೆನಪಿನ ಮೂಲಕವೇ ಉಳಿಸಿಕೊಂಡು ಬಂದ ಪ್ರಾಚೀನ ಕಾವ್ಯ –ಹಾಡು ಮತ್ತು ಸಂಗೀತವಾಗಿದೆ. ಮಾನವ ಇತಿಹಾಸದ ಅರಿವಿರುವ ಯಾರೇ ಆದರೂ ಆದಿವಾಸಿಗಳ ಸಂಸ್ಕೃತಿಯನ್ನು ಮಾತ್ರವೇ ‘ಸನಾತನ’ ವೆಂದು ಕರೆಯಬಲ್ಲರು. ಉಳಿದಂತೆ ಜನಾಂಗೀಯ ಊರ್ಮಿಯ ಬಡಬಡಿಕೆಗಳೆಲ್ಲವೂ ಕೇವಲ ಹುಸಿ ಮಾತುಗಳು.

 

ಇಂದಿಗೂ ಕರ್ನಾಟಕ ತನ್ನ ಜಾನಪದ ಸಂಸ್ಕೃತಿಯ ವೈವಿಧ್ಯತೆ ಮತ್ತು ಪ್ರಾಚೀನತೆಯ ದೃಷ್ಟಿಯಿಂದ ಅತ್ಯಂತ ದಟ್ಟ ಶ್ರೀಮಂತಿಕೆಯನ್ನು ಹೊಂದಿದೆ. ಆದಿಮಾನವನ ವಲಸೆ ಸಂಸ್ಕೃತಿಯ ಸುದೀರ್ಘ ಯಾನದ ಅನನ್ಯ ಅಂಶಗಳನ್ನು ಒದಗಿಸಿಕೊಡಬಲ್ಲ ಆಕರವೆನಿಸಬಹುದಾದ ಅನೇಕ ಆಚರಣೆಗಳು ನಮ್ಮ ಜನಪದ ಸಂಸ್ಕೃತಿಯಲ್ಲಿ ಹುದುಗಿವೆ. ಆದರೆ ಅದರ ಗಂಭೀರ ಅಧ್ಯಯನಗಳಿನ್ನೂ ನಡೆದೇ ಇಲ್ಲವೆನ್ನಬಹುದು. ಜಾನಪದ ಸಂಸ್ಕೃತಿಯೆಂದರೇನೇ ಜನಪದರ ಆಚರಣಾತ್ಮಕ ಬದುಕಿನ ಸೃಜನಾತ್ಮಕ ಅಭಿವ್ಯಕ್ತಿಯೆಂದಾಗಿದೆ. ಅವರ ಬದುಕಿನ ಎಲ್ಲ ಸೂಕ್ಷ್ಮ ವಿವರಗಳ, ಸಂಸ್ಕೃತಿ ಸಂಗತಿಗಳ ಕನ್ನಡಿ ಪ್ರತಿಬಿಂಬವೇ ಜಾನಪದ. ಜೀವನ ಪ್ರೀತಿಯೊಂದೇ ಅದರ ಉದ್ದೇಶ.

ಕರ್ನಾಟಕದ ಜನಪದ ಸಂಸ್ಕೃತಿಯನ್ನು ಮೊಟ್ಟಮೊದಲು ಜಗತ್ತಿಗೆ ಪರಿಚಯಿಸಿದವರು ಪಾಶ್ಚಿಮಾತ್ಯ ವಿದ್ವಾಂಸರೇ. ಎರಡು ಶತಮಾನಗಳ ಹಿಂದೆಯೇ ಅಂದರೆ 1800 ರ ಹೊತ್ತಿಗೆ ಬ್ರಿಟಿಷ್ ಸೈನ್ಯದ ಜೊತೆ ಬಂದ ಜಾನ್ ಲೇಡನ್ ಟಿಪ್ಪುವಿಗೆ ಸಂಬಂಧಿಸಿದ ಲಾವಣಿಗಳನ್ನು ಸಂಗ್ರಹಿಸಿದ. ನಂತರ 1819ರಲ್ಲಿ ಅಬ್ಬೆ ದುಬಾಯ್ ತನ್ನ ‘ಹಿಂದು ಮ್ಯಾನರ್ಸ್, ಕಸ್ಟಮ್ಸ್ ಅಂಡ್ ಸೆರಿಮೊನೀಸ್’ ಪುಸ್ತಕದಲ್ಲಿ ಜನಪದ ನಂಬಿಕೆ, ಕಥೆ ಹಾಗೂ ಗಾದೆಗಳನ್ನು ಉಲ್ಲೇಖಿಸಿದ್ದಾನೆ. ಕನ್ನಡ ಜಾನಪದದ ಈ ಕೆಲಸವನ್ನು ನಂತರ ಮೋಗ್ಲಿಂಗ್, ಗೋವರ್, ಪ್ಲೀಟ್, ಕಿಟಲ್ ಮುಂತಾದವರು ಮುಂದುವರೆಸಿದರು. ಎ.ಸಿ ಬರ್ಗಲ್, ಆರ್.ಸಿ. ಟೆಂಪಲ್, ಬಿ.ಎಲ್. ರೈಸ್, ಫರಿಬ್ರದರ್ಸ್ ಮುಂತಾದವರು ಅಧ್ಯಯನ ಮತ್ತು ಸಂಪಾದನೆಗಳಲ್ಲಿ ಆಸಕ್ತಿ ತೋರಿದರು. ಅಂದರೆ ಬ್ರಿಟನ್ ಮತ್ತು ಜರ್ಮನ್ ವಿದ್ವಾಂಸರು ಕನ್ನಡದ ಜಾನಪದ ವಲಯಕ್ಕೆ ಪ್ರವೇಶಿಸುವವರೆಗೂ, ಆವರೆಗಿನ ಮತ್ತು ಅದೇ ಸಂದರ್ಭದ ಇಲ್ಲಿನ ವಿದ್ಯಾವಂತರೆನಿಸಿಕೊಂಡಿದ್ದ ಅಕ್ಷರಸ್ಥ ವರ್ಗ ತಮ್ಮ ಸುತ್ತ ಪರಿಸರದ ಬಹುಸಂಖ್ಯಾತರ ಜಾನಪದ ಸಂಸ್ಕೃತಿಯನ್ನು ಹೇಗೆ ಅಸ್ಪೃಶ್ಯತೆಗೆ ಈಡುಮಾಡಿದ್ದರು ಮತ್ತು ಎಂಥ ಅವಗಣೆನೆಗೆ ಒಳಗು ಮಾಡಿದ್ದರು ಎಂಬ ಮುಖ್ಯ ಮಾಹಿತಿಯೂ ಇದರಿಂದ ಲಭಿಸಬಲ್ಲದು. ಕವಿರಾಜ ಮಾರ್ಗ ಜನಪದರನ್ನು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂಬ ಪ್ರಶಂಸಿಸಿದ್ದರೆ ಮಧುರ ಕವಿ ‘ಗೊರವರ ಡುಂಡುಚಿಯೇ ಬೀದಿವರಿಯೆ ಬೀರನ ಕಥೆಯೇ’ ಎಂದು ಹೀನೈಸಿರುವುದೂ ಉಂಟು.

1924ರಲ್ಲಿ ನಡಕೇರಿಯಂಡ ಚಿಣ್ಣಪ್ಪ ಅವರು ‘ಪಟ್ಟೋಲೆ ಪಳಮೆ’ ಎಂಬ ಕೊಡವರ ಜಾನಪದ ಸಂಸ್ಕೃತಿಯ ಕೃತಿ ಹೊರತಂದರು. 1931 ರಿಂದಾಚೆಗೆ ಹಲಸಂಗಿ ಗೆಳೆಯರಾದ ಮಧುರ ಚೆನ್ನ, ಸಿಂಪಿಲಿಂಗಣ್ಣ, ಕಾಪಸೆ ರೇವಪ್ಪ ಅವರು ‘ಗರತಿಯ ಹಾಡು’ ಪ್ರಕಟಿಸಿದರು. ಮಲ್ಲಿಗೆ ದಂಡೆ, ಜೀವನ ಸಂಗೀತ ಎಂಬ ಸಂಕಲನಗಳೂ ಜನಪ್ರಿಯವಾದವು. ಪಿ. ದೂಲಾಸಾಹೇಬ, ಮಾಸ್ತಿ, ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಅರ್ಚಕ ರಂಗಸ್ವಾಮಿ, ಕರೀಂಖಾನ್. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಶ್ರೀಕಂಟೇಶ ಗೌಡ, ಚಿನ್ನಪ್ಪ, ಎಚ್.ಎಲ್. ನಾಗೇಗೌಡ, ಜೀಶಂಪ, ಬಿ.ಎಸ್. ಗದ್ದಗೀಮಠ ಮುಂತಾದವರು ಜನಪದ ಸಾಹಿತ್ಯದ ತೇರನ್ನು ಮುನ್ನಡೆಸಿದರು. 1967ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದ ಪ್ರಥಮ ‘ಕರ್ನಾಟಕ ಜನಪದ ಸಾಹಿತ್ಯ ಸಮ್ಮೇಳನ’ ಗಮನಸೆಳೆಯಿತು. ಆಗ ಪ್ರಕಟಗೊಂಡ ‘ಹೊನ್ನ ಬಿತ್ತೇವು ಹೊಲಕೆಲ್ಲ’ ಎಂಬ ಕೃತಿ ಜಾನಪದ ಅಧ್ಯಯನದ ಆರಂಭದ ಒಂದು ಆಕರ ಗ್ರಂಥವಾಯಿತು. 1972ರಲ್ಲಿ ಶಿವಮೊಗ್ಗೆಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಜಾನಪದ ಗೋಷ್ಠಿಯ ಅಧ್ಯಕ್ಷರಾಗಿದ್ದ ಎಚ್.ಎಲ್. ನಾಗೇಗೌಡರು ಜಾನಪದಕ್ಕೆ ಪ್ರತ್ಯೇಕ ಅಕಾಡೆಮಿಯ ಅಗತ್ಯವಿರುವುದರ ಬಗ್ಗೆ ಮೊಟ್ಟ ಮೊದಲು ಪ್ರಸ್ತಾಪಿಸಿದರು. ನಂತರದ ಹತ್ತು ವರ್ಷಗಳ ಕಾಲ ಜಾನಪದ ಅಕಾಡೆಮಿಯ ರಚನೆಗೆ ನಾಡಿನಾದ್ಯಂತ ಒತ್ತಾಯ, ಬೇಡಿಕೆಗಳು ಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 1980ರ ನವೆಂಬರ್ 3 ರಂದು ‘ ಕರ್ನಾಟಕ ಜಾನಪದ ಮತ್ತು ಯಕ್ಷಗಾನ’ದ ಹೆಸರಿನಲ್ಲಿ ಪ್ರತ್ಯೇಕ ಅಕಾಡೆಮಿಯನ್ನು ಅಸ್ತಿತ್ವಕ್ಕೆ ತಂದಿತು. ಎಚ್.ಎಲ್. ನಾಗೇಗೌಡ ಅವರೇ ಜಾನಪದ ಅಕಾಡೆಮಿಯ ಮೊದಲೆರಡು ಅವಧಿಗೂ ಅಧ್ಯಕ್ಷರಾಗಿದ್ದರು.

1980 ರಿಂದ 2017ರವರೆಗೂ ಒಟ್ಟು ಹತ್ತು ಮಂದಿ ಅಧ್ಯಕ್ಷರು ಕರ್ನಾಟಕ ಜಾನಪದ ಅಕಾಡೆಮಿಯನ್ನು ಸಮರ್ಥವಾಗಿ ಮುನ್ನಡೆಸುತ್ತ ಬಂದಿದ್ದಾರೆ. ಆಧುನಿಕ ಪೀಳಿಗೆಗೆ ಜನಪದ ಕಲೆಗಳನ್ನು ಕಲಿಸುವ ಗುರುಶಿಷ್ಯ ಪರಂಪರೆಯ ಕಾರ್ಯಕ್ರಮಗಳು, ಜಾನಪದ ಸಾಹಿತ್ಯ- ಸಂಸ್ಕೃತಿ ಮತ್ತು ಸಂಶೋಧನೆಗಳ ಕುರಿತಂತಹ ನೂರಾರು ರೀತಿಯ ಶಿಬಿರಗಳು, ಫೆಲೋಶಿಪ್ ಗಳು, ವಿಚಾರ ಸಂಕಿರಣಗಳು, ಜಾನಪದ ಕಲೆ- ಸಾಹಿತ್ಯದ ಕುರಿತ ನೂರಾರು ಪುಸ್ತಕಗಳ ಪ್ರಕಟಣೆ, ಜಾನಪದ ಕಲಾವಿದರ ಬದುಕಿಗೆ ಆರ್ಥಿಕವಾಗಿ ನೆರವಾಗುವಂತಹ ಯೋಜನೆಗಳು, ಜಾನಪದ ಸಂಸ್ಕೃತಿಯನ್ನು ಜನಪ್ರಿಯಗೊಳಿಸುವಂತಹ ಕಾರ್ಯಕ್ರಮಗಳು, ಅಶಕ್ತ ಕಲಾವಿದರಿಗೆ ಮಾಸಾಶನ, ಕಲಾವಿದರಿಗೆ ವಾದ್ಯ ಪರಿಕರಗಳನ್ನು ಒದಗಿಸುವ ಮೂಲಕ ನೆರವು ನೀಡುವುದು, ಹಿರಿಯ ಪ್ರತಿಭಾವಂತ ಕಲಾವಿದರಿಗೆ ಗೌರವ ಪ್ರಶಸ್ತಿ, ವಿದ್ವಾಂಸರಿಗೆ ಗೌರವ, ರಾಜ್ಯ ಮಟ್ಟದ ಜಾನಪದೀಯ ಸಮಾವೇಶಗಳನ್ನು ಸಂಘಟಿಸುವಂತಹ ಹತ್ತಾರು ಬಗೆಯ ಪ್ರಯತ್ನಗಳ ಮೂಲಕ ಜಾನಪದ ಅಕಾಡೆಮಿ ಕರ್ನಾಟಕ ಜಾನಪದ ವಲಯವನ್ನು ಬಲಪಡಿಸುವುದರೊಂದಿಗೆ, ಸಮಾಜದೊಂದಿಗೆ ಅರ್ಥಪೂರ್ಣ ಸಂವಾದವನ್ನು ನಡೆಸುವ ಸುದೀರ್ಘ ಪ್ರಯೋಗಗಳನ್ನು ನಡೆಸುತ್ತಲೇ ಬಂದಿದೆ.

2007 ರಲ್ಲಿ ಸರ್ಕಾರ ಕರಾವಳಿ ಯಕ್ಷಗಾನ ಪ್ರಕಾರಗಳಾದ ತೆಂಕುತಿಟ್ಟು, ಬಡಗುತಿಟ್ಟು ಯಕ್ಷಗಾನ ಹಾಗೂ ಬಯಲು ಸೀಮೆಯ ಮೂಡಲಪಾಯ ಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಕೃಷ್ಣ ಪಾರಿಜಾತ, ರಾಧಾನಾಟ, ತೊಗಲುಗೊಂಬೆ ಮತ್ತು ಸೂತ್ರದ ಗೊಂಬೆಯಾಟಗಳನ್ನು ಒಳಗೊಂಡಂತೆ ಪ್ರತ್ಯೇಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯನ್ನು ಸ್ಥಾಪಿಸಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಹೊಸ ಅಸ್ತಿತ್ವದೊಂದಿಗೆ ರೂಪುಗೊಂಡು ಕಾರ್ಯೋನ್ಮುಖವಾಯಿತು. 2006ರಲ್ಲೇ ಜಾನಪದ ಅಕಾಡೆಮಿ ತನ್ನ ಸಾಂಸ್ಕೃತಿಕ ನೀತಿಯನ್ನು ರೂಪಿಸಿ, ಹಲವು ಪರಿಷ್ಕರಣೆಗಳೊಂದಿಗೆ ಆ ದಿಕ್ಕಿನಲ್ಲಿ ಹೆಜ್ಜೆ ಹರಿಸುತ್ತಿದೆ. 

ಇತ್ತೀಚಿನ ನವೀಕರಣ​ : 04-09-2021 12:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಜಾನಪದ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080